ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಮರಣಪತ್ರ: ಗೃಹಿಣಿ ಆತ್ಮಹತ್ಯೆ

Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಉಪನಗರದ ವಿಶ್ವೇಶ್ವರಯ್ಯ ಬಡಾವಣೆ ಮನೆಯೊಂದರಲ್ಲಿ ಪವಿತ್ರಾ ಆರ್. (35) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

‘ಫೈನಾನ್ಸ್‌ ಕಂಪನಿಯೊಂದರಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಪವಿತ್ರಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಜುಲೈ 2ರಂದು ಪತ್ತೆಯಾಗಿದೆ. ಸಾವಿಗೂ ಮುನ್ನ ಪವಿತ್ರಾ, ತಮ್ಮ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಮರಣಪತ್ರ ಪ್ರಕಟಿಸಿದ್ದಾರೆ. ಅದನ್ನು ಆಧರಿಸಿ ತಾಯಿ ದೂರು ನೀಡಿದ್ದಾರೆ. ಪತಿ ಚೇತನ್‌ ಗೌಡ ಹಾಗೂ ಈತನ ಪ್ರೇಯಸಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಕೆಂಗೇರಿ ಪೊಲೀಸರು ಹೇಳಿದರು.

‘ಪವಿತ್ರಾ ಅವರು 2006ರಲ್ಲಿ ನರಸಿಂಹಮೂರ್ತಿ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ ಹೆಣ್ಣು ಮಗಳಿದ್ದಾಳೆ. ಕೆಲ ವರ್ಷ ಚೆನ್ನಾಗಿದ್ದ ದಂಪತಿ ನಡುವೆ ವೈಮನಸ್ಸು ಬೆಳೆದಿತ್ತು. ಪವಿತ್ರಾ ಅವರು ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 2019ರಲ್ಲಿ ವಿಚ್ಛೇದನ ಸಿಕ್ಕಿತ್ತು. ನಂತರ, ದಂಪತಿ ಬೇರೆ ಬೇರೆಯಾಗಿದ್ದರು’ ಎಂದು ತಿಳಿಸಿದರು.

‘ಚೇತನ್‌ ಗೌಡ ಮಾಲೀಕತ್ವದ ಫೈನಾನ್ಸ್ ಕಂಪನಿಯಲ್ಲಿಯೇ ಪವಿತ್ರಾ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದರು. ಇದು ಪವಿತ್ರಾ ಅವರಿಗೆ ಎರಡನೇ ಮದುವೆಯಾಗಿತ್ತು.  ಇತ್ತೀಚಿನ ದಿನಗಳಲ್ಲಿ ದಂಪತಿ ನಡುವೆ ಜಗಳ ಶುರುವಾಗಿತ್ತು. ಇದರ ಬೆನ್ನಲ್ಲೇ ಆರೋಪಿ ಚೇತನ್, ಬೇರೊಬ್ಬ ಮಹಿಳೆ ಜೊತೆ ಸಲುಗೆ ಇಟ್ಟುಕೊಂಡಿದ್ದರೆಂದು ಹೇಳಲಾಗಿದೆ. ಈ ವಿಷಯ ಗೊತ್ತಾಗಿ ಪೂಜಾ ಮತ್ತಷ್ಟು ನೊಂದಿದ್ದರು’ ಎಂದರು.

‘ಮಹಿಳೆ ಸಹವಾಸ ಬಿಡುವಂತೆ ಪತಿಗೆ ತಾಕೀತು ಮಾಡಿದ್ದರು. ಅದಕ್ಕೆ ಒಪ್ಪದ ಚೇತನ್, ಪವಿತ್ರಾ ಅವರಿಗೆ ವಿನಾಕಾರಣ ಕಿರುಕುಳ ನೀಡಲಾರಂಭಿಸಿದ್ದರು. ನೊಂದ ಪವಿತ್ರಾ, ‘ನನ್ನ ಸಾವಿಗೆ ಚೇತನ್ ಗೌಡ ಹಾಗೂ ಪತಿ ಜೊತೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆ ಕಾರಣ’ ಎಂದು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಗತಿ ದೂರಿನಲ್ಲಿದೆ’ ಎಂದು ಹೇಳಿದರು.

‘ಅಪರಾಧ ಸಂಚು, ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಚೇತನ್‌ ಗೌಡ ಹಾಗೂ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ. ಪವಿತ್ರಾ ಅವರಿಗೆ ಸೇರಿದ್ದ ದಿನಚರಿ ಪುಸ್ತಕ ಹಾಗೂ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಿ, ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT