ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಪದವೀಧರರ ಕ್ಷೇತ್ರ ಚುನಾವಣೆ: ಅ. ದೇವೇಗೌಡ ಗೆಲುವಿಗೆ ಜಂಟಿ ಕಾರ್ಯತಂತ್ರ

ಒಗ್ಗಟ್ಟು ‍ಪ್ರದರ್ಶನಕ್ಕೆ ಜೆಡಿಎಸ್‌–ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ
Published 26 ಮೇ 2024, 23:30 IST
Last Updated 26 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ನ ಬೆಂಗಳೂರು ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅ. ದೇವೇಗೌಡ ಪರ ಪ್ರಚಾರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಕೊರತೆ ಉದ್ಭವಿಸದಂತೆ ಎಚ್ಚರಿಕೆಯ ಹೆಜ್ಜೆ ಇರಿಸಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.

ಜೆಡಿಎಸ್‌ ರಾಜ್ಯ ಘಟಕದ ಕಚೇರಿಯಲ್ಲಿ ಬಿಜೆಪಿ– ಜೆಡಿಎಸ್‌ ಜಂಟಿ ಸಮನ್ವಯ ಸಮಿತಿ ಸಭೆ ಭಾನುವಾರ ನಡೆಯಿತು. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಪದವೀಧರರ ಕ್ಷೇತ್ರದ ವ್ಯಾಪ್ತಿಯ ಎರಡೂ ಪಕ್ಷಗಳ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.

‘ಮೈತ್ರಿಕೂಟದ ನಿರ್ಧಾರದಂತೆ ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬಿಜೆಪಿ ಅಭ್ಯರ್ಥಿಯಾಗಿರುವ ಅ. ದೇವೇಗೌಡ ಜೆಡಿಎಸ್‌ ಅಭ್ಯರ್ಥಿ ಎಂದೇ ಭಾವಿಸಿ ಅವರ ಗೆಲುವಿಗೆ ಶ್ರಮಿಸಬೇಕು. ಒಗ್ಗಟ್ಟಿನ ಹೋರಾಟದ ಮೂಲಕ ಎನ್‌ಡಿಎ ಮೈತ್ರಿಕೂಟ ಈ ಚುನಾವಣೆಯಲ್ಲೂ ಗೆಲುವು ಸಾಧಿಸುವಂತೆ ಮಾಡಬೇಕು’ ಎಂದು ಕುಮಾರಸ್ವಾಮಿ ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸೂಚಿಸಿದರು.

‘ಕಾಂಗ್ರೆಸ್‌ ಅಭ್ಯರ್ಥಿ ಹಣ, ಉಡುಗೊರೆ ಹಂಚಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಈಗಾಗಲೇ ಹಲವೆಡೆ ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಮತದಾರರಿಗೆ ಆಮಿಷ ಒಡ್ಡುವ ಪ್ರಯತ್ನಗಳ ಮೇಲೆ ನಿಗಾ ಇರಿಸಬೇಕು’ ಎಂದು ಹೇಳಿದರು.

‘ಒಂದು ವರ್ಷದಿಂದ ಬೆಂಗಳೂರು ನಗರದ ಅಭಿವೃದ್ಧಿ ಕುಂಠಿತವಾಗಿದೆ. ‘ಬ್ರ್ಯಾಂಡ್‌ ಬೆಂಗಳೂರು’ ಬದಲಿಗೆ ‘ಲೂಟಿ ಬೆಂಗಳೂರು’ ನಿರ್ಮಾಣವಾಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉಂಟಾಗಿರುವ ದುಸ್ಥಿತಿಯನ್ನು ಪದವೀಧರರ ಗಮನಕ್ಕೆ ತರಬೇಕು’ ಎಂದರು.

ಒಗ್ಗಟ್ಟು ನೋಡಿ ಹೆದರಿಕೆ:

‘ಬಿಜೆಪಿ– ಜೆಡಿಎಸ್‌ ಒಟ್ಟಾಗಿದ್ದರೆ ಮುಂದೆ ನಮಗೆ ಉಳಿಗಾಲವಿಲ್ಲ ಎಂಬ ಹೆದರಿಕೆ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆ. ಆ ಕಾರಣದಿಂದ ಒಗ್ಗಟ್ಟು ಮುರಿಯಲು ಅವರು ಪ್ರಯತ್ನಿಸುತ್ತಾರೆ. ನಮ್ಮ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಅಶೋಕ ಸಲಹೆ ನೀಡಿದರು.

ಬಿಜೆಪಿ ಶಾಸಕರಾದ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಕೆ.ಗೋಪಾಲಯ್ಯ, ಮುನಿರತ್ನ, ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಡಾ.ಶ್ರೀನಿವಾಸಮೂರ್ತಿ, ಎ.ಮಂಜುನಾಥ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿದ್ದರು.

‘ಪುಟ್ಟಸ್ವಾಮಿ ವಿರುದ್ಧ ಕ್ರಮ’
‘ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಎಂ. ಪುಟ್ಟಸ್ವಾಮಿ ಅವರಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಅವರು ನನ್ನ ಮತ್ತು ಎಚ್‌.ಡಿ. ದೇವೇಗೌಡರ ಭಾವಚಿತ್ರ ಬಳಸಿ ಮತ ಯಾಚಿಸುತ್ತಿರುವುದು ಗಮನಕ್ಕೆ ಬಂದಿದೆ. ಅವರು ನಮ್ಮ ಭಾವಚಿತ್ರ ಬಳಸುವುದನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT