ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೂಲಸೌಕರ್ಯವಿಲ್ಲದೆ ಸೊರಗಿದ ರಂಗಮಂದಿರ

ಹೊಸ ರಂಗಮಂದಿರಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳ ನಿರಾಸಕ್ತಿ *ಸೂಕ್ತ ವೇದಿಕೆ ಸಿಗದೆ ಕಲಾ ಚಟುವಟಿಕೆಗಳು ಕುಂಠಿತ
Published 13 ಏಪ್ರಿಲ್ 2024, 0:30 IST
Last Updated 13 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಬಹುತೇಕ ರಂಗಮಂದಿರಗಳು ಮೂಲಸೌಕರ್ಯಕ್ಕಾಗಿ ಕಾದು ಕುಳಿತಿವೆ. ಸುಸಜ್ಜಿತ ರಂಗಮಂದಿರಗಳ ನಿರ್ಮಾಣದ ಕೂಗು ಸಾಂಸ್ಕೃತಿಕ ವಲಯದಲ್ಲಿದ್ದರೂ ಎಲ್ಲ ಸರ್ಕಾರಗಳು ಈ ಕ್ಷೇತ್ರವನ್ನು ಕಡೆಗಣಿಸುತ್ತಲೇ ಬಂದಿವೆ.

ಚುನಾವಣೆ ಬಂದಾಗಲೆಲ್ಲ ಜನಪ್ರತಿನಿಧಿಗಳು ರಂಗಮಂದಿರಗಳ ನಿರ್ಮಾಣದ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ, ಅಧಿಕಾರಕ್ಕೆ ಏರುತ್ತಿದ್ದಂತೆ ಸ್ಥಳಾವಕಾಶದ ಕೊರತೆ ಸೇರಿ ವಿವಿಧ ಸಿದ್ಧ ಕಾರಣಗಳನ್ನು ನೀಡುತ್ತಿರುವುದು ಸಾಂಸ್ಕೃತಿಕ ವಲಯದವರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ನಗರದಲ್ಲಿ ಈಗಾಗಲೇ ವೇದಿಕೆ ಕಲ್ಪಿಸುತ್ತಿರುವ ರಂಗಮಂದಿರಗಳೂ ಕಿತ್ತುಹೋಗಿರುವ ನೆಲಹಾಸು, ದೋಷಪೂರಿತ ಧ್ವನಿ–ಬೆಳಕಿನ ವ್ಯವಸ್ಥೆ, ನಿರ್ವಹಣೆ ಇಲ್ಲದ ಶೌಚಾಲಯ, ತಂತ್ರಜ್ಞರ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿವೆ. 

ಕೋವಿಡ್ ಬಳಿಕ ಕೆಲ ಖಾಸಗಿ ರಂಗಮಂದಿರ, ಸಭಾಂಗಣಗಳ ನವೀಕರಣ ನಡೆದಿದ್ದು, ಮುಖ್ಯಸ್ಥರು ಬಾಡಿಗೆ ಹೆಚ್ಚಿಸಿದ್ದಾರೆ. ಡಾ.ಅಂಬೇಡ್ಕರ್ ಭವನ, ಚೌಡಯ್ಯ ಸ್ಮಾರಕ ಭವನ, ಸೇಂಟ್ ಜಾನ್ ಆಡಿಟೋರಿಯಂ, ಕುವೆಂಪು ಕಲಾಕ್ಷೇತ್ರ, ಗುರುನಾನಕ್ ಭವನ, ಎಡಿಎ ಸೇರಿ ವಿವಿಧ ರಂಗಮಂದಿರಗಳು 500ಕ್ಕೂ ಅಧಿಕ ಆಸನಗಳ ಸಾಮರ್ಥ್ಯ ಹೊಂದಿವೆ. ಆದರೆ, ಇಲ್ಲಿ ಬಾಡಿಗೆ ಒಂದು ಲಕ್ಷ ರೂಪಾಯಿವರೆಗೂ ಇದೆ. ಇಷ್ಟು ಬಾಡಿಗೆ ಪಾವತಿಸಿ, ಪ್ರದರ್ಶನಗಳನ್ನು ನೀಡುವುದು ರಂಗ ಹಾಗೂ ಕಲಾ ತಂಡಗಳಿಗೆ ಕಷ್ಟಸಾಧ್ಯವಾಗಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ನಗರವು ಸಾಂಸ್ಕೃತಿಕ ಕ್ಷೇತ್ರದಿಂದ ದೂರವಾಗುತ್ತಿದೆ. 

ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿಯೇ ನಗರದ ನಾಲ್ಕು ಕಡೆ ರಂಗಮಂದಿರ ನಿರ್ಮಿಸುವುದಾಗಿ 2020ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದರು. ಇದಕ್ಕಾಗಿ ಬಜೆಟ್‌ನಲ್ಲಿ ₹ 60 ಕೋಟಿ ಮೀಸಲಿಡಲಾಗಿತ್ತು. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಎರಡೂವರೆ ಎಕರೆ, ದೇವನಹಳ್ಳಿಯ ಕಸಬಾ ಹೋಬಳಿ, ಕನ್ನಹಳ್ಳಿ ಬಳಿ ಐದು ಎಕರೆ, ಕೆಐಎಡಿಬಿ, ಕೆಎಚ್‌ಬಿಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟ ಸಿಎ ನಿವೇಶನವನ್ನು ರಂಗಮಂದಿರ ನಿರ್ಮಾಣಕ್ಕೆ ಗುರುತಿಸಿ ವರ್ಷಗಳೇ ಕಳೆದಿವೆ. ಆದರೆ, ಈವರೆಗೂ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿಲ್ಲ. 

ರವೀಂದ್ರ ಕಲಾಕ್ಷೇತ್ರ ಅವಲಂಬನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರ ಒಳಗೊಂಡಂತೆ ನಗರದ ಏಳು ರಂಗ ಮಂದಿರಗಳನ್ನು ನಿರ್ವಹಣೆ ಮಾಡುತ್ತಿದೆ. ಇವುಗಳಲ್ಲಿ ಎರಡು ಬಯಲು ರಂಗಮಂದಿರಗಳೂ ಸೇರಿವೆ. 

ನಗರದ ಹೃದಯ ಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕಗಳಿಗೆ ಆದ್ಯತೆ ನೀಡಲಾಗುತ್ತಿದೆಯಾದರೂ ರಂಗ ತಂಡಗಳು ಪ್ರದರ್ಶನ ನೀಡಲು ಎರಡು ತಿಂಗಳು ಮುಂಚಿತವಾಗಿ ಕಾಯ್ದಿರಿಸಿ, ಕಾಯಬೇಕಾದ ಪರಿಸ್ಥಿತಿಯಿದೆ. ಅದು ಕೂಡ ಸರ್ಕಾರಿ ಕಾರ್ಯಕ್ರಮಗಳು ತುರ್ತಾಗಿ ನಿಗದಿಯಾದಲ್ಲಿ ಕಾಯ್ದಿರಿಸಿದ ದಿನಾಂಕವನ್ನು ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ, ಪ್ರದರ್ಶನದ ದಿನದವರೆಗೂ ರಂಗಮಂದಿರ ಸಿಗುವ ಖಚಿತತೆ ಇಲ್ಲದಂತಾಗಿದೆ.

ಸಂಸ್ಕೃತಿ ಇಲಾಖೆಯು 2022ರಲ್ಲಿ ರಂಗಮಂದಿರಗಳ ಬಾಡಿಗೆಯನ್ನು ಪರಿಷ್ಕರಿಸಿ, ಆದೇಶ ಹೊರಡಿಸಿತ್ತು. ಪ್ರತಿ ವರ್ಷ ಬಾಡಿಗೆ ದರವನ್ನು ಶೇ 5 ರಷ್ಟು ಏರಿಕೆ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು. ಸರ್ಕಾರಿ ಆದೇಶದ ಅನ್ವಯ ರವೀಂದ್ರ ಕಲಾಕ್ಷೇತ್ರದ ಬಾಡಿಗೆಯನ್ನು ಕಳೆದ ವರ್ಷ ಶೇ 5 ರಷ್ಟು ಹೆಚ್ಚಳ ಮಾಡಲಾಗಿತ್ತು. ಸದ್ಯ ಒಂದು ಪಾಳಿಗೆ ₹5 ಸಾವಿರ ಠೇವಣಿ ಹಾಗೂ ಜಿಎಸ್‌ಟಿ ಸಹಿತ ₹ 12,434 ಬಾಡಿಗೆಯಿದ್ದು, ಠೇವಣಿ ಹಣವನ್ನು ಮರಳಿಸಲಾಗುತ್ತದೆ.

ಬಿಬಿಎಂಪಿಯು 2015ರಲ್ಲಿ ಸರ್ ಪುಟ್ಟಣ್ಣ ಚೆಟ್ಟಿ ಪುರಭವನವನ್ನು ನವೀಕರಣ ಮಾಡಿ, ಧ್ವನಿವರ್ಧಕ, ಹವಾನಿಯಂತ್ರಣ ಸೇರಿದಂತೆ ವಿವಿಧ ವ್ಯವಸ್ಥೆಯನ್ನು ಅಳವಡಿಕೆ ಮಾಡಿತ್ತು. ₹ 8 ಸಾವಿರ ಇದ್ದ ಬಾಡಿಗೆ ದರವನ್ನು ₹ 1.22 ಲಕ್ಷಕ್ಕೆ ಏರಿಕೆ ಮಾಡಿತ್ತು. ಕಲಾವಿದರು ಸಂಘ–ಸಂಸ್ಥೆಗಳಿಂದ ಆಕ್ಷೇಪ ವ್ಯಕ್ತವಾದ ಬಳಿಕ ₹ 75 ಸಾವಿರಕ್ಕೆ ಇಳಿಕೆ ಮಾಡಿತ್ತು. ಆದರೆ, ಇಷ್ಟು ಮೊತ್ತದ ಬಾಡಿಗೆ ಹೊಂದಿಸುವುದು ಸಣ್ಣ ಮತ್ತು ಮಧ್ಯಮ ಗಾತ್ರದ ಸಂಘ–ಸಂಸ್ಥೆ, ರಂಗ ತಂಡಗಳಿಗೆ ಸವಾಲಾಗಿತ್ತು. ಹೀಗಾಗಿ, ವರ್ಷದ ಬಹುತೇಕ ದಿನಗಳು ಪುರಭವನ ಬಾಗಿಲು ಮುಚ್ಚಿಯೇ ಇರುತ್ತಿತ್ತು.

ಬಿಬಿಎಂಪಿ 2022ರಲ್ಲಿ ಪುರಭವನದ ಬಾಡಿಗೆ ದರವನ್ನು ಮತ್ತೆ ಪರಿಷ್ಕರಿಸಿ, ಕನ್ನಡ ರಂಗಭೂಮಿಗೆ ಶೇ 50ರಷ್ಟು ರಿಯಾಯಿತಿ ಘೋಷಿಸಿದೆ. ಹವಾನಿಯಂತ್ರಿತ ಸೌಲಭ್ಯಕ್ಕೆ ದಿನದ ಬಾಡಿಗೆಯನ್ನು ₹60 ಸಾವಿರಕ್ಕೆ ಇಳಿಸಿದೆ. ಹವಾನಿಯಂತ್ರಿತ ಸೌಲಭ್ಯ ಬೇಡವೆಂದರೆ ₹50 ಸಾವಿರ ಪಾವತಿಸಬೇಕು. ಅರ್ಧ ದಿನಕ್ಕೂ ಬಾಡಿಗೆ ನೀಡಲಾಗುತ್ತಿದೆ. ಇಷ್ಟಾಗಿಯೂ ಅಷ್ಟು ಮೊತ್ತವನ್ನು ಸಂಘ–ಸಂಸ್ಥೆಗಳಿಗೆ ಪಾವತಿಸುವುದು ಕಷ್ಟಸಾಧ್ಯವಾಗಿದ್ದು, ಕಾರ್ಯಕ್ರಮಗಳು ಅಷ್ಟಾಗಿ ನಡೆಯುತ್ತಿಲ್ಲ. 

ನಿರ್ವಹಣೆ ಸೇರಿ ವಿವಿಧ ಸಮಸ್ಯೆ

ಕನ್ನಡ ಭವನದಲ್ಲಿರುವ ನಯನ ಸಭಾಂಗಣವು ಕಿರಿದಾಗಿದ್ದು ನಾಟ್ಯ ವಿಚಾರಸಂಕಿರಣ ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಮಾತ್ರ ಸಹಕಾರಿಯಾಗಿದೆ. ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರ ಅಮೆಚೂರು ಡ್ರಮಾಟಿಕ್ ಅಸೋಸಿಯೆಷನ್ ಕೊಡುಗೆಯಾಗಿದೆ. ಇಲ್ಲಿ ವಾಹನಗಳ ಸಿಲುಗಡೆಗೆ ಸ್ಥಳವಿಲ್ಲದಿರುವುದು ಸಮಸ್ಯೆಯಾಗಿದೆ. ಕುವೆಂಪು ಕಲಾಕ್ಷೇತ್ರದಲ್ಲಿ ಗ್ರೀನ್ ರೂಮ್‌ಗಳು ವೇದಿಕೆಯ ನೆಲಮಹಡಿಯಲ್ಲಿವೆ. ಇದು ಕಲಾವಿದರಿಗೆ ಕಿರಿಕಿರಿ ಉಂಟುಮಾಡಲಿದೆ. ಸಮಾಜ ಕಲ್ಯಾಣ ಇಲಾಖೆಯ ಡಾ. ಅಂಬೇಡ್ಕರ್ ಭವನವು ಅತ್ಯಾಧುನಿಕ ಸೌಲಭ್ಯ ಹೊಂದಿದ್ದರೂ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಗಾಂಧಿನಗರದ ಗುಬ್ಬಿ ವೀರಣ್ಣ ರಂಗಮಂದಿರ ರಾಜಾಜಿನಗರದ ರಾಜ್‌ಕುಮಾರ್ ರಂಗಮಂದಿರ ಸೇರಿದಂತೆ ವಿವಿಧ ರಂಗಮಂದಿರಗಳು ಸೂಕ್ತ ನಿರ್ವಹಣೆ ಇಲ್ಲದೆಯೇ ಕಳೆಗುಂದಿವೆ.

ಸಣ್ಣ ರಂಗಮಂದಿರಗಳು ಈಗಿನ ತುರ್ತು.. ಮುನ್ನೂರು ಆಸನಗಳ ರಂಗಮಂದಿರಗಳು ನಗರದ ವಿವಿಧೆಡೆ ನಿರ್ಮಾಣವಾಗಬೇಕು. ಸರ್ಕಾರಿ ರಂಗಮಂದಿರಗಳ ಬಾಡಿಗೆ ಹೆಚ್ಚಿಸಬಾರದು
-ಜೆ. ಲೋಕೇಶ್, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ
ನಗರದ ಬಹುತೇಕ ರಂಗಮಂದಿರಗಳು ನಿರ್ವಹಣೆಯಿಲ್ಲದೆ ಸೊರಗಿವೆ. ಬಯಲು ರಂಗಮಂದಿರಗಳು ಅಕ್ರಮ ಚಟುವಟಿಕೆ ತಾಣವಾಗಿವೆ. ರವೀಂದ್ರ ಕಲಾಕ್ಷೇತ್ರ ಸೇರಿ ವಿವಿಧ ರಂಗಮಂದಿರಗಳಿಗೆ ಮೂಲಸೌಕರ್ಯ ಒದಗಿಸಬೇಕು.
-ಕೆ.ವಿ. ನಾಗರಾಜಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿ ನಿಯೋಜಿತ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT