ಗುರುವಾರ , ಮಾರ್ಚ್ 4, 2021
25 °C

ಬಾಂಗ್ಲಾ ನೆವ: ಅನ್ನ ಅರಸಿ ಬಂದವರ ಸೂರು ನೆಲಸಮ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅನ್ನ ಅರಸಿ ಬೆಂಗಳೂರಿಗೆ ಬಂದಿದ್ದೇನೆ. ಕಡಿಮೆ ಬಾಡಿಗೆ ಎಂಬ ಕಾರಣಕ್ಕೆ ಜೋಪಡಿಯಲ್ಲಿ ಉಳಿದುಕೊಂಡಿದ್ದೆ. ಬಾಂಗ್ಲಾದೇಶದ ಪ್ರಜೆ ಎಂಬ ಪಟ್ಟ ಕಟ್ಟಿ ನನ್ನ ಜೋಪಡಿಯನ್ನೇ ನೆಲಸಮ ಮಾಡಲಾಗಿದೆ. ಬದುಕು ಬೀದಿಗೆ ಬಂದಿದೆ..’–ಇದು ಕೊಪ್ಪಳದ ಕಾರ್ಮಿಕ ಕಾರಣ್ಣ ಅವರ ಅಳಲು.

ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು, ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿದ್ದ ಸ್ಥಳೀಯ ಕಾರ್ಮಿಕರ ಜೋಪಡಿಗಳನ್ನು ಭಾನುವಾರ ಏಕಾಏಕಿ ನೆಲಸಮ ಮಾಡಿದ್ದಾರೆ.

‘ಜೋಪಡಿ ತೆರವು ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ, ‘ನೀನು ಬಾಂಗ್ಲಾದವನು. ಇಲ್ಲಿ ಇರಬೇಡ. ವಾಪಸ್‌ ಹೋಗು’ ಎಂದು ಅಧಿಕಾರಿಗಳು ಗದರಿಸಿದರು. ಅವರ ಮಾತು ಕೇಳಿ ದಂಗಾದೆ. ಕೊಪ್ಪಳ ಹೇಗೆ ತಾನೇ ಬಾಂಗ್ಲಾದೇಶವಾಗುತ್ತದೆ’ ಎಂದು ಕಾರಣ್ಣ ಪ್ರಶ್ನಿಸುತ್ತಲೇ ಕಣ್ಣೀರಿಟ್ಟರು.  

‘ಕೊಪ್ಪಳದ ಊರಿನ ದಾಖಲೆ ತೋರಿಸಿದರೂ ನೋಡುವ ತಾಳ್ಮೆ ಅಧಿಕಾರಿಗಳಿಗೆ ಇರಲಿಲ್ಲ. ಊರಲ್ಲಿ ಕೆಲಸವಿಲ್ಲವೆಂದು ಇಲ್ಲಿಗೆ ಬಂದೆ. ಈಗ ಅದಕ್ಕೂ ಕುತ್ತು ಬಂದಿದೆ. ಎರಡು ದಿನದಿಂದ ಖುಲ್ಲಾ ಜಾಗದಲ್ಲೇ ಮಲಗಿ ಕೆಲಸಕ್ಕೆ ಹೋಗಿ ಬರುತ್ತಿದ್ದೇನೆ’ ಎಂದು ಹೇಳಿದರು.  

ಜಾಗದ ಮಾಲೀಕರಿಗೆ ತಿಂಗಳಿಗೆ ₹ 3 ಸಾವಿರ ಬಾಡಿಗೆ ಕೊಟ್ಟು ವಾಸವಿದ್ದ ಕಾರ್ಮಿಕರು ಈಗ ರಸ್ತೆಗೆ ಬಿದ್ದಿದ್ದಾರೆ. ಘಟನೆಯಿಂದ ವಿಚಲಿತರಾಗಿರುವ ಕಾರ್ಮಿಕರ ಮಕ್ಕಳು ಶಾಲೆಗೂ ಹೋಗುತ್ತಿಲ್ಲ.

ಜೀವನವೇ ನೆಲಸಮ: ‘ಜೋಪಡಿಯಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದೆ. ಈಗ ಬೀದಿಗೆ ಬಂದಿದ್ದೇನೆ’ ಎಂಬುದು ಕೋಲಾರದ ಅಯೂಬ್ ಬೇಗ್ ನೋವಿನ ನುಡಿ.

ನೀರು, ವಿದ್ಯುತ್ ಕಡಿತ: ಜೋಪಡಿಗಳಲ್ಲಿ ವಾಸವಿರುವ ಜನರಿಗೆ ನೀರು, ವಿದ್ಯುತ್ ಕಡಿತ ಮಾಡಲಾಗಿದೆ. ನೀರಿನ ಟ್ಯಾಂಕರ್ ಹೋಗದಂತೆ ರಸ್ತೆಗಳನ್ನು ಅಗೆಯಲಾಗಿದೆ.

‘ಬಾಂಗ್ಲಾ ಪ್ರಜೆಗಳು ಪರಾರಿ’
‘ಕೆಲ ಜೋಪಡಿಗಳಲ್ಲಿ ಬಾಂಗ್ಲಾದೇಶದ ಪ್ರಜೆಗಳಿದ್ದರು’ ಎಂಬುದನ್ನು ಸ್ಥಳೀಯರೇ ಒಪ್ಪಿಕೊಳ್ಳುತ್ತಾರೆ.

‘ಬಾಂಗ್ಲಾದವರು ಎಂಬುದು ನಮಗೂ ಗೊತ್ತಿರಲಿಲ್ಲ. ತಿಂಗಳ ಹಿಂದಷ್ಟೇ ಪೊಲೀಸರು ಪ್ರತಿ ಜೋಪಡಿಗೂ ಬಂದು ತಪಾಸಣೆ ಮಾಡಿದ್ದರು. ಅದಾದ ಮರುದಿನವೇ ಬಾಂಗ್ಲಾದವರು ಪರಾರಿಯಾಗಿದ್ದಾರೆ’ ಎಂದು ಸ್ಥಳೀಯ ಕಾರ್ಮಿಕರು ಹೇಳಿದರು.

‘ಪೊಲೀಸರೇ ಪ್ರಮಾಣ ಪತ್ರ ಕೊಟ್ಟಿದ್ದಾರೆ’
‘ಮೂರೂವರೆ ವರ್ಷದಿಂದ ನಗರದಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದು, ಕಡಿಮೆ ಬಾಡಿಗೆ ಎಂಬ ಕಾರಣಕ್ಕೆ ಜೋಪಡಿಯಲ್ಲಿ ಇದ್ದೆ. ನನ್ನ ದಾಖಲೆಗಳನ್ನು ನೋಡಿ ಬೆಳ್ಳಂದೂರು ಪೊಲೀಸರೇ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಅದಕ್ಕೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ’ ಎಂದು ಮಿಜೋರಾಂನ ಮೇಘನಾಥ್ ಚಕ್ಮಾ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು