ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸ್ತೂಲ್ ಮಾರಾಟ; ಕಲಬುರ್ಗಿ ರೌಡಿ ಬಂಧನ

Last Updated 11 ಜೂನ್ 2021, 22:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರೌಡಿ ಕಾಡುಬಿಸನಹಳ್ಳಿ ಸೋಮು ಹತ್ಯೆಗೆ ನಾಡ ಪಿಸ್ತೂಲ್ ಹಾಗೂ ಮಾರಕಾಸ್ತ್ರ ನೀಡಿದ್ದ ಆರೋಪದಡಿ ಕಲಬುರ್ಗಿ ರೌಡಿ ಸತೀಶ್ ಅಲಿಯಾಸ್ ಮಾರ್ಕೆಟ್ ಸತೀಶ್‌ನನ್ನು (38) ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರೌಡಿಗಳಾದ ಸೋಮು ಹಾಗೂ ರೋಹಿತ್‌ ಗೌಡ ನಡುವೆ ಹಲವು ವರ್ಷಗಳಿಂದ ವೈಷಮ್ಯ ಇತ್ತು. ಸೋಮು ಹತ್ಯೆ ಮಾಡಲು ರೋಹಿತ್ ಸಂಚು ರೂಪಿಸಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು, ರೋಹಿತ್ ಹಾಗೂ ಆತನ ಸಹಚರರನ್ನು ಬಂಧಿಸಿದ್ದರು.

ನಾಡ ಪಿಸ್ತೂಲ್, ಜೀವಂತ ಗುಂಡು, 10 ಮಚ್ಚುಗಳು ಹಾಗೂ 2 ಕಾರುಗಳನ್ನು ಜಪ್ತಿ ಮಾಡಿದ್ದರು.

‘ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಮಾರ್ಕೆಟ್ ಸತೀಶ್‌ನ ಹೆಸರು ಬಾಯ್ಬಿಟ್ಟಿದ್ದರು. ಆತನನ್ನು ಇದೀಗ ಬಂಧಿಸಿ ನಗರಕ್ಕೆ ಕರೆತರಲಾಗಿದೆ. ಆತನ ವಿರುದ್ಧ ಕೊಲೆ, ಕೊಲೆ ಯತ್ನ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

₹ 1 ಲಕ್ಷಕ್ಕೆ ಮಾರಾಟ: ‘ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಬಿಹಾರದ ಶಸ್ತ್ರಾಸ್ತ್ರ ಮಾರಾಟಗಾರರ ಜೊತೆ ರೌಡಿ ಸತೀಶ್‌ ಸಂಪರ್ಕವಿಟ್ಟುಕೊಂಡಿದ್ದ. ಅವರಿಂದ ₹ 10 ಸಾವಿರದಿಂದ ₹ 15 ಸಾವಿರಕ್ಕೆ ನಾಡ ಪಿಸ್ತೂಲ್ ಖರೀದಿಸಿ, ರಾಜ್ಯದಲ್ಲಿ ₹ 80 ಸಾವಿರದಿಂದ ₹ 1 ಲಕ್ಷಕ್ಕೆ ಮಾರುತ್ತಿದ್ದ’ ಎಂದೂ ಅಧಿಕಾರಿ ತಿಳಿಸಿದರು.

‘ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಆರೋಪಿ, ಇತ್ತೀಚಿನ ದಿನಗಳಲ್ಲಿ ಶಸ್ತ್ರಾಸ್ತ್ರ ಮಾರಾಟದಲ್ಲಿ ನಿರತನಾಗಿದ್ದ. ಅದರಿಂದಲೇ ಕೋಟ್ಯಂತರ ರೂಪಾಯಿ ಗಳಿಸಿರುವ ಮಾಹಿತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT