ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ನಿದ್ರೆಯನ್ನೇ ವಿಜೃಂಭಿಸಿದ ಮಾಧ್ಯಮ: ಸುಗತ ಶ್ರೀನಿವಾಸರಾಜು

Last Updated 19 ಡಿಸೆಂಬರ್ 2021, 20:29 IST
ಅಕ್ಷರ ಗಾತ್ರ

ಬೆಂಗಳೂರು: ‘ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ತೀಕ್ಷ್ಣ ಗ್ರಹಿಕಾ ಶಕ್ತಿಯನ್ನು ಗುರುತಿಸದ ಮಾಧ್ಯಮಗಳು, ಅವರು ಕಣ್ಮುಚ್ಚಿ ಕುಳಿತಿರುವುದನ್ನೇ ನಿದ್ರೆ ಎಂಬಂತೆ ಬಿಂಬಿಸಿ ಪ್ರಚಾರ ಮಾಡಿದವು’ ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ಬೇಸರ ವ್ಯಕ್ತಪಡಿಸಿದರು.

‘ಜೀವನ ಚರಿತ್ರೆಗಳ ಲೇಖಕನ ಆಂತರಿಕ ಮನಸ್ಸು’ ಕುರಿತ ಗೋಷ್ಠಿಯಲ್ಲಿ ಎಚ್.ಡಿ. ದೇವೇಗೌಡರ ಜೀವನ ಚರಿತ್ರೆ ಆಧರಿಸಿದ ‘ಫರೋಸ್ ಇನ್ ಎ ಫೀಲ್ಡ್’ ಕೃತಿ ರಚನೆಯ ಸಂದರ್ಭದಲ್ಲಿನ ಕೆಲ ಸಂಗತಿಗಳನ್ನು ವಿವರಿಸಿದರು.

‘ದಿನಪತ್ರಿಕೆಯೊಂದರಲ್ಲಿ ನಿದ್ರೆ ಮಾಡುತ್ತಿದ್ದ ಚಿತ್ರ ಪ್ರಕಟವಾಗಿದ್ದನ್ನು ಅವರಿಗೆ ತೋರಿಸಿದ್ದೆ. ತಕ್ಷಣವೇ ಪ್ರತಿಕ್ರಿಯಿಸಿದ್ದ ದೇವೇಗೌಡರು, ನೆಹರೂ ಅವರೂ ನಿದ್ರೆ ಮಾಡುತ್ತಿದ್ದರು ಎಂದರು. ಅವರಿಗೂ ಕಣ್ಣಿನ ಸಮಸ್ಯೆಯೂ ಇತ್ತು. ದೀಪದ ಪ್ರಖರತೆಗೂ ಕಣ್ಣು ಮುಚ್ಚುತ್ತಿದ್ದರು. ಆದರೆ, ಈ ಬಗ್ಗೆ ಅವರ ನಿಷ್ಪ್ರಯೋಜಕ ಮಾಧ್ಯಮ ಕಾರ್ಯದರ್ಶಿಯವರು ಮಾಧ್ಯಮಗಳಿಗೆ ಮನವರಿಕೆ ಮಾಡುವ ಪ್ರಯತ್ನವನ್ನೇ ಮಾಡಲಿಲ್ಲ’ ಎಂದರು.

‘ದೇವೇಗೌಡರ ನಿದ್ರೆ ಕುರಿತು ಪಿ. ಚಿದಂಬರಂ ಅವರಲ್ಲೂ ವಿಚಾರಿಸಿದ್ದೆ. ಆಗ ಅವರು, ಇದನ್ನು ನೀವು ನಂಬುತ್ತಿರಾ ಎಂದು ಮರುಪ್ರಶ್ನೆ ಹಾಕಿದರು’ ಎಂದು ತಿಳಿಸಿದರು.

ಸೇನಾಧಿಕಾರಿಗಳ ಜತೆಗಿನ ಸಭೆಯೊಂದರ ಉದಾಹರಣೆ ನೀಡಿದ ಅವರು, ‘ತಾಳ್ಮೆಯಿಂದ ಎಲ್ಲವನ್ನೂ ಆಲಿಸಿದ ದೇವೇಗೌಡರು, ಸಭೆಯ ಸಾರಾಂಶವನ್ನು ವಿವರಿಸಿದರು. ಆದರೆ, ಕೆಲವರು ಇವರು ಸಭೆಯಲ್ಲೇ ನಿದ್ರೆ ಮಾಡಿದ್ದಾರೆ ಎಂದೇ ಭಾವಿಸಿದ್ದರು. ಪ್ರತಿ ದಿನ ಹತ್ತಾರು ಸಭೆಗಳನ್ನು ನಡೆಸುತ್ತಿದ್ದ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು ಸಹ ಕಡಿಮೆ. ಹೀಗಾಗಿ, ನಿದ್ರಾಹೀನತೆಯೂ ಅವರನ್ನು ಕಾಡುತ್ತಿತ್ತು’ ಎಂದು ವಿವರಿಸಿದರು.

‘ನಾನು ಅವರ ಜೀವನ ಚರಿತ್ರೆಯನ್ನು ಬರೆಯುವಾಗ ದೇವೇಗೌಡರು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಪ್ರಜಾಸತ್ತಾತ್ಮಕ ರೀತಿಯಲ್ಲಿ ವರ್ತಿಸಿದರು’ ಎಂದು ಹೇಳಿದರು.

ಹಿಂದಿ ಚಿತ್ರರಂಗದ ಲಕ್ಷ್ಮೀಕಾಂತ್‌ – ಪ್ಯಾರೇಲಾಲ್‌ ಜೋಡಿ ಕುರಿತ ಕೃತಿ ರಚನೆಯ ಸಂದರ್ಭಗಳನ್ನು ಪತ್ರಕರ್ತ ರಾಜೀವ್‌ ವಿಜಯಕರ್‌ ನೆನಪಿಸಿಕೊಂಡರು. ‘ಡಿಸ್‌ರಪ್ಟರ್‌: ಹೌ ವಿ.ಪಿ. ಸಿಂಗ್‌ ಶೂಕ್‌ ಇಂಡಿಯಾ’ ಕೃತಿ ರಚಿಸಿರುವ ಪತ್ರಕರ್ತ ದೇಬಾಶಿಶ್‌ ಮುಖರ್ಜಿ ಅವರು, ವಿ.ಪಿ. ಸಿಂಗ್‌ ಮತ್ತು ರಾಜೀವ್‌ ಗಾಂಧಿ ಅವರ ಒಡನಾಟ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT