ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಮಳೆ: ಒಡೆದ ರಾಜಕಾಲುವೆ, ಮನೆಗಳಿಗೆ ನುಗ್ಗಿದ ನೀರು

ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ lಟಿ. ದಾಸರಹಳ್ಳಿ ಸುತ್ತಮುತ್ತ ವರುಣನ ಆರ್ಭಟ
Last Updated 21 ನವೆಂಬರ್ 2021, 20:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಟಿ. ದಾಸರಹಳ್ಳಿ, ಯಲಹಂಕ ಸುತ್ತಮುತ್ತ ಭಾನುವಾರ ಸಂಜೆಯಿಂದ ರಾತ್ರಿಯವರೆಗೂ ಜೋರು ಮಳೆಯಾಗಿದ್ದು, ನಾಗಸಂದ್ರ ಕಾಲೊನಿ ಬಳಿ ರಾಜಕಾಲುವೆ ಒಡೆದು ಹಲವು ಮನೆಗಳಿಗೆ ನೀರು ನುಗ್ಗಿತು.

ಹಲವು ದಿನಗಳಿಂದ ಸುರಿಯುತ್ತಿದ್ದ ಮಳೆ, ಭಾನುವಾರ ಬೆಳಿಗ್ಗೆ ಬಿಡುವು ನೀಡಿತ್ತು. ಬಹುತೇಕ ಪ್ರದೇಶಗಳಲ್ಲಿ ಬಿಸಿಲು ಕಾಣಿಸಿಕೊಂಡಿತ್ತು. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಆವರಿಸಿ, ಮಳೆಯೂ ಸುರಿಯಿತು.

ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರುಕ್ಮಿಣಿ ಬಡಾವಣೆ, ಗುಂಡಪ್ಪ ಬಡಾವಣೆ, ಬೆಲ್ಮರ್ ಬಡಾವಣೆ, ರಾಯಲ್ ಎನ್‌ಕ್ಲೇವ್, ಬಿಟಿಎಸ್ ಬಡಾವಣೆ ಹಾಗೂ ಸುತ್ತಮುತ್ತ ಪ್ರದೇಶಗಳ ರಸ್ತೆಯಲ್ಲಿ ನೀರು ಧಾರಾಕಾರವಾಗಿ ಹರಿಯಿತು. ಈ ಭಾಗದಲ್ಲಿ ರಾಜಕಾಲುವೆ ಒತ್ತುವರಿಯಾಗಿರುವ ಆರೋಪವಿದ್ದು, ಅದೇ ರಾಜಕಾಲುವೆಯಲ್ಲಿ ಹರಿದು ಹೋಗಬೇಕಾದ ನೀರು ರಸ್ತೆಗೆ ಹರಿದು ಮನೆಗಳಿಗೆ ನುಗ್ಗಿತು.

ಉದ್ಯಾನ, ಮೈದಾನ, ಖಾಲಿ ನಿವೇಶನ ಸ್ಥಳದಲ್ಲಿ ಎರಡು ಅಡಿಯಷ್ಟು ನೀರು ನಿಂತುಕೊಂಡಿತ್ತು. ಬಡಾವಣೆಗಳ ಬಹುಪಾಲು ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು. ಕೆಲ ಮನೆಗಳಲ್ಲಿ ಪೀಠೋಪಕರಣ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ನೀರಿನಲ್ಲಿ ತೇಲಾಡುತ್ತಿದ್ದವು. ಮನೆಗೆ ನುಗ್ಗಿದ್ದ ನೀರು ಹೊರಹಾಕುವುದರಲ್ಲೇ ನಿವಾಸಿಗಳು ರಾತ್ರಿ ಕಳೆದರು.

‘ರಾಜಕಾಲುವೆ ಒತ್ತುವರಿ ಆಗಿದೆ. ನಾಗಸಂದ್ರ ಕಾಲೊನಿಗೆ ಹೊಂದಿಕೊಂಡಿರುವ ಜಾಗದಲ್ಲಿ ರಾಜಕಾಲುವೆ ಒಡೆದು, ನೀರು ಹೊರಗಡೆ ಹರಿಯುತ್ತಿದೆ. ಅದೇ ನೀರು ಮನೆಯೊಳಗೆ ನುಗ್ಗಿದ್ದರಿಂದ ಹಾನಿ ಆಗಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

‘ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಆಗುತ್ತಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡಿ, ಗುಣಮಟ್ಟದ ತಡೆಗೋಡೆ ನಿರ್ಮಿಸಬೇಕು’ ಎಂದೂ ಅವರು ಒತ್ತಾಯಿಸಿದರು.

ನಿವಾಸಿ ಗೋವಿಂದಪ್ಪ, ‘ಮನೆಯೊಳಗೆ ನಿಂತಿದ್ದ ನೀರನ್ನು ಮೋಟರ್ ಪಂಪ್ ಮೂಲಕ ಹೊರ ಹಾಕುತ್ತಿದ್ದೇವೆ. ನೀರಿನ ಜೊತೆಯಲ್ಲಿ ತ್ಯಾಜ್ಯವೂ ಮನೆಯೊಳಗೆ ಬಂದಿತ್ತು. ನೀರು ತೆರುವಾದ ಬಳಿಕವೂ ದುರ್ವಾಸನೆ ಬರುತ್ತಿದೆ’ ಎಂದರು.

ನಗರದ ಹಲವೆಡೆಯೂ ಮಳೆ: ಮೆಜೆಸ್ಟಿಕ್, ಗಾಂಧಿನಗರ, ಶೇಷಾದ್ರಿಪುರ, ಮಲ್ಲೇಶ್ವರ, ರಾಜಾಜಿನಗರ, ಬಸವೇಶ್ವರನಗರ, ವಿಜಯನಗರ, ದೀಪಾಂಜಲಿನಗರ, ನಾಯಂಡನಹಳ್ಳಿ, ರಾಜರಾಜೇಶ್ವರಿನಗರ, ಕೆಂಗೇರಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಗಿರಿನಗರ, ಜೆ.ಪಿ.ನಗರ, ಜಯನಗರ, ಬಸವನಗುಡಿ, ಹನುಮಂತನಗರ, ಶಂಕರಮಠ, ಚಾಮರಾಜಪೇಟೆ, ಸುತ್ತಮುತ್ತ ಪ್ರದೇಶಗಳಲ್ಲಿ ಸಂಜೆ ಉತ್ತಮ ಮಳೆ ಆಯಿತು.

ಎಚ್‌ಎಸ್‌ಆರ್ ಲೇಔಟ್, ಮಡಿವಾಳ, ಕೋರಮಂಗಲ, ಅಶೋಕನಗರ, ವಿವೇಕನಗರ, ಶಿವಾಜಿನಗರ, ಎಂ.ಜಿ. ರಸ್ತೆ, ಸಂಪಂಗಿರಾಮನಗರ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆಯಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಜಿ.ಕೆ.ವಿ.ಕೆ ಬಳಿ ಮೇಲ್ಸೇತುವೆಯಲ್ಲಿ ಧಾರಾಕಾರವಾಗಿ ನೀರು ಹರಿಯಿತು. ಮಳೆ ನೀರು, ಮೇಲ್ಸೇತುವೆಯಿಂದ ಕೆಳಗಿನ ರಸ್ತೆ ಮೇಲೆ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

‘ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಉತ್ತಮ ಮಳೆ ಆಗುತ್ತಿದೆ. ಶನಿವಾ
ರವೂ ಜಿಟಿ ಜಿಟಿ ಮಳೆ ಆಗಿತ್ತು. ಆದರೆ, ಭಾನುವಾರ ಮಳೆ ಪ್ರಮಾಣ ಕಡಿಮೆ ಇತ್ತು. ನಗರದಲ್ಲಿ ಆಗಾಗ ಮಳೆ ಆಗುತ್ತಿದೆ. ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಬಗ್ಗೆ ಹೆಚ್ಚು ದೂರುಗಳು ಬರುತ್ತಿವೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT