ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರ ವಿಶೇಷಾಧಿಕಾರ: ಬಿಜೆಪಿ ಸಂಭ್ರಮ; ಕಾಂಗ್ರೆಸ್‌ ವಿರೋಧ

Last Updated 5 ಆಗಸ್ಟ್ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ಮತ್ತು 35(ಎ) ವಿಧಿಗಳನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ನಗರದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಜಯಘೋಷ ಕೂಗಿದರು. ಆದರೆ, ಕೇಂದ್ರದ ಈ ನಡೆಗೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ನಿರ್ಧಾರ ದಿಟ್ಟ ಮತ್ತು ಐತಿಹಾಸಿಕ ಎಂದು ಬಿಜೆಪಿ ನಾಯಕರು ಶ್ಲಾಘಿಸಿದ್ದಾರೆ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಇಡೀ ಜಗತ್ತಿಗೆ ದೃಢಪಡಿಸುವ ಮಹತ್ವದ ನಿರ್ಣಯ ಇದೆಂದು ಬಣ್ಣಿಸಿದ್ದಾರೆ. ಏಕತೆಗಾಗಿ ನಿರಂತರ ಧ್ವನಿ ಎತ್ತಿದ್ದ ಡಾ. ಶಾಮ್ ಪ್ರಸಾದ್ ಮುಖರ್ಜಿ ಅವರಿಗೆ ಈ ನಿರ್ಧಾರದ ಗೆಲುವು ಸಲ್ಲಿಸಬೇಕು ಎಂದು ಕಮಲ ಪಕ್ಷದ ನಾಯಕರು ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಮುಖಂಡರಾದ ಸಿ.ಟಿ‌. ರವಿ, ತೇಜಸ್ವಿನಿ ಗೌಡ, ತಮ್ಮೇಶ್ ಗೌಡ, ಆನಂದ್ ಇದ್ದರು. ‘68 ವರ್ಷಗಳಿಂದ ಭಾರತವೇ ಬೇರೆ, ಕಾಶ್ಮೀರವೇ ಬೇರೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಕಾಂಗ್ರೆಸ್ಸಿನ ಪ್ರಮಾದದ ಪರಿಣಾಮ ಕಾಶ್ಮೀರ ಪ್ರತ್ಯೇಕತೆ, ಉಗ್ರರ ಸ್ಥಳವಾಗಿ ಬದಲಾಯಿತು. ಕಾಂಗ್ರೆಸ್ ಮಾಡಿದ್ದ ಐತಿಹಾಸಿಕ ಪ್ರಮಾದವನ್ನು ಬಿಜೆಪಿ ನೇತೃತ್ವದ ಸರ್ಕಾರ ಸರಿ‌ ಮಾಡಿದೆ’ ಎಂದು ಸಿ.ಟಿ. ರವಿ ಹೇಳಿದರು.

ಬಿಜೆಪಿ ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಮಲ್ಲೇಶ್ವರ ವೃತ್ತದಲ್ಲಿರುವ ಕುವೆಂಪು ಪ್ರತಿಮೆ ಬಳಿ ವಿಜಯೋತ್ಸವ ನಡೆಯಿತು. ರಾಜಭವನದಲ್ಲಿ ರಾಷ್ಟ್ರೀಯ ಮಿಲಿಟರಿ ಸ್ಮಾರಕದ ಬಳಿ ಹಮ್ಮಿಕೊಂಡ ಸಂಭ್ರಮಾಚರಣೆಯಲ್ಲಿ ವಿಧಾನಪರಿಷತ್‌ ಬಿಜೆಪಿ ಸದಸ್ಯರಾದ ಲೆಹರ್‌ ಸಿಂಗ್‌ ಮತ್ತು ವೈ.ಎ. ನಾರಾಯಣಸ್ವಾಮಿ ಭಾಗವಹಿಸಿದರು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ವಕೀಲರ ಪ್ರಕೋಷ್ಠದ ಕಾರ್ಯಕರ್ತರು ಸಂಭ್ರಮಿಸಿದರೆ, ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿರುವ ಮಯ್ಯಾಸ್‌ ಹೋಟೆಲ್‌ ಮುಂಭಾಗದಲ್ಲಿ 'ಟೀಂ ತೇಜಸ್ವಿ' ತಂಡದ ಸದಸ್ಯರು ವಿಜಯೋತ್ಸವ ಆಚರಿಸಿದರು.

ಕಾಂಗ್ರೆಸ್‌ ವಿರೋಧ: ಕೇಂದ್ರದ ‌ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ಇದು ಅತ್ಯಂತ ಸೂಕ್ಷ್ಮ ವಿಚಾರ. ಕೇಂದ್ರ ಸರ್ಕಾರ ತನ್ನ ಎಲ್ಲ ಶಕ್ತಿಯನ್ನು ಬಳಸಿಕೊಂಡು ದುಸ್ಸಾಹಸ ಮಾಡಿ ಜಮ್ಮು ಕಾಶ್ಮೀರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ವಿಚಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಕ್ರಮವನ್ನು ಖಂಡಿಸಿ ಅಖಿಲ ಭಾರತ ಮಟ್ಟದಲ್ಲಿ ಆಗಸ್ಟ್‌ 7ರಂದು ಪ್ರತಿಭಟನೆ ನಡೆಸಲು ಎಡಪಕ್ಷಗಳು ನೀಡಿರುವ ಕರೆಗೆ ಬೆಂಬಲ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ರದ್ಧತಿಗೆ ವಿರೋಧ: ‘ಸಂವಿಧಾನದ 370 ಮತ್ತು 35(ಎ) ವಿಧಿಗಳನ್ನು ರದ್ದುಪಡಿಸಬಾರದು. ಜಮ್ಮು ಕಾಶ್ಮೀರದಲ್ಲಿ ಹೇರಿರುವ ಮಿಲಿಟರಿ ದಿಗ್ಬಂಧನವನ್ನು ಹಿಂತೆಗೆದುಕೊಳ್ಳಬೇಕು. ಈ ರಾಜ್ಯದ ಭವಿಷ್ಯದ ಕುರಿತು ಸಂಸತ್ತಿನಲ್ಲಿ ಮತ್ತು ಜನರ ಜೊತೆ ಮುಕ್ತ ಚರ್ಚೆ, ಸಂವಾದ ನಡೆಯಬೇಕು’ ಎಂದು ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.

ಕೇಂದ್ರದ ಕ್ರಮಕ್ಕೆ ಸಿಪಿಎಂ ಖಂಡನೆ

ಜಮ್ಮು ಕಾಶ್ಮೀರದ ವಿಶೇಷ ಸೌಲಭ್ಯ ಹಿಂದಕ್ಕೆ ಪಡೆದಿರುವ ಕ್ರಮವನ್ನು ಸಿಪಿಎಂ ಖಂಡಿಸಿದೆ. ಪಾಕಿಸ್ತಾನದಿಂದ ಅತಿಕ್ರಮಣಕೋರರು ಬರುತ್ತಿದ್ದಾಗ ಕಾಶ್ಮೀರದ ಜನತೆ ಅವರನ್ನು ಎದುರಿಸಿ ಭಾರತವನ್ನು ಸೇರಿಕೊಂಡರು. ಭಾರತದ ಪ್ರಭುತ್ವ ಅವರಿಗೆ ವಿಶೇಷ ಸ್ಥಾನಮಾನ ಮತ್ತು ಸ್ವಾಯತ್ತತೆ ಕೊಡುವ ಗಂಭೀರ ವಾಗ್ದಾನ ಮಾಡಿತ್ತು. ಇದರ ಪರಿಣಾಮ ಕಲಂ 370 ಮೈದಾಳಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ವಾಗ್ದಾನವನ್ನು ಮುರಿಯುವ ಮೂಲಕ ಇಲ್ಲಿನ ಜನರಿಗೆ ಆಘಾತ ಉಂಟುಮಾಡಿದೆ’ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT