ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲಕೇಶಿನಗರ ಕ್ಷೇತ್ರ ಸ್ಥಿತಿ–ಗತಿ| ‘ಅಖಂಡ’ ಕೋಟೆ ಕೆಡವಲು ಇನ್ನಿಲ್ಲದ ಕಸರತ್ತು’

Last Updated 23 ಜನವರಿ 2023, 20:29 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ ಪುಲಕೇಶಿನಗರ, ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ, 2008ರಲ್ಲಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಯಿತು. ಅವಿಭಜಿತ ಯಲಹಂಕ ಕ್ಷೇತ್ರವನ್ನು ಬೂಸಾ ಚಳವಳಿಯ ಹರಿಕಾರ ದಿವಂಗತ ಬಸವಲಿಂಗಪ್ಪ ಪ್ರತಿನಿಧಿಸಿದ್ದರು. ಸದ್ಯ ಕಾಂಗ್ರೆಸ್‌ನ ಅಖಂಡ ಶ್ರೀನಿವಾಸಮೂರ್ತಿ ಇಲ್ಲಿನ ಶಾಸಕರು. ಕ್ಷೇತ್ರ ವ್ಯಾಪ್ತಿಯ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ 2020ರಲ್ಲಿ ನಡೆದ ಗಲಾಟೆಯನ್ನು ಯಾರೂ ಮರೆಯಲು ಸಾಧ್ಯ ಇಲ್ಲ.

ವಿಧಾನಸೌಧದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಈ ಕ್ಷೇತ್ರ ಇದ್ದರೂ, ಶೇ 65 ರಷ್ಟು ಭಾಗ‌ ಕೊಳೆಗೇರಿಯಿಂದಲೇ ತುಂಬಿದೆ. ಅದೇ ದೊಡ್ಡ ಸಮಸ್ಯೆ. ಮುಖ್ಯರಸ್ತೆಗಳನ್ನು ಹೊರತುಪಡಿಸಿದರೆ, ಇತರ ಭಾಗಗಳು ಸಮರ್ಪಕವಾಗಿ ಅಭಿವೃದ್ಧಿಗೊಂಡಿಲ್ಲ. ಶೇ 80ರಷ್ಟು ಪ್ರದೇಶ ಯೋಜನಾಬದ್ಧವಾಗಿಲ್ಲ. ಚಾಲುಕ್ಯವಂಶದ ರಾಜ ‘ಪುಲಕೇಶಿ’ ಹೆಸರಿನ ಕ್ಷೇತ್ರ ಒಂದು ಕಾಲದಲ್ಲಿ ಚರ್ಮೋದ್ಯಮಕ್ಕೆ ಹೆಸರಾಗಿತ್ತು. ಇಲ್ಲಿನ ಟ್ಯಾನರಿ (ಚರ್ಮ) ರಸ್ತೆಯುದ್ದಕ್ಕೂ ಗುಜರಿ, ಮಾಂಸದ ಅಂಗಡಿಗಳ ಸಾಲು. ಇಲ್ಲಿ ಕನ್ನಡಕ್ಕಿಂತ ಅನ್ಯ ಭಾಷಿಗರದ್ದೇ ಪ್ರಾಬಲ್ಯ.

ಬಿ. ಬಸವಲಿಂಗಪ್ಪನವರ ಅವರ ಮಗ ಬಿ. ಪ್ರಸನ್ನಕುಮಾರ್ ಇಲ್ಲಿ ಕಾಂಗ್ರೆಸ್‌ನಿಂದ 2 ಬಾರಿ ಗೆದ್ದಿದ್ದಾರೆ. ಆದರೆ, 2013ರಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದ್ದ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ಸೋತಿದ್ದರು. ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ, ಜೆಡಿಎಸ್‌ನಿಂದ ಅಮಾನತುಗೊಂಡು ಕಾಂಗ್ರೆಸ್ ಸೇರಿದ್ದ ಏಳು ಶಾಸಕರಲ್ಲಿ ಅಖಂಡ ಶ್ರೀನಿವಾಸಮೂರ್ತಿ ಕೂಡಾ ಒಬ್ಬರು. ಹೀಗಾಗಿ, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಖಂಡ ಶ್ರೀನಿವಾಸ ಮೂರ್ತಿಗೆ ಮಣೆ ಹಾಕಿತ್ತು. ಕಾಂಗ್ರೆಸ್‌ ಟಿಕೆಟ್‌ ವಂಚಿತ ಪ್ರಸನ್ನಕುಮಾರ್‌ ಜೆಡಿಎಸ್‌ ಪಾಳಯಕ್ಕೆ ಜಿಗಿದು ಕಣಕ್ಕಿಳಿದಿದ್ದರು. ಆದರೆ, 80ಸಾವಿರಕ್ಕೂ ಹೆಚ್ಚು ಮತಗಳ ದಾಖಲೆಯ ಅಂತರದಿಂದ
ಶ್ರೀನಿವಾಸಮೂರ್ತಿ ಆಯ್ಕೆಯಾಗಿದ್ದರು.

‘ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಲಾಗಿದೆ’ ಎಂದು ಆರೋಪಿಸಿ ನೂರಾರು ಜನರು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್‌ ಭೈರಸಂದ್ರದಲ್ಲಿ 2020ರ ಆಗಸ್ಟ್ 10ರಂದು ವಾಹನಗಳಿಗೆ ಬೆಂಕಿಹಚ್ಚಿ, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಗುಂಡೇಟಿಗೆ ಮೂವರು ಮೃತಪಟ್ಟಿದ್ದರು. ಹಿಂಸಾಚಾರದಲ್ಲಿ ಹಲವರು ಗಾಯಗೊಂಡಿದ್ದರು. ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೂ ದಾಳಿ ನಡೆದಿತ್ತು. ಈ ಘಟನೆ ಕಾಂಗ್ರೆಸ್‌ ಒಳಗೇ ಬೆಂಕಿಗೆ ಕಾರಣವಾಗಿತ್ತು. ಈ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಮೇಯರ್‌ ಸಂಪತ್‌ರಾಜ್‌ ಈ ಘಟನೆ ಹಿಂದಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.

ಈ ಬಾರಿಯೂ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ ಎದುರಾಗಿದೆ. ಅಖಂಡ ಶ್ರೀನಿವಾಸ ಮೂರ್ತಿ ಮತ್ತೆ ಟಿಕೆಟ್ ಬಯಸಿದ್ದಾರೆ. ಮತ್ತೊಂದೆಡೆ, ಮರಳಿ ‘ಕೈ’ ತೆಕ್ಕೆಗೆ ಬಂದಿರುವ ಪ್ರಸನ್ನಕುಮಾರ್ ಕೂಡಾ ಟಿಕೆಟ್ ನಿರೀಕ್ಷೆಯಲ್ಲಿ ದ್ದಾರೆ. ಸಂಪತ್ ರಾಜ್ ಕೂಡ ಆಕಾಂಕ್ಷಿಯೇ. ಜೆಡಿಎಸ್, ಬಿಜೆಪಿಯಿಂದ ಅಭ್ಯರ್ಥಿ ಯಾರೆಂಬ ಬಗ್ಗೆ ಯಾವುದೇ ಸೂಚನೆ ಇಲ್ಲ. ಕಾಂಗ್ರೆಸ್‌ ಟಿಕೆಟ್‌ ಸಿಗದವರು ಜೆಡಿಎಸ್‌ಗೆ ವಾಪಸಾಗುವ ಸಾಧ್ಯತೆಯೂ ಇದೆ.‌ ಮುಸ್ಲಿಂ ಮತಗಳೇ ಇಲ್ಲಿ ನಿರ್ಣಾಯಕ. ಹೀಗಾಗಿ, ಎಸ್‌ಡಿಪಿಐ ಅಭ್ಯರ್ಥಿ ಸೆಳೆಯುವ ಮತಗಳೂ ನಿರ್ಣಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT