ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟರಾಯನಪುರ ಕ್ಷೇತ್ರ ಸ್ಥಿತಿ–ಗತಿ| ಅಸ್ತಿತ್ವಕ್ಕೆ ಬಿಜೆಪಿ ಕಸರತ್ತು

ಕರ್ನಾಟಕ ವಿಧಾನಸಭಾ ಚುನಾವಣೆ–2023
Last Updated 27 ಜನವರಿ 2023, 22:55 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಮತ್ತು ಗ್ರಾಮೀಣ ಪ್ರದೇಶವನ್ನು ಒಳಗೊಂಡ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವು ವೈವಿಧ್ಯ ಹೊಂದಿದೆ. ಪುನರ್‌ ವಿಂಗಡಣೆ ನಂತರ ಈ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಚುನಾವಣೆ ನಡೆಯಲಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಹೊಸ ತಲೆಮಾರಿನ ಮುಂಚೂಣಿ ನಾಯಕನಾಗಿ ಹೊರಹೊಮ್ಮುತ್ತಿರುವ ಹಾಲಿ ಶಾಸಕ ಕೃಷ್ಣ ಬೈರೇಗೌಡ, ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತ. ಈ ಹಿಂದೆ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅವರು, ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಶ್ರೀರಕ್ಷೆಯನ್ನೇ ನೆಚ್ಚಿಕೊಂಡು ಸಜ್ಜಾಗುತ್ತಿದ್ದಾರೆ.

ಈ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದಕ್ಕೆ ಬಿಜೆಪಿ ಸತತ ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್‌ನ ನಾಗಾಲೋಟಕ್ಕೆ ಕಡಿವಾಣ ಹಾಕಲು ಕಸರತ್ತು ಆರಂಭಿಸಿದೆ. ಬಿಜೆಪಿಯಿಂದ ಎ. ರವಿ ಅವರೇ ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ. ಸಚಿವ ಆರ್‌. ಅಶೋಕ ಅವರ ಸಹೋದರ ಸಂಬಂಧಿಯಾಗಿರುವ ರವಿ, ಮೂರು ಬಾರಿ ಸೋಲು ಅನುಭವಿಸಿದ್ದಾರೆ. ಮೂರು ಬಾರಿಯೂ ಕೃಷ್ಣ ಬೈರೇಗೌಡ ಅವರ ವಿರುದ್ಧವೇ ಪರಾಭವಗೊಂಡಿದ್ದಾರೆ. ಕಳೆದ ಬಾರಿ ಕೇವಲ 5,671 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಸತತ ಸೋಲಿನ ಅನುಕಂಪದ ಅಲೆಯನ್ನು ಗೆಲುವಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸುವ ಲೆಕ್ಕಾಚಾರ ಬಿಜೆಪಿಯದ್ದು.

ಕೆ.ಎ. ಮುನೀಂದ್ರ ಕುಮಾರ್‌, ತಮ್ಮೇಶಗೌಡ, ಎನ್‌. ಚಕ್ರಪಾಣಿ ಕೂಡ ಈ ಬಾರಿ ಬಿಜೆಪಿ ಟಿಕೆಟ್‌ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ. ಕೆ.ಎ. ಮುನೀಂದ್ರ ಕುಮಾರ್‌ ಅವರು ಬಿಬಿಎಂಪಿಯಲ್ಲಿ ಆಡಳಿತ ಪಕ್ಷದ ನಾಯಕರಾಗಿದ್ದರು ಮತ್ತು ಎರಡು ಬಾರಿ ಜಕ್ಕೂರು ವಾರ್ಡ್‌ನಿಂದ ಜಯಗಳಿಸಿದ್ದರು.

ಜೆಡಿಎಸ್‌, ವೇಣುಗೋಪಾಲ್‌ ಅವರಿಗೆ ಈಗಾಗಲೇ ಟಿಕೆಟ್‌ ಘೋಷಿಸಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಟಿ.ಜಿ. ಚಂದ್ರು, ಕೇವಲ 22,490 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ ಮತ್ತು ಬಿಜೆಪಿ ಪೈಪೋಟಿ ನಡುವೆ ಜೆಡಿಎಸ್‌ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಕ್ಷೇತ್ರದಲ್ಲಿ ಒಕ್ಕಲಿಗರು, ಪರಿಶಿಷ್ಟರು ಮತ್ತು ಮುಸ್ಲಿಂ ಸಮುದಾಯದವರೇ ನಿರ್ಣಾಯಕರು. ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜತೆಗೆ, ವಿವಿಧ ಭಾಷೆಗಳ ಜನರು ಸಹ ಇಲ್ಲಿ ನೆಲೆಸಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡಿರುವ ಬ್ಯಾಟರಾಯನಪುರ ಕ್ಷೇತ್ರ ವಾಣಿಜ್ಯ ವಹಿವಾಟಿನಲ್ಲಿ ಮುಂದುವರಿದಿದೆ. ಆದರೆ, ಕ್ಷೇತ್ರವು ಮೂಲಸೌಕರ್ಯಗಳ ಸಮಸ್ಯೆಯಿಂದ ಹೊರತಾಗಿಲ್ಲ. ಜಕ್ಕೂರು ಮತ್ತು ಯಲಹಂಕ ಸಂಪರ್ಕಿಸುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಹೆಗಡೆ ನಗರ ಸೇರಿದಂತೆ ಹಲವು ಬಡಾವಣೆಗಳು ಮೂಲಸೌಕರ್ಯಗಳ ಸಮಸ್ಯೆಯಿಂದ ನಲುಗಿವೆ. ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಸಮಸ್ಯೆಗಳು ನಿರಂತರವಾಗಿ ಕಾಡುತ್ತಿವೆ. ಕಾವೇರಿ ಪೈಪ್‌ಲೈನ್‌ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಹತ್ತಾರು ಸಮಸ್ಯೆಗಳ ನಡುವೆಯೂ ಕೆರೆಗಳು ಮತ್ತು ಮುಖ್ಯ ರಸ್ತೆಗಳಿಗೆ ಕಾಯಕಲ್ಪ ನೀಡಿರುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಇಲ್ಲಿ ಗೋಚರಿಸುತ್ತವೆ.

ಕ್ಷೇತ್ರ ಮಾಹಿತಿ

ಹಾಲಿ ಶಾಸಕ: ಕೃಷ್ಣ ಬೈರೇಗೌಡ (ಕಾಂಗ್ರೆಸ್‌)


ಹಾಲಿ ಮತದಾರರ ವಿವರ

ಪುರುಷರು– 2,43,755

ಮಹಿಳೆಯರು– 2,25,938

ತೃತೀಯ ಲಿಂಗಿಗಳು– 113

ಒಟ್ಟು– 4,69,806

2008ರ ಚುನಾವಣೆ

ಕಾಂಗ್ರೆಸ್‌– 60,979

ಬಿಜೆಪಿ– 51,627

ಜೆಡಿಎಸ್‌– 21,598

2013ರ ಚುನಾವಣೆ

ಕಾಂಗ್ರೆಸ್‌– 96,125

ಬಿಜೆಪಿ– 63,627

ಜೆಡಿಎಸ್‌– 41,287

2018ರ ಚುನಾವಣೆ

ಕಾಂಗ್ರೆಸ್‌– 1,14,964

ಬಿಜೆಪಿ– 1,09,293

ಜೆಡಿಎಸ್‌– 22,490

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT