ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ ಬಾಬು ಮನೆ ಮೇಲೆ ಐ.ಟಿ ದಾಳಿ| 5,000 ರೇಷ್ಮೆ ಸೀರೆ, 2,000 ಡಿ.ಡಿ ವಶ

Last Updated 20 ಏಪ್ರಿಲ್ 2023, 3:10 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಾಝಿಯಾ ತರನ್ನುಮ್‌ ಅವರ ಪತಿ, ಉದ್ಯಮಿ ಯೂಸುಫ್‌ ಷರೀಫ್‌ ಅಲಿಯಾಸ್‌ ಕೆಜಿಎಫ್‌ ಬಾಬು ಮನೆ ಮೇಲೆ ಬುಧವಾರ ದಾಳಿ ನಡೆಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ತಲಾ ₹ 5 ಸಾವಿರ ಬೆಲೆಯ ಐದು ಸಾವಿರ ರೇಷ್ಮೆ ಸೀರೆಗಳು ಹಾಗೂ ತಲಾ ₹ 1,105 ಮೌಲ್ಯದ ಎರಡು ಸಾವಿರ ಡಿಮಾಂಡ್ ಡ್ರಾಫ್ಟ್‌ಗಳನ್ನು (ಡಿ.ಡಿ) ವಶಪಡಿಸಿಕೊಂಡಿದ್ದಾರೆ.

ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆ ವ್ಯಾಪ್ತಿ ಯಲ್ಲಿರುವ ಮಿಲ್ಲರ್ಸ್‌ ರಸ್ತೆಯಲ್ಲಿರುವ ಬಾಬು ಅವರ ಮನೆ ‘ರುಕ್ಸಾನಾ ಪ್ಯಾಲೇಸ್‌’ ಮೇಲೆ ಬುಧವಾರ ಬೆಳಿಗ್ಗೆಯೇ ದಾಳಿಮಾಡಿದ ಐ.ಟಿ ಅಧಿಕಾರಿಗಳ ತಂಡ, ರಾತ್ರಿಯವರೆಗೂ ಶೋಧ ನಡೆಸಿತು. ಮನೆಯ ಕೋಣೆ ಯೊಂದರಲ್ಲಿ ರೇಷ್ಮೆ ಸೀರೆಗಳು ಹಾಗೂ ಬಾಬು ನೇತೃತ್ವದ ಉಮ್ರಾಹ್‌ ಫೌಂಡೇಷನ್‌ನಿಂದ ಚಿಕ್ಕಪೇಟೆ ಕ್ಷೇತ್ರದ ಮತದಾರರ ಹೆಸರಿಗೆ ಪಡೆದಿದ್ದ ತಲಾ ₹ 1,105 ಮೊತ್ತದ 2,000 ಡಿ.ಡಿಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸೀರೆ ಮತ್ತು ಡಿ.ಡಿಗಳ ಜತೆಗೆ ಬಾಬು ಭಾವಚಿತ್ರವುಳ್ಳ ಚುನಾವಣಾ ಪ್ರಚಾರ ಸಾಮಗ್ರಿಗಳನ್ನೂ ದಾಸ್ತಾನು ಮಾಡಲಾಗಿತ್ತು. ಮತದಾರರಿಗೆ ಆಮಿಷ ಒಡ್ಡಲು ಸೀರೆ ಹಾಗೂ ಡಿ.ಡಿಗಳನ್ನು ದಾಸ್ತಾನು ಮಾಡಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಸೀರೆಗಳ ದಾಸ್ತಾನಿಗೆ ಸಂಬಂಧಿಸಿ ದಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳೂ ಬಾಬು ಮನೆಗೆ ಭೇಟಿ ನೀಡಿ ತನಿಖೆ ಆರಂಭಿ ಸಿದ್ದಾರೆ. ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ಜಿಎಸ್‌ಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಾಬು ಸಿದ್ಧತೆ ನಡೆಸಿದ್ದರು.

ಕಾಂಗ್ರೆಸ್‌ ಟಿಕೆಟ್‌ ದೊರೆಯದು ಎಂಬುದು ಖಾತರಿಯಾಗುತ್ತಿದ್ದಂತೆ ಜೆಡಿಎಸ್‌ ವರಿಷ್ಠರನ್ನು ಸಂಪರ್ಕಿಸಿ, ಆ ಪಕ್ಷದ ಟಿಕೆಟ್‌ಗಾಗಿ ಪ್ರಯತ್ನಿಸಿ
ದ್ದರು. ಅಲ್ಲಿಯೂ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದರಿಂದ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು.

ಪತಿ ₹ 1,600 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಶಾಝಿಯಾ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಘೋಷಿಸಿದ್ದರು.

ಚಿಕ್ಕಪೇಟೆ ಕ್ಷೇತ್ರದ ಮತದಾರರಿಗೆ ಹಲವು ದಿನಗಳಿಂದ ಉಡುಗೊರೆಗಳನ್ನು ನೀಡುತ್ತಿದ್ದರು. ಮತದಾರರಿಗೆ ಅಂಚೆ ಮೂಲಕ ಡಿ.ಡಿಗಳನ್ನು ಕಳುಹಿಸು ತ್ತಿರುವ ಮಾಹಿತಿ ಆದಾಯ ತೆರಿಗೆ ಅಧಿಕಾರಿಗಳಿಗೆ ಲಭಿಸಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಮುಖಂಡನ ಮನೆ ತಪಾಸಣೆ

ಚಾಮರಾಜನಗರ: ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರಿಕಲ್ಲು ಉದ್ಯಮಿ ವೃಷಭೇಂದ್ರಪ್ಪ ಅವರ ಬೈಕ್ ಶೋ ರೂಂ ಹಾಗೂ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾ ಅಧಿಕಾರಿಗಳು ಬುಧವಾರ ಬೆಳಿಗ್ಗೆ ತಪಾಸಣೆ ನಡೆಸಿದರು.

ಮಂಗಳೂರು ಮತ್ತು ಮೈಸೂರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳ ತಂಡ ಚಾಮರಾಜನಗರದ ಜೋಡಿ ರಸ್ತೆಯಲ್ಲಿರುವ ಶೋ ರೂಂ ಹಾಗೂ ಭ್ರಮರಾಂಬ ಬಡಾವಣೆಯಲ್ಲಿರುವ ನಿವಾಸದಲ್ಲಿ ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT