ಸೋಮವಾರ, ಜುಲೈ 4, 2022
24 °C

ಎಲ್ಲ ಪಕ್ಷಗಳಲ್ಲೂ ಅಧಿಕಾರ ದಾಹದ ನರಿಬುದ್ಧಿ ನಾಯಕರಿದ್ದಾರೆ: ರಮೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಧಿಕಾರ ದಾಹ ಹೊಂದಿದ ನರಿ ಬುದ್ಧಿಯ ರಾಜಕೀಯ ಮುಖಂಡರು ಎಲ್ಲ ಪಕ್ಷಗಳಲ್ಲೂ ಇದ್ದಾರೆ’ ಎಂದು ಪ್ರಸಕ್ತ ರಾಜಕೀಯ ಸ್ಥಿತಿಯನ್ನು ಶಾಸಕ ಕೆ.ಆರ್. ರಮೇಶ್ ಕುಮಾರ್ ವಿಶ್ಲೇಷಿಸಿದರು.

ದೇಸಿ ಪುಸ್ತಕ ಸಂಸ್ಥೆ ಜೈನ್ ಕಾಲೇಜಿನಲ್ಲಿ ಭಾನುವಾರ ಆಯೋ ಜಿಸಿದ್ದ ಶಿಕ್ಷಣ ತಜ್ಞ ಪ್ರೊ.ಕೆ.ಈ. ರಾಧಾ ಕೃಷ್ಣ ಅವರ ‘ಒಂದು + ಮತ್ತು ನೂರು ಕಥೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜಕೀಯದಲ್ಲಿ ನಾವು ನರಿಗಳು. ನಮಗೆ ರಾಜರಾಗುವ ಆಸೆ ಇರುತ್ತದೆ. ಆದರೆ, ನರಿಗಳು ರಾಜನಾಗಲು ಹುಲಿ, ಸಿಂಹಗಳು ಬಿಡುತ್ತವೆಯೇ? ಹೀಗಾಗಿ ಹುಲಿ, ಸಿಂಹಗಳನ್ನು ನಂಬಿಸಲು ನಾವೆಲ್ಲ ಬಣ್ಣ ಹಾಕಿಕೊಂಡಿದ್ದೇವೆ’ ಎಂದರು.

‘ಹೀಗೆ ಬಣ್ಣ ಹಾಕಿಕೊಂಡು ನಿಭಾಯಿಸುತ್ತಿರುವಾಗ ಒಮ್ಮೆ ಜೋರು ಮಳೆ ಬಿದ್ದು, ಹಚ್ಚಿದ್ದ ಬಣ್ಣ ನೀರಿನಲ್ಲಿ ತೋಯ್ದು ಹೋಗುತ್ತದೆ. ಈ ಪೀಡೆ ಹೋಯಿತು ಎಂದು ನಿಟ್ಟಿಸಿರು ಬಿಡುವ ವೇಳೆಗೆ ಆಕಾಶದಿಂದ ಹದ್ದು ಹಾರಿ ಬರುತ್ತದೆ. ಆ ಹದ್ದು ದೇವರೆಂದು ಭಾವಿಸಿ ನಾವು ಬಣ್ಣ ಕಳೆದುಕೊಂಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತೇವೆ. ಇದೇ ರಾಜಕೀಯ’ ಎಂದರು.

‘ರಾಜಕೀಯ ಪಕ್ಷಗಳಲ್ಲಿ ನರಿಗಳ ರೀತಿಯಲ್ಲಿ ನಾಯಕರು ಇದ್ದಂತೆ, ಬೊಗಳುವ ನಾಯಿಗಳಂಥ, ಹಾವು ಗಳಂಥ ನಾಯಕರೂ ಇದ್ದಾರೆ. ಅವು ಕೆಲವೊಮ್ಮೆ ಕಚ್ಚಿದರೆ ಇನ್ನೂ ಕೆಲವೊಮ್ಮೆ ಕಚ್ಚುವುದಿಲ್ಲ. ಕೆಲವು ಸಂದರ್ಭದಲ್ಲಿ ನಾವು ಎಲ್ಲಿದ್ದರೂ ಹುಡುಕಿಕೊಂಡು ಬಂದು ಕಚ್ಚಿ ಹೋಗುತ್ತವೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಅತ್ಯಂತ ಅಮಾನವೀಯವಾದುದು. ಈ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿ ಕೂಡಾ ಖಂಡನೀಯ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಟ ವಿಜಯ್ ರಾಘವೇಂದ್ರ ಮಾತನಾಡಿ, ‘ರಾಧಾಕೃಷ್ಣ ಅವರು ನನ್ನ ಗುರು. ಅವರು ವಿದ್ಯೆ ಮತ್ತು ಶಿಸ್ತು ಸೇರಿ ಎಲ್ಲವನ್ನೂ ಕಲಿಸಿದ್ದಾರೆ. ವಿಶೇಷವಾಗಿ ಕಾಲೇಜಿನಲ್ಲಿ ಓದುವಾಗ ನನಗೆ ಕಲೆಯ ಮಹತ್ವದ ಮನವರಿಕೆ ಮಾಡಿಕೊಟ್ಟಿದ್ದರು. ಅವರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು’ ಎಂದರು.

ಹೋರಾಟಗಾರ್ತಿ ಅಕ್ಕಯ್‌ ಪದ್ಮಸಾಲಿ, ನಿರಂಜನ್ ಆರ್. ಭಟ್, ಲೇಖಕ ಪ್ರೊ.ಕೆ. ಈ. ರಾಧಾಕೃಷ್ಣ, ಗಮಕಿ ಎಂ.ಆರ್‌. ಸತ್ಯನಾರಾಯಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು