ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಕನ್ನಡಿಗರ ಹೆಸರು: ಟಿ.ಎಸ್. ನಾಗಾಭರಣ ಭರವಸೆ

ಕೇಂದ್ರ ಸರ್ಕಾರಕ್ಕೆ ಒತ್ತಾಯ
Last Updated 4 ಡಿಸೆಂಬರ್ 2020, 21:11 IST
ಅಕ್ಷರ ಗಾತ್ರ

ಬೆಂಗಳೂರು: ‘ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ನಿಲ್ದಾಣಕ್ಕೆ ಕನ್ನಡಿಗರ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಒತ್ತಾಯಿಸಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಭರವಸೆ ನೀಡಿದರು.

ಪ್ರಾಧಿಕಾರವು ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ಹಮ್ಮಿ ಕೊಂಡ ‘ದಂಡು ಪ್ರದೇಶದಲ್ಲಿ ಕನ್ನಡ ವಾತಾವರಣ ನಿರ್ಮಾಣ’ ವೆಬಿನಾರ್‌ ನಲ್ಲಿ ಮಾತನಾಡಿದ ಅವರು, ‘ದಂಡು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡೇತರರು ಇದ್ದಾರೆ. ಹೀಗಾಗಿ ಅಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ನಡೆಸುವ ಮೂಲಕ ಅವರನ್ನು ಕನ್ನಡ ಭಾಷೆಯ ಕಡೆಗೆ ಆಕರ್ಷಿಸುವ ಕೆಲಸವಾಗಬೇಕು. ಕನ್ನಡ ಕಾಯಕ ವರ್ಷವನ್ನು ಆಚರಿಸುತ್ತಿರುವ ಕಾರಣ ಪ್ರಾಧಿಕಾರವು ದಂಡು ಪ್ರದೇಶದಲ್ಲಿ ಪ್ರತಿ ತಿಂಗಳು ಒಂದಾದರೂ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಕನ್ನಡ ಪರ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು ಕನ್ನಡ ಕಾಯಕ ಪಡೆಯನ್ನು ಸಜ್ಜುಗೊಳಿಸಬೇಕು’ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ, ‘ಕನ್ನಡ ಮಾತನಾಡು ವವರ ಸಂಖ್ಯೆ ಹೆಚ್ಚಾಗಬೇಕಾದಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು. ‘ಕನ್ನಡ ಕಲಿಯಿರಿ’ ಎಂಬ ನಾಮಫಲಕವನ್ನು ಬಸ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹಾಕಿದರೆ ಸಾಕಾಗುವುದಿಲ್ಲ. ಬದಲಾಗಿ ಕನ್ನಡ ಕಲಿಯುವುದರಿಂದ ಆಗುವ ಪ್ರಯೋಜನದ ಬಗ್ಗೆ ಮನವರಿಕೆ ಮಾಡಿಸಬೇಕಿದೆ. ದಂಡು ಪ್ರದೇಶದಲ್ಲಿ ಕನ್ನಡ ಭವನ ನಿರ್ಮಿಸಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡಲ್ಲಿ ಈ ಭಾಷೆಯ ಬಗ್ಗೆ ಒಲವು ಹೆಚ್ಚಲಿದೆ. ಇಲ್ಲಿ ನೆಲೆಸಿರುವ ಅನ್ಯ ಭಾಷಿಗರನ್ನು ವಿರೋಧಿಸುವ ಬದಲು, ಅವರನ್ನು ನಮ್ಮ ಭಾಷೆಯ ಕಡೆಗೆ ಕರೆತರಬೇಕು. ಕನ್ನಡ ಪರ ಕೆಲಸಗಳಿಗೆ ಸ್ಥಳೀಯ ಸಂಸ್ಥೆಗಳನ್ನೂ ತೊಡಗಿಸಿಕೊಳ್ಳಬೇಕು’ ಎಂದರು.

ರಂಗ ಮಂದಿರ ಅಗತ್ಯ: ಒಕ್ಕೂಟದ ಅಧ್ಯಕ್ಷ ಜಗನ್ನಾಥ ರೆಡ್ಡಿ, ‘ದಂಡು ಪ್ರದೇಶದಲ್ಲಿ ಹಲವು ಸಮಸ್ಯೆಗಳಿವೆ. ರಂಗಮಂದಿರ ಇಲ್ಲದಿರುವುದು ಕಾರ್ಯಕ್ರಮ ನಡೆಸಲು ಹಿನ್ನಡೆಯಾಗಿದೆ. ರಸ್ತೆಗಳಿಗೆ ಬ್ರಿಟಿಷರ ಕಾಲದಲ್ಲಿನ ಹೆಸರುಗಳಿದ್ದು, ಕನ್ನಡ ಪರ ಹೋರಾಟಗಾರರು ಹಾಗೂ ಸಾಧಕರ ಹೆಸರನ್ನು ಇಡಬೇಕಿದೆ. ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಸರ್ವಜ್ಞರ ಹೆಸರನ್ನು ಇಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು’ ಎಂದು ಅವರು ತಿಳಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುನಿರಾಜು ಎನ್. ಮಾತನಾಡಿ, ‘ದಂಡು ಪ್ರದೇಶದಲ್ಲಿ ಜಾನಪದ ಕಾರ್ಯಕ್ರಮಗಳನ್ನು ನಡೆಸಬೇಕು. ಇದರಿಂದ ಮಕ್ಕಳಿಗೆ ಕಲೆಯ ಬಗ್ಗೆ ತಿಳಿಯುವ ಜತೆಗೆ ಕಲಾವಿದರಿಗೂ ಒಳಿತಾಗಲಿದೆ. ಮನೆಯಲ್ಲಿ ಪಾಲಕರು ಮಕ್ಕಳೊಂದಿಗೆ ಕನ್ನಡದಲ್ಲಿ ಸಂವಹನ ನಡೆಸುವಂತಾಗಬೇಕು. ಕನ್ನಡ ಕಲಿಕಾ ಕೇಂದ್ರಗಳನ್ನು ವಿಸ್ತರಿಸಲು ಕ್ರಮಕೈಗೊಳ್ಳ ಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT