ಶನಿವಾರ, ಫೆಬ್ರವರಿ 4, 2023
17 °C

ಬಿಜೆಪಿ ಯಾತ್ರೆಯಾದ ಕೆಂಪೇಗೌಡ ರಥ: ದಾಸರಹಳ್ಳಿ ಶಾಸಕ ಆರ್.ಮಂಜುನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಂಪೇಗೌಡರ ಪ್ರತಿಮೆಗೆ ಮೃತ್ತಿಕೆ ಮತ್ತು ಜಲ ಸಂಗ್ರಹಿಸುವ ರಥದಲ್ಲಿ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಮತ್ತು ಎಚ್.ಡಿ.ದೇವೇಗೌಡರ ಭಾವಚಿತ್ರ ಹಾಕದಿರುವುದನ್ನು ಖಂಡಿಸಿ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಯಾತ್ರೆ ಉದ್ಘಾಟನೆಗೆ ಹಿಂದೇಟು ಹಾಕಿದರು.

ಶೆಟ್ಟಿಹಳ್ಳಿಯಿಂದ ಹೊರಟ ರಥದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ದೊಡ್ಡ ಭಾವಚಿತ್ರವಿದ್ದು, ಬಿ.ಎಸ್.ಯಡಿಯೂರಪ್ಪ, ಸಚಿವರಾದ ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ್, ವಿ.ಸೋಮಣ್ಣ, ಎಸ್‌.ಟಿ. ಸೋಮಶೇಖರ್, ಬೈರತಿ ಬಸವರಾಜ್, ಕೆ.ಗೋಪಾಲಯ್ಯ, ಮುನಿರತ್ನ, ಸಂಸದ ಡಿ.ವಿ.ಸದಾನಂದಗೌಡ ಅವರ ಭಾವಚಿತ್ರಗಳು ಇದ್ದವು.

ಇದನ್ನು ಕಂಡ ಶಾಸಕ ಆರ್.ಮಂಜುನಾಥ್ ಯಾತ್ರೆ ಉದ್ಘಾಟನೆಗೆ ನಿರಾಕರಿಸಿದರು. ‘ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ ಸೇರಿ ಯಾರ ಭಾವಚಿತ್ರವನ್ನೂ ಹಾಕಿಲ್ಲ. ಪ್ರಧಾನಿ ಸ್ಥಾನಕ್ಕೆ ಏರಿದ ಏಕೈಕ ಕನ್ನಡಿಗ ರಾದ ಎಚ್‌.ಡಿ.ದೇವೇಗೌಡರ ಭಾವಚಿತ್ರವನ್ನೂ ಹಾಕಿಲ್ಲ. ಸರ್ಕಾರಿ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕ್ರಮವನ್ನಾಗಿ ಪರಿವರ್ತಿಸಿಕೊಳ್ಳಲಾಗಿದೆ. ಈ ರಥವನ್ನು ನಾನು ಉದ್ಘಾಟನೆ ಮಾಡಬೇಕೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಸಚಿವರ ಭಾವಚಿತ್ರ ಹಾಕಿಕೊಳ್ಳಲು ನಮ್ಮ ವಿರೋಧ ಇಲ್ಲ. ಬೇಕೆಂದೆ ಈ ಸಮುದಾಯದ ಗಣ್ಯರ ಭಾವಚಿತ್ರಗಳನ್ನು ಕೈಬಿಡಲಾಗಿದೆ. ಅಧಿಕಾರಿಗಳಿಗೂ ಬಿಜೆಪಿ ಶಾಲು ಹಾಕಿಸಿ ಕೆಲಸ ಮಾಡಿಸುವ ಕಾಲ ದೂರ ಇಲ್ಲ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಅಧಿಕಾರಿಗಳು ಮಂಜುನಾಥ್ ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಯಾವುದೇ ಕಾರಣಕ್ಕೂ ಉದ್ಘಾಟನೆ ಮಾಡಬಾರದು ಎಂದು ಕಾರ್ಯಕರ್ತರೂ ಅಸಮಾಧಾನ
ವ್ಯಕ್ತಪಡಿಸಿದರು.

‘ಅಧಿಕಾರಿಗಳು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಕೆಂಪೇಗೌಡರಿಗೆ ಗೌರವ ತೋರಿಸುವುದು ನನ್ನ ಕರ್ತವ್ಯ. ಆದ್ದರಿಂದ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು