ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿಪಿ ಇಲ್ಲದೆ ಅನುಮತಿ ಬೇಡ: ಕೆಎಸ್‌ಪಿಸಿಬಿ ಶಿಫಾರಸು

ಶಿಕಾರಿಪಾಳ್ಯ ಕೆರೆ ಒತ್ತುವರಿ ಮಾಡಿ ಅಪಾರ್ಟ್‌ಮೆಂಟ್‌ ನಿರ್ಮಾಣ
Last Updated 1 ಸೆಪ್ಟೆಂಬರ್ 2022, 21:37 IST
ಅಕ್ಷರ ಗಾತ್ರ

ನವದೆಹಲಿ: ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಹೊಂದಿರದ ಅಪಾರ್ಟ್‌ಮೆಂಟ್‌ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಅನುಮತಿ ನೀಡಬಾರದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಶಿಫಾರಸು ಮಾಡಿದೆ.

ಬೆಂಗಳೂರಿನ ಜಿಗಣಿ ಸಮೀಪದ ಮಾರಗೊಂಡನಹಳ್ಳಿಯ ಶಿಕಾರಿಪಾಳ್ಯ ಕೆರೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೂಚನೆಯ ಮೇರೆಗೆ ಅಧಿಕಾರಿಗಳ ಸಮಿತಿ ವರದಿಯನ್ನು ಸಲ್ಲಿಸಿದೆ. ಆ ವರದಿಯಲ್ಲಿ ಕೆಎಸ್‌ಪಿಸಿಬಿ ಈ ಶಿಫಾರಸು ಮಾಡಿದೆ. ಅಪಾರ್ಟ್‌ಮೆಂಟ್‌ ಸಮುಚ್ಚಯದ ಒಳಗೆ ತ್ಯಾಜ್ಯ ನೀರು ಸಂಸ್ಕರಿಸಿ ಪುನರ್‌ ಬಳಕೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದೂ ಶಿಫಾರಸು ಮಾಡಲಾಗಿದೆ.

ಜಲಕಾಯಕ್ಕೆ ತ್ಯಾಜ್ಯ ನೀರು ಸೇರುತ್ತಿದೆ ಹಾಗೂ ಒತ್ತುವರಿಯಾಗಿದೆ ಎಂದು ಆರೋಪಿಸಿ ಮಣ್ಣಿ ರಂಜನ್‌ ಎಂಬುವರು ಈ ವರ್ಷದ ಮಾರ್ಚ್‌ನಲ್ಲಿ ಎನ್‌ಜಿಟಿಯ ಪ್ರಧಾನ ಪೀಠದ ಮೊರೆ ಹೋಗಿದ್ದರು. ‍ಪ್ರಕರಣದ ವಿಚಾರಣೆ ನಡೆಸಿದ ಪೀಠವು, ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಜಿಲ್ಲಾಧಿಕಾರಿ ಹಾಗೂ ಕೆಎಸ್‌ಪಿಸಿಬಿಯ ‍ಪ್ರತಿನಿಧಿಗಳ ಸಮಿತಿ ರಚಿಸಿ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಅಧಿಕಾರಿಗಳ ತಂಡವು ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಧಾನ ಪೀಠಕ್ಕೆ ಗುರುವಾರ ವರದಿ ಸಲ್ಲಿಸಿದೆ. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 14ಕ್ಕೆ ಮುಂದೂಡಲಾಗಿದೆ.

‘ಕೆಲವುಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಸ್‌ಟಿಪಿಗಳು ಇಲ್ಲ. ಎಸ್‌ಟಿಪಿಗಳನ್ನು ಅಳವಡಿಸುವವರೆಗೆ ತ್ಯಾಜ್ಯ ನೀರು ಸಂಸ್ಕರಣೆಗೆ ಪರ್ಯಾಯ ಹಾಗೂ ವಿಕೇಂದ್ರೀಕೃತ ಸಂಸ್ಕರಣಾ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು’ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಶಿಕಾರಿ‍ಪಾಳ್ಯ ಕೆರೆಗೆ ಆಸು‍ಪಾಸಿನ ಗ್ರಾಮಗಳ ತ್ಯಾಜ್ಯ ನೀರು ಸೇರುತ್ತಿದೆ. ಅದನ್ನು ತಡೆಗಟ್ಟಲು ಸ್ಥಳೀಯ ಸಂಸ್ಥೆಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದುಸಮಿತಿ ಸೂಚಿಸಿದ್ದು, ಜಲಕಾಯದ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಎಲ್ಲ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಪರಿಸರ ಲೆಕ್ಕಪರಿಶೋಧನೆ ನಡೆಸಬೇಕು. ಆಗ ಅಪಾರ್ಟ್‌ಮೆಂಟ್‌ಗಳ ಎಸ್‌ಟಿಪಿಗಳ ಸ್ಥಿತಿಗತಿ ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಗ್ರಾಮದ ಸರ್ವೆ ಸಂಖ್ಯೆ 110ರಲ್ಲಿ 18 ಎಕರೆ 39 ಗುಂಟೆ ಪ್ರದೇಶದಲ್ಲಿ ಕೆರೆ ಇದೆ. ಜಲಕಾಯದ 1 ಎಕರೆ 38 ಗುಂಟೆ ಒತ್ತುವರಿಯಾಗಿದೆ ಎಂಬುದನ್ನು ಬೆಂಗಳೂರು ನಗರ ಜಿಲ್ಲಾಡಳಿತ ಒಪ್ಪಿಕೊಂಡಿತ್ತು. ಜುಲೈನಲ್ಲಿ ಕಾರ್ಯಾಚರಣೆ ನಡೆಸಿ 1 ಎಕರೆ 30 ಗುಂಟೆಯ ಒತ್ತುವರಿ ತೆರವುಗೊಳಿಸಲಾಗಿದೆ. 8 ಗುಂಟೆ ಪ್ರದೇಶದಲ್ಲಿ ಸರ್ಕಾರಿ ಉರ್ದು ಶಾಲೆ ಇದ್ದು, ಅದರ ಒತ್ತುವರಿ ತೆರವು ಬಾಕಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೆರೆಯ ಪುನರುಜ್ಜೀವನದ ಕಾರ್ಯ ಶೇ 90ರಷ್ಟು ಪೂರ್ಣಗೊಂಡಿದ್ದು, ಗಿಡಗಳನ್ನು ನೆಡುವುದು ಸೇರಿದಂತೆ ಸಣ್ಣಪುಟ್ಟ ಕಾರ್ಯಗಳು ಬಾಕಿ ಇವೆ. ಈ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT