ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಞಾತ ಕಥನಗಳು ಅನಾವರಣಗೊಳ್ಳಲಿ: ಬರಗೂರು ರಾಮಚಂದ್ರಪ್ಪ

Published 6 ಮೇ 2024, 15:12 IST
Last Updated 6 ಮೇ 2024, 15:12 IST
ಅಕ್ಷರ ಗಾತ್ರ

ಬೆಂಗಳೂರು: ಹೋರಾಟಗಾರರ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಜೀವನ ಚರಿತ್ರೆ, ಆತ್ಮಕಥೆಗಳು ಬರುತ್ತವೆ. ಆದರೆ, ಅವೆಲ್ಲ ಆಯ್ದ ಸತ್ಯಗಳು ಮತ್ತು ಅಪೂರ್ಣ. ಅವರ ಮನೆಯ ಅಜ್ಞಾತ ಕಥನಗಳು ಅದರಲ್ಲಿ ಅನಾವರಣಗೊಂಡಿರುವುದಿಲ್ಲ ಎಂದು ಸಂಸ್ಕೃತಿ ಚಿಂತಕ ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ‘ರಮಾಬಾಯಿ ಅಂಬೇಡ್ಕರ್‌’ ಪುಸ್ತಕ ಬಿಡುಗಡೆ, ನಯನ ರಂಗಮಂದಿರದಲ್ಲಿ ಕೆಲಸ ಮಾಡಿ ನಿವೃತ್ತರಾಗುತ್ತಿರುವ ನಯನ ರಾಜು ಅವರಿಗೆ ರಂಗ ಗೌರವ, ಭೀಮ ಗಾಯನ, ‘ಮಿಸೆಸ್‌ ಅಂಬೇಡ್ಕರ್‌’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೋರಾಟಗಾರರ ಮನೆಯವರು ಅನುಭವಿಸುವ ಕಷ್ಟ, ಸವಾಲುಗಳು ಕೂಡಾ ಅನಾವರಣಗೊಂಡಾಗ ಸಾರ್ವಜನಿಕ ವ್ಯಕ್ತಿಗಳ ಜೀವನ ಚರಿತ್ರೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದರು.

ಯಾವುದೇ ಸಾಧಕನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದು ಸರಿಯಲ್ಲ. ಪುರುಷರಿಗೆ ಜೊತೆಯಾಗಿ, ಸಮಭಾಗಿಯಾಗಿ ಇರುತ್ತಾಳೆ. ಆದರೆ, ನಮ್ಮ ಪರಂಪರಾಗತ ಮನಸ್ಸು ಅದನ್ನು ಒಪ್ಪದೇ, ಮಹಿಳೆಯನ್ನು ಸಾಧನೆಯ ಹಿಂದೆ ನಿಲ್ಲಿಸಿಬಿಟ್ಟಿರುತ್ತದೆ ಎಂದರು.

ಅಂಬೇಡ್ಕರ್‌ ಅವರ ಹೋರಾಟದಲ್ಲಿ ರಮಾಬಾಯಿಯ ತ್ಯಾಗ, ಅವರು ಅನುಭವಿಸಿದ ಸಂಕಷ್ಟಗಳನ್ನು ಮಾತ್ರವಲ್ಲ, ಅವರ ನಡುವಿನ ಪ್ರೀತಿಯ ಬಂಧ ಮತ್ತು ವೈಚಾರಿಕತೆಯನ್ನು ಈ ಕೃತಿ ಅನಾವರಣಗೊಳಿಸುತ್ತದೆ ಎಂದು ಮಾಹಿತಿ ನೀಡಿದರು.

ಸಾಂಸಾರಿಕ ಜೀವನಕ್ಕೆ ಸೀಮಿತರಾದ ಮಹಿಳೆಯರು, ಸಾಮಾಜಿಕ ಜೀವನಕ್ಕಷ್ಟೇ ಸೀಮಿತರಾದ ಮಹಿಳೆಯರು ಮತ್ತು ಸಾಂಸಾರಿಕ ಜೀವನವನ್ನು ನಡೆಸಿಕೊಂಡೇ ಸಾಮಾಜಿಕ ಜೀವನವನ್ನೂ ನಡೆಸುವ ಮಹಿಳೆಯರು ಇದ್ದಾರೆ. ಮೂರನೇ ವರ್ಗಕ್ಕೆ ಸೇರಿದವರು ರಮಾಬಾಯಿ ಎಂದು ತಿಳಿಸಿದರು.

ಕೃತಿ ಬಗ್ಗೆ ಬರಹಗಾರ ವಿ.ಎಲ್‌. ನರಸಿಂಹಮೂರ್ತಿ ಮಾತನಾಡಿ, ‘ಮಹಿಳೆಯರಿಗೆ ಜವಾಬ್ದಾರಿಯನ್ನು ನೀಡದ ಸಮಾಜದಲ್ಲಿ ಶ್ರೇಣಿಕೃತ ವ್ಯವಸ್ಥೆಯ ಕೆಳ ಹಂತದಿಂದ ಬಂದಿರುವ ಅಂಬೇಡ್ಕರ್‌ ಅವರು ಮನೆಯ ಪೂರ್ಣ ಜವಾಬ್ದಾರಿಯನ್ನು ಪತ್ನಿಗೆ ವಹಿಸಿ ಕಲಿಯಲು ತೆರಳುತ್ತಾರೆ. ವಿದೇಶದಿಂದ ಮರಳಿದ ಮೇಲೆ ಅಂಬೇಡ್ಕರ್‌ ಜೊತೆಗೆ ರಮಾಬಾಯಿ ಕೂಡ ಸಾಮಾಜಿಕ ಚಳವಳಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಎಲ್ಲ ವಿವರಗಳು ಈ ಕೃತಿಯಲ್ಲಿವೆ’ ಎಂದು ಹೇಳಿದರು.

ಸ್ತ್ರೀವಾದಿ ಚಳವಳಿಯನ್ನು ಅರ್ಥ ಮಾಡಿಕೊಳ್ಳಲು ಈ ಪುಸ್ತಕ ದೊಡ್ಡ ಕೊಡುಗೆಯನ್ನು ನೀಡುತ್ತದೆ ಎಂದು ವಿವರಿಸಿದರು.

Cut-off box - ಕೃತಿ ಪರಿಚಯ ಕೃತಿ: ರಮಾಬಾಯಿ ಅಂಬೇಡ್ಕರ್‌ ಪ್ರಕಾರ: ಸಂಪಾದಿತ ಕೃತಿ ಲೇಖಕಿ: ಅಶ್ವಿನಿ ಮದನಕರ್‌ ಪುಟ: 360 ಬೆಲೆ: ₹ 450 ಪ್ರಕಾಶನ: ಯಶ್ವಂತ್‌ ಪ್ರಕಾಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT