ಬುಧವಾರ, ಏಪ್ರಿಲ್ 14, 2021
23 °C
ಕಸ ನಿರ್ವಹಣಾ ನಿಯಮ ಮತ್ತು ಕೆರೆಗಳ ಮಾಲಿನ್ಯದ ತಡೆ ಸಂಬಂಧ ಅನುಷ್ಠಾನದ ಪರಿಶೀಲನಾ ಸಭೆ

ಘನ ತ್ಯಾಜ್ಯ ನಿರ್ವಹಣಾ ನೀತಿ ಕೂಡಲೇ ಪ್ರಕಟಿಸಲು ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದ ಘನ ತ್ಯಾಜ್ಯ ನಿರ್ವಹಣಾ ನೀತಿ ಪ್ರಕಟಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಕೆ. ಸುಧಾಕರ್‌ ಅವರು ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ನಿರ್ದೇಶನ ನೀಡಿದರು.

ಘನ ತ್ಯಾಜ್ಯ ನಿರ್ವಹಣಾ ನಿಯಮ ಮತ್ತು ನಗರದ ಕೆರೆಗಳ ಮಾಲಿನ್ಯದ ತಡೆ ಸಂಬಂಧ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಪೌರಾಡಳಿತ ಇಲಾಖೆ ಮತ್ತು ಬಿಬಿಎಂಪಿಯು ಏಳು ದಿನಗಳೊಳಗಾಗಿ ಘನ ತ್ಯಾಜ್ಯ ನಿರ್ವಹಣೆ ಸಂಬಂಧ ಉತ್ತಮ ಅಭ್ಯಾಸಗಳನ್ನು ಒಳಗೊಂಡಂತೆ ವಾರ್ಷಿಕ ವರದಿಯನ್ನು ಮಂಡಳಿಗೆ ಸಲ್ಲಿಸಬೇಕು’ ಎಂದು ಸೂಚಿಸಿದರು. 

‘ನಿಯಮದ ಅಡಿಯಲ್ಲಿ ಅನುಷ್ಠಾನ ಕುರಿತು ನಿಗದಿಪಡಿಸಿದ್ದ ಅವಧಿ ಈಗಾಗಲೇ ಮೀರಿರುವುದರಿಂದ ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದರು. 

ಜಿಪಿಎಸ್‌ ಅಳವಡಿಸಿ

‘ಕಸ ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್‌ ವ್ಯವಸ್ಥೆ ಅಳವಡಿಸಬೇಕು. ಉತ್ಪಾದನೆ ಹಂತದಲ್ಲಿ ಸಮರ್ಪಕವಾಗಿ ಕಸ ವಿಂಗಡಣೆ ಮಾಡಲು ಕ್ರಮ ಕೈಗೊಳ್ಳಬೇಕು. ವಿಂಗಡಿಸಿದ ಕಸವನ್ನು ಮತ್ತೆ ಕಸದೊಂದಿಗೆ ಬೆರೆಸಬಾರದು ಮತ್ತು ಕಸ ನಿರ್ವಹಣೆಗಾಗಿ ಅಳವಡಿಸಿರುವ ಉಪಕರಣಗಳನ್ನು ಸಂಪೂರ್ಣವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಆರ್‌ಡಿಎಫ್‌ ಬಳಕೆ

‘ಸಿಮೆಂಟ್ ಕಾರ್ಖಾನೆಗಳು, ನಗರಾಭಿವೃದ್ಧಿ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಆಯುಕ್ತರ ಸಭೆ ಕರೆದು ಆರ್.ಡಿ.ಎಫ್ ನ್ನು ಸಿಮೆಂಟ್ ಕಾರ್ಖಾನೆಗಳಲ್ಲಿ ಉಪಯೋಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಮಂಡಳಿ ಅಧಿಕಾರಿಗಳಿಗೆ ಸುಧಾಕರ್‌ ಸೂಚನೆ ನೀಡಿದರು. 

ಕಸ ಸಂಸ್ಕರಣೆ ಮತ್ತು ನಿರ್ವಹಣೆಯಲ್ಲಿ ಉತ್ತಮ ವಿಧಾನ ಅಳವಡಿಸಿಕೊಂಡಿರುವ ದೇಶದ ಇತರೆ ನಗರಗಳ ಅಧ್ಯಯನಕ್ಕೆ ಮಂಡಳಿ ಅಧಿಕಾರಿಗಳನ್ನು ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. 

ಕಸ ನಿರ್ವಹಣೆ ವಿಷಯ ಪರಿಣತರಾದ ಡಾ.ಚಾಣಕ್ಯ, ಡಾ.ಜಯ ಪ್ರಕಾಶ್, ಡಾ.ಟಿ.ವಿ.ರಾಮಚಂದ್ರ ಮತ್ತು ಡಾ.ಅನಂತ ಕೊಡವಾಸಲ್ ಸಲಹೆ ನೀಡಿದರು.

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್. ಅನಿಲ್‌ ಕುಮಾರ್, ನಿರ್ದೇಶಕ ಶೇಖರಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೆರೆಗಳ ಮಾಲಿನ್ಯ ತಡೆಗೆ ತೀರ್ಮಾನಗಳು

* ತಾಂತ್ರಿಕ, ಹಣಕಾಸು ಮತ್ತು ಮಾಲೀಕತ್ವದ ವಿಷಯಗಳನ್ನು ಪರಿಗಣಿಸಿ ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ನಗರದ ಎಲ್ಲ ಕೆರೆಗಳನ್ನು ಒಂದು ಪ್ರಾಧಿಕಾರದ ಅಡಿಯಲ್ಲಿ ತರುವುದು

* ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಬರುವ ಎಲ್ಲ ಜಿಲ್ಲೆಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ 26 ಮಾಪಕಗಳಿಗೆ ಅನ್ವಯವಾಗಿರುವುದೇ ಎಂದು ವಿಶ್ಲೇಷಿಸುವುದು

* ಸಂಸ್ಕರಿಸಲಾದ ಕೆಸರು ನೀರು ಮಂಡಳಿಯು ನಿಗದಿ ಪಡಿಸಿದ ಮಾಪಕಗಳ ಮಿತಿಯೊಳಗೆ ಇರುವಂತೆ ನೋಡಿಕೊಳ್ಳುವುದು

* ಮಳೆ ನೀರು ಸಂಗ್ರಹ ವಿಧಾನ ಅಳವಡಿಸದೇ ಇರುವ ಗ್ರಾಹಕರಿಗೆ ನೀರಿನ ಸೌಲಭ್ಯವನ್ನು ಕಲ್ಪಿಸಬಾರದು ಎಂದು ಜಲಮಂಡಳಿಗೆ ಸೂಚನೆ

ಘನತ್ಯಾಜ್ಯ ವಿಲೇವಾರಿ: ವರದಿ ಸಲ್ಲಿಸಲು ಹೈಕೋರ್ಟ್‌ ಸೂಚನೆ

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ಕೈಗೊಂಡಿರುವ ವೈಜ್ಞಾನಿಕ ಕ್ರಮಗಳು ಹಾಗೂ ಪ್ರಸಕ್ತ ಸ್ಥಿತಿಗತಿ ಕುರಿತು ಒಂದು ತಿಂಗಳಲ್ಲಿ ಸಮಗ್ರ ವರದಿ ಸಲ್ಲಿಸಿ’ ಎಂದು ಹೈಕೋರ್ಟ್, ಬಿಬಿಎಂಪಿಗೆ ನಿರ್ದೇಶಿಸಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಈ ಹಿಂದೆ ಹೈಕೋರ್ಟ್‌ ನೀಡಿರುವ ಆದೇಶಗಳ ಅನುಷ್ಠಾನದ ಬಗ್ಗೆ ವಿವರ ಸಲ್ಲಿಸಿ, ಘನತ್ಯಾಜ್ಯ ನಿರ್ವಹಣಾ ನಿಯಮ–2016ರ ಪಾಲನೆ ಬಗ್ಗೆಯೂ ಮಾಹಿತಿ ನೀಡಿ’ ಎಂದು ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರಿಗೆ ನ್ಯಾಯಪೀಠ ಸೂಚಿಸಿತು. ವಿಚಾರಣೆಯನ್ನು ಆ. 16ಕ್ಕೆ ಮುಂದೂಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು