ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಯತ್ರಿ ದೇವಿ ಉದ್ಯಾನ’ ನಿರ್ವಹಣೆ ಕೊರತೆ

ಮೂಲ ಸೌಕರ್ಯ ಹೆಚ್ಚಿಸುವಂತೆ ಸಾರ್ವಜನಿಕರ ಮನವಿ * ಮುರಿದುಬಿದ್ದಿರುವ ಆಟದ ಪರಿಕರಗಳು
Last Updated 3 ಮೇ 2022, 4:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರದ ಪ್ರಕಾಶನಗರ ವಾರ್ಡ್‌ನ ಮರಿಯಪ್ಪನ‍ಪಾಳ್ಯದಲ್ಲಿರುವ ಗಾಯತ್ರಿ ದೇವಿ ಉದ್ಯಾನವು ನಿರ್ವಹಣೆಯಲ್ಲಿ ಹಿಂದುಳಿದಿದೆ. ಸಾವಿರಕ್ಕೂ ಹೆಚ್ಚು ಮಂದಿ ವಾಯುವಿಹಾರ ಮಾಡುವ ಉದ್ಯಾನದಲ್ಲಿ ಮೂಲ ಸೌಕರ್ಯಗಳು ಇದ್ದೂ ಇಲ್ಲದಂತಾಗಿವೆ ಎನ್ನುವುದು ಇಲ್ಲಿನ ಸಾರ್ವಜನಿಕರ ಅಳಲು.

ಉದ್ಯಾನ ಮೊದಲಿಗೆ ಉತ್ತಮವಾಗಿತ್ತು. ಇತ್ತೀಚೆಗೆ ನಿರ್ವಹಣಾ ಕೊರತೆಯಿಂದ ದುಃಸ್ಥಿತಿಗೆ ತಲುಪುತ್ತಿದ್ದು, ಸಂಬಂಧಪಟ್ಟವರು ಉದ್ಯಾನದ ಅಭಿವೃದ್ಧಿಗೆ ಒತ್ತು ನೀಡಿದರೆ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

‘ಉದ್ಯಾನ ಮೇಲ್ನೋಟಕ್ಕೆ ಸುಂದರವಾಗಿ ಕಾಣುತ್ತದೆ. ಆದರೆ, ಉದ್ಯಾನ ಪ್ರವೇಶಿಸಿದರೆ ಅಲ್ಲಿನ ಅವ್ಯವಸ್ಥೆಗಳು ಕಣ್ಣಿಗೆ ರಾಚುತ್ತವೆ. ಉದ್ಯಾನದಲ್ಲಿ ವ್ಯಾಯಾಮಕ್ಕೆಂದೇ ವಯಸ್ಸಾದವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ವ್ಯಾಯಾಮದ ಪರಿಕರಗಳೆಲ್ಲ ಹಾಳಾಗಿ ವರ್ಷಗಳೇ ಕಳೆದಿವೆ’ ಎಂದು ಉದ್ಯಾನದಲ್ಲಿ ವಾಯುವಿಹಾರಕ್ಕೆ ಬರುವ ಗಾಯತ್ರಿ ಹೇಳಿದರು.

‘ಬಹುತೇಕ ವ್ಯಾಯಾಮದ ಪರಿಕರಗಳು ಹಾಳಾಗಿರುವುದರಿಂದ ವಯಸ್ಸಾದವರು ಅವುಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಉದ್ಯಾನಕ್ಕೆ ಬಂದು ಅಸಹಾಯಕರಾಗಿ ಅಲ್ಲಿಂದ ಹಿಂತಿರುಗುತ್ತಾರೆ’ ಎಂದರು.

‘ಉದ್ಯಾನದಲ್ಲಿ ನಡಿಗೆದಾರರೆಲ್ಲವಾಯುವಿಹಾರದ ನಂತರ ‘ನಗೆಕೂಟ’ಕ್ಕೆ ಸೇರುತ್ತಿದ್ದೆವು. ಆವರಣದಲ್ಲಿ ಸಂಜೆ ವೇಳೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಈಗ ನಗೆಕೂಟಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ. ಸೊಳ್ಳೆ ನಿಯಂತ್ರಣ ಔಷಧ ಸಿಂಪಡಿಸುವುದು ಸಮರ್ಪಕವಾಗಿ ನಡೆಯುತ್ತಿಲ್ಲ. ಜನರ ಆರೋಗ್ಯದ ಮೇಲೆ ಕಾಳಜಿಯೇ ಇಲ್ಲ’ ಎಂದು ಅಳಲು ತೋಡಿಕೊಂಡರು.

‘ಮಕ್ಕಳ ಆಟದ ಪರಿಕರಗಳು ಮುರಿದು ಬಿದ್ದಿವೆ. ಕೆಲವು ಆಟದ ಪರಿಕರಗಳಲ್ಲಿ ಆಸನವೇ ಇಲ್ಲ. ಮಕ್ಕಳು ಇದನ್ನೇ ಉಪಯೋಗಿಸುತ್ತಿದ್ದಾರೆ.ವ್ಯಾಯಾಮ ಸಲಕರಣೆಗಳೂ ಮುರಿದಿವೆ. ಈ ಸಲಕರಣೆಗಳಿಗೆ ಹಾಕಿರುವ ತಳಪಾಯ ಸಡಿಲಗೊಂಡು ಅಲುಗಾಡುತ್ತಿವೆ. ಕಬ್ಬಿಣದ ಸಲಕರಣೆಗಳಿಗೆ ಗ್ರೀಸ್‌ ಹಾಕದ ಕಾರಣಕರ್ಕಶ ಶಬ್ದ ಮಾಡುತ್ತವೆ. ಇದರಿಂದ ಉದ್ಯಾನದಲ್ಲಿ ಕಿರಿಕಿರಿ ಉಂಟಾಗುತ್ತಿದೆ’ ಎನ್ನುತ್ತಾರೆಸ್ಥಳೀಯ ನಿವಾಸಿ ಅಶೋಕ್‌.

‘ಉದ್ಯಾನಗಳು ನಾಗರಿಕರ ಆರೋಗ್ಯ ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತವೆ.ಉದ್ಯಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಪಾಲಿಕೆಯ ಆದ್ಯ ಕರ್ತವ್ಯ. ಆದರೆ, ಪಾಲಿಕೆ ತನ್ನ ಜವಾಬ್ದಾರಿ ಮರೆತಿದೆ’ ಎಂದು ದೂರಿದರು.

ಚಾವಣಿ ಕುಸಿದು ತಿಂಗಳಾಯಿತು: ‘ಉದ್ಯಾನದಲ್ಲಿ ವಿಶ್ರಾಂತಿಗಾಗಿ ನಿರ್ಮಿಸಿರುವ ಸೂರನ್ನು ಯೋಗ, ಧ್ಯಾನ ಇನ್ನಿತರ ಚಟುವಟಿಕೆಗಳಿಗೆ ಉಪಯೋಗಿಸುತ್ತಿದ್ದರು.ವಯಸ್ಸಾದವರು ಹೆಚ್ಚಾಗಿ ವಿಶ್ರಾಂತಿ ಪಡೆಯುತ್ತಿದ್ದರು. ವಿಶ್ರಾಂತಿ ಸ್ಥಳದ ಚಾವಣಿ ಕುಸಿದು ತಿಂಗಳಾದರೂ ದುರಸ್ತಿ ಮಾಡಲು ಯಾರೂ ಮುಂದಾಗಿಲ್ಲ. ಇದರಿಂದ ಅಲ್ಲಿ ಕೂರಲು ಜನ ಹೆದರುತ್ತಿದ್ದಾರೆ. ವಿಶ್ರಾಂತಿ ಸ್ಥಳಗಳು ಶಿಥಿಲಾವಸ್ಥೆ ತಲುಪುತ್ತಿವೆ’ ಎಂದು ವಾಯುವಿಹಾರಕ್ಕೆ ಬರುವ ನಂಜುಂಡ ಬೇಸರ ವ್ಯಕ್ತಪಡಿಸಿದರು.‘ಅಂಗವಿಕಲ ಮಕ್ಕಳಿಗೆ ಮೀಸಲಾಗಿರುವ ಸ್ಥಳ ಸದುಪಯೋಗವಾಗುತ್ತಿಲ್ಲ.ಈ ಸ್ಥಳಕ್ಕೆ ಬೀಗ ಹಾಕಲಾಗಿದೆ. ಅಲ್ಲಿರುವ ಸಲಕರಣೆಗಳೆಲ್ಲ ತುಕ್ಕು ಹಿಡಿಯುತ್ತಿವೆ. ಈ ಸ್ಥಳ ಉಪಯೋಗವಾಗದ ಕಾರಣ ಎಲ್ಲ ಮಕ್ಕಳಿಗೆ ಆಟವಾಡಲು ಅನುವು ಮಾಡಿದರೆ ಒಳ್ಳೆಯದು’ ಎಂದು ಹೇಳಿದರು.

***

‘ಅವಘಡವಾದರೆ ಯಾರು ಹೊಣೆ’
‘ಉದ್ಯಾನದಲ್ಲಿ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಹಾಳಾಗಿದ್ದು, ವಿದ್ಯುತ್ ತಂತಿಗಳು ಎಲ್ಲೆಂದರಲ್ಲಿ ಕಳಚಿಕೊಂಡು ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡುವ ಸ್ಥಿತಿಯಲ್ಲಿವೆ. ಮಕ್ಕಳು ಇದರ ಅಕ್ಕಪಕ್ಕದಲ್ಲೇ ಆಟವಾಡುತ್ತಿರುತ್ತಾರೆ. ಏನಾದರೂ ಅನಾಹುತಗಳಾದರೆ ಯಾರು ಹೊಣೆ? ಕೂಡಲೇ ಈ ಅವ್ಯವಸ್ಥೆ ಸರಿಪಡಿಸಿ.
–ಶ್ಯಾಮ್ ಜುಜಾರೆ ಎಸ್., ನಡಿಗೆದಾರರ

***

‘ಉದ್ಯಾನದಲ್ಲಿ ಭದ್ರತಾ ಲೋಪ’
ಉದ್ಯಾನದಲ್ಲಿ ಭದ್ರತಾ ಲೋಪವೇ ದೊಡ್ಡ ಸಮಸ್ಯೆಯಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನಕ್ಕೆ ಬರುವುದರಿಂದ ಇಲ್ಲಿ ಭದ್ರತಾ ಸಿಬ್ಬಂದಿಯ ಅಗತ್ಯವಿದೆ. ಆದರೆ, ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿಯನ್ನು ಕಂಡು ಬಹಳ ದಿನಗಳಾಯಿತು. ಸಮಸ್ಯೆ ಹೇಳಿಕೊಳ್ಳಲು ಪಾಲಿಕೆ ಸದಸ್ಯರೇ ಇಲ್ಲ. ಪುಂಡರ ಕಾಟ ಇರುವುದರಿಂದ ಭದ್ರತೆಗಾಗಿ ಸಿಬ್ಬಂದಿಯನ್ನು ಶೀಘ್ರವಾಗಿ ನಿಯೋಜಿಸಿ.
–ಪ್ರಶಾಂತ್, ಸಾರ್ವಜನಿಕ

***

ಉದ್ಯಾನದಲ್ಲಿ ಸಮಸ್ಯೆಗಳು ಕೇಳಿ ಬಂದ ಕೂಡಲೇ ಅವುಗಳನ್ನು ಪರಿಹರಿಸಲಾಗುತ್ತಿದೆ. ಆಟದ ಮತ್ತು ವ್ಯಾಯಾಮ ಸಲಕರಣೆಗಳನ್ನು ಶೀಘ್ರದಲ್ಲೇ ಬದಲಾಯಿಸಲಾಗುವುದು.
- ಎಸ್‌.ಸುರೇಶ್‌ ಕುಮಾರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT