ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ: 13 ವರ್ಷಗಳ ಕನವರಿಕೆ, 17 ಹಳ್ಳಿಗಳ ಜನರ ಅತಂತ್ರ ಬದುಕು

ಶಿವರಾಮ ಕಾರಂತ ಬಡಾವಣೆ
Last Updated 7 ಮಾರ್ಚ್ 2021, 21:26 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಿರುವ ಮನೆಗಳು ಉಳಿಯುವ ಖಾತರಿ ಇಲ್ಲ, ಆದರೂ ಮನೆ ಕಟ್ಟುವುದು ನಿಂತಿಲ್ಲ. ಭೂಸ್ವಾಧೀನದ ಕನವರಿಕೆಯಲ್ಲೇ 13 ವರ್ಷಗಳಿಂದ ಸಾಗಿದ ಬದುಕು... ಇದು ಉತ್ತರ ಬೆಂಗಳೂರಿನ 17 ಹಳ್ಳಿಗಳ ಜನರ ಅತಂತ್ರ ಸ್ಥಿತಿ.

ಡಾ.ಕೆ.ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಪಡಿಸುವ ಉದ್ದೇಶಕ್ಕೆ 3,546 ಎಕರೆ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 2008ರಲ್ಲಿ ಮೊದಲ ಅಧಿಸೂಚನೆ ಹೊರಡಿಸಿತು. ಇದನ್ನು ಪ್ರಶ್ನಿಸಿ ಹಲವರು ಹೈಕೋರ್ಟ್‌ ಮೊರೆ ಹೋದರು. ಬಿಡಿಎ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ಏಕಸದಸ್ಯ ಪೀಠ2014ರಲ್ಲಿ ‌ ರದ್ದುಗೊಳಿಸಿತು. ಬಿಡಿಎ ಅಧಿಕಾರಿಗಳು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದರು. ಏಕ ಸದಸ್ಯ ಪೀಠದ ಆದೇಶವನ್ನೇ ದ್ವಿಸದಸ್ಯ ಪೀಠ ಎತ್ತಿ ಹಿಡಿಯಿತು.

ಅಲ್ಲಿಗೆ ರೈತರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ‌ಸುಪ್ರೀಂ ಕೋರ್ಟ್‌ಗೆ ಬಿಡಿಎ ಮೇಲ್ಮನವಿ ಸಲ್ಲಿಸಿತು. ಹೈಕೋರ್ಟ್‌ ಆದೇಶವನ್ನು 2018ರ ಆಗಸ್ಟ್ 3ರಂದು ರದ್ದುಪಡಿಸಿದ ಸುಪ್ರೀಂ ಕೋರ್ಟ್‌, ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸುವಂತೆ ಆದೇಶ ನೀಡಿತು. ಅಲ್ಲದೇ, ಈ ಆದೇಶದ ಬಳಿಕ ‌ಕಟ್ಟಡಗಳು ನಿರ್ಮಾಣವಾಗಿದ್ದರೆ ಅವುಗಳನ್ನು ತೆರವುಗೊಳಿಸಬೇಕು ಎಂದು 2020ರ ಡಿಸೆಂಬರ್ 20ರಂದು ಮತ್ತೊಂದು ಆದೇಶ ಹೊರಡಿಸಿತು.

ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಗಿಯುವಷ್ಟರಲ್ಲಿ 10 ವರ್ಷಗಳು ಕಳೆದು ಹೋಗಿದ್ದವು. ಅಷ್ಟರಲ್ಲಿ ಹಲವು ಬಡಾವಣೆಗಳ ಅಭಿವೃದ್ಧಿಗೆ ಅನುಮತಿಯನ್ನೂ ಬಿಡಿಎ ನೀಡುತ್ತಾ ಬಂದಿತು. ಕೆಲವರು ಬಿಡಿಎ ಅನುಮತಿ ಪಡೆದಿದ್ದರೆ, ಹಲವರು ಗ್ರಾಮ ಪಂಚಾಯಿತಿಗಳಿಂದ ಅನುಮತಿ ಪಡೆದುಕೊಂಡು ಮನೆಗಳನ್ನು ನಿರ್ಮಿಸಿಕೊಂಡರು. ಭೂಪರಿವರ್ತನೆ, ಭೂಪರಭಾರೆಗಳೂ ಆಗಿವೆ. ಬಡಾವಣೆಗೆ ಗುರುತಿಸಿದ್ದ ಜಾಗದಲ್ಲಿ ಸಾವಿರಾರು ಮನೆಗಳು ನಿರ್ಮಾಣಗೊಂಡಿವೆ.

ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸುವಂತೆ 2018ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಮನೆಗಳ ನಿರ್ಮಾಣ ನಿಲ್ಲಲಿಲ್ಲ. ತ್ವರಿತಗತಿಯಲ್ಲೇ ಕಟ್ಟಡಗಳನ್ನು ನಿರ್ಮಿಸಿದ್ದಾರೆ, ಈಗಲೂ ನಿರ್ಮಿಸುತ್ತಲೇ ಇದ್ದಾರೆ. 17 ಹಳ್ಳಿಗಳೂ ಈಗಾಗಲೇ ಹಳ್ಳಿಯ ಸೊಗಡಿನಿಂದ ಕಳಚಿಕೊಂಡು ನಗರ ಸ್ವರೂಪ ಪಡೆದುಕೊಳ್ಳುತ್ತಿವೆ. ಅಲ್ಲಲ್ಲೇ ಅಪಾರ್ಟ್‌ಮೆಂಟ್‌ ಸಮುಚ್ಚಯಗಳೂ ತಲೆ ಎತ್ತಿ ನಿಂತಿವೆ.

ಇದರ ಜತೆಗೆ ಕೃಷಿ ಭೂಮಿಯೂ ಇದೆ. ಕೆಲವರು ಭೂಮಿ ಹೊಂದಿದ್ದರೂ ಮನೆ ಕಟ್ಟುವ ಗೋಜಿಗೆ ಹೋಗಿಲ್ಲ. ‘ಗೊಂದಲ ಇರುವ ಕಾರಣ ನಿವೇಶನವಾಗಿ ಪರಿವರ್ತಿಸಿಲ್ಲ. ಇಲ್ಲಿ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವುದರಿಂದ ಜಾಗ ಮಾರಾಟ ಮಾಡಲಿಕ್ಕೂ ಆಗುವುದಿಲ್ಲ. ಮಕ್ಕಳ ಮದುವೆ ಮಾಡಲೂ ಕಷ್ಟಪಡುತ್ತಿದ್ದೇವೆ’ ಎನ್ನುತ್ತಾರೆ ರೈತರು.

ದಾಖಲೆಗಳ ಪರಿಶೀಲನೆ ಚುರುಕು
2008ರಿಂದ 2018ರ 10 ವರ್ಷಗಳ ಅವಧಿಯಲ್ಲಿ ನಿರ್ಮಾಣ ಆಗಿರುವ ಮನೆಗಳೆಷ್ಟು, ಸದ್ಯದ ಅಲ್ಲಿನ ಪರಿಸ್ಥಿತಿ ಏನು ಎಂಬುದನ್ನು ತಿಳಿದುಕೊಳ್ಳಲು ಮುಂದಾಗಿರುವ ಸುಪ್ರೀಂ ಕೋರ್ಟ್‌, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ನೇತೃತ್ವದ ಸಮಿತಿಯೊಂದನ್ನು 2020ರ ಡಿಸೆಂಬರ್ 3ರಂದು ನೇಮಿಸಿದೆ.

ನಿವೃತ್ತ ಐಎಎಸ್ ಅಧಿಕಾರಿ ಜೈಕರ್‌ ಜೆರೋಮ್, ನಿವೃತ್ತ ಡಿಜಿಪಿ ಎಸ್‌.ಟಿ. ರಮೇಶ್ ಅವರನ್ನು ಸಮಿತಿ ಸದಸ್ಯರನ್ನಾಗಿ ಮಾಡಿದೆ.

ಶಿವರಾಮ ಕಾರಂತ ಬಡಾವಣೆಯ ವೈಮಾನಿಕ ಸರ್ವೆ ನಡೆದಿದೆ. ಅದರ ಪ್ರಕಾರ 2008ಕ್ಕೂ ಮುನ್ನ 2 ಸಾವಿರದಷ್ಟು ಮನೆಗಳಿದ್ದರೆ, 2018ರ ವೇಳೆಗೆ 7 ಸಾವಿರಕ್ಕೂ ಹೆಚ್ಚು ಮನೆಗಳು ನಿರ್ಮಾಣ ಆಗಿವೆ. ಅವುಗಳನ್ನು ನಿಖರವಾಗಿ ಗುರುತಿಸುವ ಕಾರ್ಯವನ್ನು ಸಮಿತಿ ಆರಂಭಿಸಿದೆ.

ಕಟ್ಟಡಗಳ ಮಾಲೀಕರಿಂದ ದಾಖಲೆಗಳನ್ನು ಸಂಗ್ರಹಿಸುತ್ತಿದೆ. ಮೇಡಿ ಅಗ್ರಹಾರದಲ್ಲಿ ಸಹಾಯ ಕೇಂದ್ರವೊಂದನ್ನು ತೆರೆದಿದೆ.

ಇನ್ನೂ ನಾಲ್ಕು ಕಡೆ ಸಹಾಯ ಕೇಂದ್ರ ತೆರೆಯುವ ಉದ್ದೇಶ ಹೊಂದಿದೆ. ಮನೆಗಳ ಮಾಲೀಕರು ದಾಖಲೆಗಳ ಪ್ರತಿಯನ್ನು ಸಮಿತಿಗೆ ಸಲ್ಲಿಸುತ್ತಿದ್ದಾರೆ. ಆರು ತಿಂಗಳಲ್ಲಿ ಸಮಿತಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಬೇಕಿದೆ.

ಅಪಪ್ರಚಾರ ಮಾಡುವುದು ಅಪರಾಧ
‘ಸುಪ್ರೀಂ ಕೋರ್ಟ್‌ ಆದೇಶದಂತೆ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಈ ಸಮಿತಿಗೆ ದಾಖಲೆಗಳನ್ನು ನೀಡಬಾರದು ಎಂದು ಕೆಲವರು ಅಪಪ್ರಚಾರ ಮಾಡುತ್ತಿರುವ ಮಾಹಿತಿ ಬಂದಿದೆ. ಹೀಗೆ ಮಾಡುವುದು ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧ’ ಎಂದು ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಹೇಳಿದರು.

‘ಕಾನೂನುಬದ್ಧವಾಗಿ ಮನೆ ಕಟ್ಟಿದ್ದರೆ ಅವರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ಈ ಕೆಲಸ ಮಾಡುತ್ತಿದೆ. ಇದಕ್ಕೆ ಅಡ್ಡಿಪಡಿಸಿದರೆ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅಗತ್ಯ ಬಿದ್ದರೆ ಅಪಪ್ರಚಾರ ಮಾಡುವವರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ವರದಿ ನೀಡುವ ಹಂತಕ್ಕೂ ಸಮಿತಿ ಹೋಗಬಹುದು’ ಎಂದರು.

‘ಎಲ್ಲರ ದಾಖಲೆಗಳನ್ನು ಗೋಪ್ಯವಾಗಿ ಇಡಲು ಬೇಕಿರುವ ಎಲ್ಲ ವ್ಯವಸ್ಥೆಯನ್ನೂ ನಾವು ಮಾಡಿಕೊಂಡಿದ್ದೇವೆ. ಹೀಗಾಗಿ ಜನ ಭಯಪಡುವ ಅಗತ್ಯ ಇಲ್ಲ’ ಎಂದು ಹೇಳಿದರು.

ತೆರವು ಅನಿವಾರ್ಯ: ಬಿಡಿಎ ಆಯುಕ್ತ
ಸುಪ್ರೀಂ ಕೋರ್ಟ್‌ನ 2018ರ ಆದೇಶದ ಬಳಿಕವೂ ಮನೆಗಳನ್ನು ಕಟ್ಟಿದರೆ ತೆರವುಗೊಳಿಸುವುದು ಅನಿವಾರ್ಯವಾಗಲಿದೆ ಎಂದು ಬಿಡಿಎ ಆಯುಕ್ತ ಎಚ್.ಆರ್.ಮಹದೇವ ತಿಳಿಸಿದರು.

ಆದೇಶ ಉಲ್ಲಂಘಿಸಿ ಮನೆ ಕಟ್ಟಿದ್ದರೆ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶಿಸಿದೆ. ಹೀಗಾಗಿ, ಮನೆಗಳನ್ನು ತೆರವುಗೊಳಿಸಬೇಕಾಗುತ್ತದೆ. ಈಗಲೂ ಮನೆ ಕಟ್ಟುತ್ತಿದ್ದರೆ ನಿಲ್ಲಿಸುವುದು ಒಳ್ಳೆಯದು ಎಂದು ಅವರು ಹೇಳಿದರು.

ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಕೊನೆಯ ಹಂತದಲ್ಲಿರುವ ಪ್ರಕ್ರಿಯೆ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಎಲ್ಲ ನಿರಾಕ್ಷೇಪಣಾ ಪತ್ರಗಳೂ ಅನೂರ್ಜಿತ
ಬಿಡಿಎ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿದೆ. ಈ ಉದ್ದೇಶಕ್ಕಾಗಿಯೇ ಆರು ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ನಿಯೋಜಿಸಿಕೊಂಡಿದೆ.

‘ಹೈಕೋರ್ಟ್‌ ಆದೇಶವನ್ನೇ ಸುಪ್ರೀಂ ಕೋರ್ಟ್ ರದ್ದುಪಡಿಸಿರುವ ಕಾರಣ ಈ ಅವಧಿಯಲ್ಲಿ ಭೂಪರಿವರ್ತನೆ ಅನುಮತಿ, ನಿವೇಶನ ಅಭಿವೃದ್ಧಿ, ಕಟ್ಟಡ ನಿರ್ಮಾಣ ಮತ್ತು ಪರಭಾರೆಗೆ ನೀಡಿರುವ ಎಲ್ಲ ನಿರಾಕ್ಷೇಪಣಾ ಪತ್ರಗಳೂ ಅನೂರ್ಜಿತಗೊಳಿಸಲಾಗಿದೆ’ ಎಂದು ಭೂಸ್ವಾಧೀನ ಆದೇಶದಲ್ಲಿ ಬಿಡಿಎ ಉಲ್ಲೇಖಿಸುತ್ತಿದೆ.

‘ಭೂಪರಿಹಾರ ಮತ್ತು ಹಣದ ರೂಪದ ಪರಿಹಾರ ಎರಡನ್ನೂ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ನಗದು ಪರಿಹಾರವಾಗಿ ಎಕರೆಗೆ ₹80 ಲಕ್ಷದಿಂದ ₹1 ಕೋಟಿ ತನಕ ಸಿಗಲಿದೆ. ಬಹುತೇಕರು ಭೂಪರಿಹಾರವನ್ನೇ ಬಯಸುತ್ತಿದ್ದಾರೆ’ ಎಂದು ಬಿಡಿಎ ಅಧಿಕಾರಿಗಳು ಹೇಳಿದರು.

*

2006ರಲ್ಲಿ ನಿವೇಶನ ಖರೀದಿಸಿ 2018ರಲ್ಲಿ ಮನೆ ಕಟ್ಟಿದ್ದೇವೆ. ಈಗ ಅದು ಉಳಿಯುವುದೋ ಇಲ್ಲವೋ ಗೊತ್ತಿಲ್ಲ. ಆತಂಕದಲ್ಲೇ ದಿನ ದೂಡುತ್ತಿದ್ದೇವೆ.
-ತ್ಯಾಗರಾಜ್, ಬೆಮೆಲ್ ನಿವೃತ್ತ ನೌಕರ

*
ನಿವೇಶನ ಖರೀದಿಸಿ ಮನೆ ಕಟ್ಟಿರುವುದು ನಮ್ಮ ಜೀವಮಾನದ ಸಾಧನೆ. ಈಗ ಅದು ಹೋದರೆ ಏನು ಮಾಡಬೇಕು ಎಂಬುದೆ ಮನೆಯಲ್ಲಿ ಎಲ್ಲರ ಚಿಂತೆ, ಇದರಿಂದ ಎಲ್ಲರ ಆರೋಗ್ಯ ಹಾಳಾಗಿದೆ.
-ವಿಜಯಲಕ್ಷ್ಮಿ, ಲಕ್ಷ್ಮಿಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT