ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಸಿಸಿ ಅಧ್ಯಕ್ಷ ಗಾದಿಗೇರಿದ ಡಿ.ಕೆ.ಶಿವಕುಮಾರ್ ಬದುಕು ಸಾಗಿಬಂದ ಹಾದಿ

Last Updated 11 ಮಾರ್ಚ್ 2020, 11:14 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""
""
""
""

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಡಿ.ಕೆ.ಶಿವಕುಮಾರ್ ಅವರ ಬದುಕು ಸಾಗಿಬಂದ ಹಾದಿ, ಜೀವನದಲ್ಲಿ ಎದುರಿಸಿದ ಸಂಘರ್ಷ, ಹೆಣೆದ ರಾಜಕೀಯ ತಂತ್ರಗಾರಿಕೆಗಳು, ಸಚಿವರಾಗಿ ಆಡಳಿತದಲ್ಲಿ ಸುಧಾರಣೆಗೆ ಮಾಡಿದ ಪ್ರಯತ್ನಗಳ ಪರಿಚಯ ಈ ಬರಹದಲ್ಲಿದೆ.

ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಶ್ರೀಮತಿ ಗೌರಮ್ಮದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಡಿ.ಕೆ. ಶಿವಕುಮಾರ್ (ಜನನ: 15ನೇ ಮೇ 1962) ಅವರಿಗೆ ಅಪ್ಪನೇ ಮೊದಲ ಗುರು.ಅವರಿಂದಲೇನಾಯಕತ್ವದ ಗುಣಗಳನ್ನು ಪಡೆದುಕೊಂಡರು. 18ನೇ ವಯಸ್ಸಿನಲ್ಲಿಯೇ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐಗೆಸೇರ್ಪಡೆಗೊಂಡು ಅನತಿ ಕಾಲದಲ್ಲಿಯೇ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದರು (1981-83).

ವಿದ್ಯಾಭ್ಯಾಸಕ್ಕೆಂದು ಬೆಂಗಳೂರು ಸೇರಿದ ಡಿ.ಕೆ. ಶಿವಕುಮಾರ್ ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್‍ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್‍ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ಸಂಘಟಿಸಿದ್ದರು.

ಮೊದಲ ಚುನಾವಣೆ

1985ರ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ಜನತಾದಳ ಮುಖಂಡ ಎಚ್.ಡಿ. ದೇವೇಗೌಡರ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಅಭ್ಯರ್ಥಿ ಸಿಗುವುದು ದುರ್ಲಭವಾದಾಗ ಪಕ್ಷದ ವರಿಷ್ಠರ ಕಣ್ಣು ಶಿವಕುಮಾರ್ಮೇಲೆ ಬಿತ್ತು.

ಚುನಾವಣಾ ರಾಜಕಾರಣದ ಪರಿಚಯವೇ ಇಲ್ಲದಿದ್ದ ಶಿವಕುಮಾರ್ ಅವರನ್ನು ದೇವೇಗೌಡರ ವಿರುದ್ದ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಯಿತು. ಸಾಕಷ್ಟು ಪ್ರಬಲ ಪ್ರತಿರೋಧ ತೋರಿದ ಶಿವಕುಮಾರ್ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರು ಅತ್ಯಂತ ಪ್ರಯಾಸದ ಜಯ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ವಿಧಾನಸಭಾ ಚುನಾವಣೆಯಾದ ಕೆಲವೇ ದಿನಗಳ ನಂತರ(1987) ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಗೊಂಡರು.

1989ರಲ್ಲಿ ಕಾಂಗ್ರೆಸ್ ಟಿಕೆಟ್‌ ಮೇಲೆಸಾತನೂರು ವಿಧಾನಸಭಾಕ್ಷೇತ್ರದಿಂದ ಸ್ಪರ್ಧಿಯಾಗಿ ನಿಂತರು. ಕ್ಷೇತ್ರದಲ್ಲಿ ಬೇರೂರಿದ್ದ ಜನತಾದಳದ ಪ್ರಾಬಲ್ಯವನ್ನು ಮೊಟಕುಗೊಳಿಸಿದ ಶಿವಕುಮಾರ್ ಜಯಗಳಿಸುವಲ್ಲಿ ಯಶಸ್ವಿಯಾದರು.

1991ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‍ ಅವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಬೇಕಾಗಿ ಬಂದಾಗ ಅವರ ಉತ್ತರಾಧಿಕಾರಿಯನ್ನಾಗಿ ಸಾರೆಕೊಪ್ಪ ಬಂಗಾರಪ್ಪಅವರು ಸರ್ವಾನುಮತದಿಂದ ಆಯ್ಕೆಯಾಗುವಂತೆ ಮಾಡುವಲ್ಲಿ ಡಿ.ಕೆ. ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಬಂಗಾರಪ್ಪಈ ಯುವಕನನ್ನು ರಾಜ್ಯಮಟ್ಟದ ಸಚಿವರನ್ನಾಗಿ ಮಾಡಿ ಬಂಧಿಖಾನೆ ಖಾತೆ ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿದ್ದ ಹಲವು ವಿರೋಧಿಗಳ ರಾಜಕೀಯ ಪಿತೂರಿಯಿಂದಾಗಿ 1994ರಲ್ಲಿ ಶಿವಕುಮಾರ್ ಅವರಿಗೆ ಪಕ್ಷದ ಟಿಕೆಟ್ ಸಿಗಲಿಲ್ಲ. ಧೃತಿಗೆಡದೆಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿಜಯಗಳಿಸಿದರು.

2004ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ 4ನೇ ಬಾರಿ ಆರಿಸಿ ಬಂದರೂ ಕಾಂಗ್ರೆಸ್ ಪಕ್ಷ ಬಹುಮತಗಳಿಸುವಲ್ಲಿ ವಿಫಲವಾಯಿತು. ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಜೆಡಿಎಸ್ ಜೊತೆಗೆ ಪಕ್ಷವು ಹೊಂದಾಣಿಕೆ ಮಾಡಿಕೊಂಡಿತು. ಸಮ್ಮಿಶ್ರ ಸರ್ಕಾರದಲ್ಲಿ ಶಿವಕುಮಾರ್‌ಗೆ ಸ್ಥಾನವಿರಲಿಲ್ಲ, ಅವರು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಬಾರದು ಎಂದುಎಚ್.ಡಿ. ದೇವೇಗೌಡರು ಷರತ್ತು ವಿಧಿಸಿದ್ದರು.

ದೇವೇಗೌಡರು ತಮ್ಮ ವಿರುದ್ಧ ನಡೆಸಿದ ಸೇಡಿನ ರಾಜಕಾರಣಕ್ಕೆ ತಮ್ಮದೇ ರೀತಿಯಲ್ಲಿ ಪ್ರತ್ಯುತ್ತರ ನೀಡಲು ಶಿವಕುಮಾರ್ ತಂತ್ರ ಹೆಣೆದರು.2006ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ದ ರಾಜಕೀಯವಾಗಿ, ಸಾರ್ವಜನಿಕವಾಗಿ ಅಷ್ಟೇನು ಪರಿಚಿತರಲ್ಲದ ತೇಜಸ್ವಿನಿ ಗೌಡ ಅವರನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನಾಯಕ ವಿಲಾಸ್‍ರಾವ್‍ ದೇಶ್‍ಮುಖ್ ನೇತೃತ್ವದ ಸಮ್ಮಿಶ್ರ ಸರ್ಕಾರ ಶಾಸಕರ ಕುದುವೆ ವ್ಯಾಪಾರದ ಅಪಾಯದಿಂದಅಲ್ಪಮತಕ್ಕೆ ಕುಸಿಯುವ ಸ್ಥಿತಿಗೆ ಬಂದಾಗ ಹೈಕಮಾಂಡ್ ಆದೇಶದಂತೆ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಮುಂಬೈಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಸುಮಾರು 10-12 ದಿನಗಳ ಕಾಲ ವೈಭವೋಪೇತ ಸ್ಟಾರ್‌ ಹೊಟೆಲ್‌ನಲ್ಲಿ ಇರಿಸಿಕೊಂಡಿದ್ದರು.

ಕೃಷ್ಣ ಪರ ಬ್ಯಾಟಿಂಗ್

2004ರಲ್ಲಿ ಪ್ರಥಮ ಬಾರಿಗೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರಸರ್ಕಾರ ರೂಪುಗೊಂಡಾಗ ಎಸ್.ಎಂ. ಕೃಷ್ಣ ಅವರನ್ನು ಕಡೆಗಣಿಸಿ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಎಸ್.ಎಂ. ಕೃಷ್ಣ ಅವರಿಗೆ ಬದಲಿಯಾಗಿ ಯಾವುದಾದರೊಂದು ಸ್ಥಾನ ಕೊಡಲೇಬೇಕೆಂದು ಪಕ್ಷದ ವರಿಷ್ಠರ ಮನವೊಲಿಸಿ ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆ ಸಿಗುವಂತೆ ಮಾಡುವಲ್ಲಿ ಶಿವಕುಮಾರ್ ಸಕ್ರಿಯ ಪಾತ್ರ ನಿರ್ವಹಿಸಿದ್ದರು.

ಬಂಡಾಯ ಶಾಸಕರಾಗಿಯೂ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಡಿ.ಕೆ. ಶಿವಕುಮಾರ್ ಆಗಲೇ ರಾಜಕೀಯವಾಗಿ ಮೂಲೆಗುಂಪಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಓಲೈಸಿ ಮರಳಿ ರಾಜಕೀಯ ರಂಗಕ್ಕೆ ಕರೆ ತಂದರು.ಜೆಡಿಎಸ್ ಅಧಿಕಾರದಲ್ಲಿದ್ದರೂ ಅಲ್ಪಮತದ ಬೆಂಬಲದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಸ್.ಎಂ. ಕೃಷ್ಣ ಅವರು ರಾಜ್ಯಸಭೆಗೆ ಸ್ಪರ್ಧಿಸುವಂತೆ ಮಾಡಿದರು.

ಜೆಡಿಎಸ್‌ನಿಂದಲೇಅಗತ್ಯಸದಸ್ಯರ ಬೆಂಬಲ ಸಿಗುವಂತೆ ವ್ಯೂಹರಚನೆ ಮಾಡಿಎಸ್.ಎಂ. ಕೃಷ್ಣ ರಾಜ್ಯಸಭೆಗೆ ಆಯ್ಕೆಯಾಗುವಂತೆ ಮಾಡಿದರು. 1999ರಲ್ಲಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಅವರ ಹಿಂದೆ ಬೆನ್ನೆಲುಬಾಗಿ ನಿಂತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ರೀತಿಯಲ್ಲಿ ಜಯಗಳಿಸಿ ಸರ್ಕಾರ ರಚಿಸುವಲ್ಲಿ ಕಾರಣರಾದರು.

ಎಸ್.ಎಂ. ಕೃಷ್ಣ ಚುನಾವಣಾ ಪೂರ್ವದಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಚುನಾವಣಾ ಸಮರ ಆರಂಭಿಸಿದರು. ಈ ತಿಹಾಸಿಕ ಯಾತ್ರೆಯನ್ನು ಆಯೋಜಿಸಿದವರು ಶ್ರೀ ಡಿ.ಕೆ. ಶಿವಕುಮಾರ್. ಆ ಚುನಾವಣೆಯಲ್ಲಿ ಕಾಂಗ್ರೆಸ್139 ಸ್ಥಾನಗಳನ್ನು ಗಳಿಸಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಿತ್ತು.

1999ರಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅನುಮತಿ ನೀಡಿತ್ತು. ಈ ಬಾರಿಅವರ ಎದುರಾಳಿಯಾಗಿದ್ದವರು ಎಚ್.ಡಿ. ಕುಮಾರಸ್ವಾಮಿ.ದೇವೇಗೌಡರು ರಾಜಕೀಯ ಸ್ಥಿತ್ಯಂತರದಿಂದ ಅಂದಿನ ಪ್ರಧಾನ ಮಂತ್ರಿಯಾಗಿದ್ದರು.ಡಿ.ಕೆ. ಶಿವಕುಮಾರ್ ಸತತ 3ನೇ ಬಾರಿಗೆ ಮರಳಿ ಗೆಲುವು ಸಾಧಿಸಿದರು. ಕೃಷ್ಣ ಅವರು ಕ್ಯಾಬಿನೆಟ್‍ ದರ್ಜೆ ಸಚಿವರನ್ನಾಗಿ ನೇಮಿಸಿ ಮಹತ್ವದ ಸಹಕಾರ ಖಾತೆ ನೀಡಿದ್ದರು.

2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿ ರಾಜ್ಯ ನಗರ ಯೋಜನಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರಾಗಿ ಯುವಕರನ್ನು ಸಂಘಟಿಸಿ ಜೀವನದಲ್ಲಿ ನೆಲೆಗೊಳಿಸುವ ‘ರಾಜೀವ್‍ ಯುವ ಶಕ್ತಿ’ಸಂಘಟನೆಗಳು ರಾಜ್ಯದಲ್ಲಿ ತಲೆ ಎತ್ತಲು ಕಾರಣೀಭೂತರಾದರು. ವಿಶ್ವದಲ್ಲಿಯೇ ಮೊದಲನೆಯದು ಎನ್ನಿಸಿದ ಸ್ತ್ರೀ ಶಕ್ತಿ ಸಂಘಟನೆಗಳನ್ನು ಆರಂಭಿಸುವಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರ ಮಹತ್ವದ್ದು.

2008ರಲ್ಲಿ ಎಸ್.ಎಂ. ಕೃಷ್ಣ ರಾಜ್ಯಪಾಲ ಪದವಿ ತ್ಯಜಿಸಿ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂದು ಬಯಸಿದಾಗ ಅವರನ್ನು ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡುವಲ್ಲಿ ಡಿ.ಕೆ. ಶಿವಕುಮಾರ್ ಮಹತ್ವದ ಪಾತ್ರ ವಹಿಸಿದರು. ಆನಂತರ ಎಸ್.ಎಂ. ಕೃಷ್ಣ ಕೇಂದ್ರ ಸಚಿವ ಸಂಪುಟಕ್ಕೆ ಸೇರಿ ವಿದೇಶಾಂಗ ವ್ಯವಹಾರಗಳ ಮಹತ್ವದ ಖಾತೆಯನ್ನು ನಿಭಾಯಿಸಿದರು.

ಕನಕಪುರ ಕ್ಷೇತ್ರದಲ್ಲಿ ವಿಡಿಯೊ ಕಾನ್ಫರೆನ್ಸ್ ಸೌಲಭ್ಯವನ್ನು ಸ್ಥಾಪಿಸಿ ಆ ಮೂಲಕ ಕ್ಷೇತ್ರದ ಮತದಾರರೊಂದಿಗೆ ನೇರಾನೇರಾ ಸಂಪರ್ಕ ಸಾಧಿಸಿದ ದೇಶದ ಪ್ರಥಮ ಶಾಸಕರೆಂಬ ಕೀರ್ತಿಗೆ ಭಾಜನರಾದವರು. ಈ ಬಗ್ಗೆ ‘ಇಂಡಿಯಾ ಟುಡೆ’ ನಿಯತಕಾಲಿಕೆಯು ವರದಿ ಪ್ರಕಟಿಸಿ, ದೇಶದ ಗಮನ ಸೆಳೆಯಿತು. ಚಿತ್ರನಟಿ ರಮ್ಯಾಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು ಡಿ.ಕೆ. ಶಿವಕುಮಾರ್ ಅವರ ಸತತ ಒತ್ತಾಸೆ ಹಾಗೂ ಪ್ರೇರಣೆಯಿಂದ.

ಚತುರ ರಾಜಕಾರಿಣಿ

2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪೀಠಕ್ಕೆ ಮರಳಿ ಬಂದು ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರು. ಪಕ್ಷದೊಳಗಿರುವ ವಿರೋಧಿಗಳು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕೆಲ ದಾಖಲೆಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿ, ಶಿವಕುಮಾರ್ ಅವರಿಗೆ ಸಚಿವ ಸ್ಥಾನ ತಪ್ಪುವಂತೆ ಮಾಡಿದರು. ಪಕ್ಷದ ನಾಯಕತ್ವದ ವಿರುದ್ದ ಬಹಿರಂಗವಾಗಿ ಅಸಮಾಧಾನ ತೋರಿಸಿಕೊಳ್ಳಲಿಲ್ಲ. ತಮ್ಮ ವಿರುದ್ಧ ಆಪಾದನೆಗಳ ಬಗ್ಗೆ ನ್ಯಾಯಾಂಗ ತಜ್ಞರಿಂದ ವಿಮರ್ಶೆ ಮಾಡಿಸುವಂತೆ ವರಿಷ್ಠರನ್ನು ಕೋರಿಕೊಂಡರು.ಪಕ್ಷದಿಂದ ನೇಮಿತರಾದ ಇಬ್ಬರು ನ್ಯಾಯಾಂಗ ತಜ್ಞರು ಡಿ.ಕೆ. ಶಿವಕುಮಾರ್ ಯಾವುದೇ ಅಕ್ರಮ ಎಸಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದರು.ನಂತರಸಂಪುಟದಲ್ಲಿ ಸಚಿವ ಸ್ಥಾನವೂ ದೊರೆಯಿತು. ಇಂಧನ ಖಾತೆಯಂತಹ ಪ್ರಮುಖ ಖಾತೆಯನ್ನು ಅವರಿಗೆ ನೀಡಲಾಯಿತು.

ಇಂಧನ ಇಲಾಖೆಯ ಅಮೂಲಾಗ್ರ ಸುಧಾರಣೆಗೆ ಪ್ರಯತ್ನ ಆರಂಭಿಸಿದರು.ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸಹಿ ಮಾಡಲಾಗಿದ್ದ ಹಲವಾರು ವಿದ್ಯುತ್‍ ಖರೀದಿ ಒಪ್ಪಂದಗಳನ್ನು ರದ್ದುಗೊಳಿಸಿದರು. ಹಿಂದಿನ ಸರ್ಕಾರದ ಕಾಲಾವಧಿಯಲ್ಲಿ ನಡೆದಿದ್ದ ವಿದ್ಯುತ್ ಖರೀದಿ ಅಕ್ರಮ ಕುರಿತ ಸದನ ಸಮಿತಿ ರಚನೆಗೆ ಕಾರಣರಾದರು. ರೈತ ಸೂರ್ಯ ಯೋಜನೆಯನ್ನು ರೂಪಿಸಿ ಭೂ ಮಾಲೀಕರಾದ ರೈತರು ಸ್ವಯಂ 1 ರಿಂದ 3 ಮೆಗಾವ್ಯಾಟ್ಸೌರವಿದ್ಯುತ್ ಉತ್ಪಾದನೆ ಮಾಡುವಂತೆ ಅವಕಾಶ ಕಲ್ಪಿಸಿದರು.

ಈ ಯೋಜನೆಗೆಕೇಂದ್ರ ಸರ್ಕಾರವೂ ಪ್ರಶಂಸೆ ವ್ಯಕ್ತಪಡಿಸಿತು. ಮಾತ್ರವಲ್ಲದೆ ಉಳಿದ ರಾಜ್ಯಗಳೂ ಕರ್ನಾಟಕದ ಮಾದರಿ ಅನುಸರಿಸಬೇಕೆಂದು ಕರೆ ನೀಡಿತು.

2018ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲಿಗೆ ಜಲಸಂಪನ್ಮೂಲ ನಂತರ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಪಡೆದ ಡಿ.ಕೆ.ಶಿವಕುಮಾರ್ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಮಹದಾಯಿ ಸಮಸ್ಯೆ ಪರಿಹಾರ, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ ಅವರು ರಾಜ್ಯದಲ್ಲಿ ಅತೀ ಹೆಚ್ಚು ಪ್ರಮಾಣದ ಚೆಕ್ ಡ್ಯಾಮ್‍ಗಳ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡಿಕೆ ಮೂಲಕ ಉತ್ತೇಜಿಸಿದರು.

ಮೈತ್ರಿ ಸರ್ಕಾರದ ಉಳಿವಿಗೆ ಟೊಂಕ ಕಟ್ಟಿ ನಿಂತಿದ್ದ ಶಿವಕುಮಾರ್ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಂಡರು. ಬಳ್ಳಾರಿ ಲೋಕಸಭೆ ಕ್ಷೇತ್ರ, ಕುಂದಗೋಳ ವಿಧಾನಸಭಾ ಕ್ಷೇತ್ರದ ಗೆಲುವಿನಲ್ಲಿಯೂ ಡಿಕೆಶಿ ಪಾತ್ರವಿತ್ತು.

ಇಡಿ ವಿಚಾರಣೆ

35 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಉಳಿದರು.2017ರಲ್ಲಿ ಹೈಕಮಾಂಡ್ ವಹಿಸಿದ ಜವಾಬ್ದಾರಿಯ ಮೇರೆಗೆ ಗುಜರಾತ್‌ನಕಾಂಗ್ರೆಸ್ ಶಾಸಕರನ್ನು ರಾಜ್ಯದಲ್ಲಿ ರಕ್ಷಿಸಿಟ್ಟುಕೊಂಡರು. ಕೇಂದ್ರ ಸರ್ಕಾರವು ಐಟಿ, ಇಡಿ ಮತ್ತಿತರ ತನಿಖಾ ಸಂಸ್ಥೆಗಳ ಮೂಲಕ ಡಿಕೆಶಿ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಗಳಿಗೆ ಇದೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ವಿಚಾರಣೆ ವೇಳೆ ಜೈಲಿಗೆ ಹೋಗಿದ್ದ ಡಿಕೆಶಿ ಅವರನ್ನುಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭೇಟಿಯಾಗಿ ಸಾಂತ್ವನ ಹೇಳಿದ್ದರು.

ಜೈಲಿನಿಂದ ಬಿಡುಗಡೆಯಾದ ಬಳಿಕಡಿ.ಕೆ.ಶಿವಕುಮಾರ್‌ ಅವರನ್ನು ಜನರು ರಸ್ತೆಗಿಳಿದು ಸ್ವಾಗತಿಸಿದರು.

ವೈಯಕ್ತಿಕ ಜೀವನದಲ್ಲಿ ಪ್ರಗತಿಪರ ರೈತರಾಗಿ, ವಸತಿ ಯೋಜನೆಗಳ ನಿರ್ಮಾತೃವಾಗಿರುವ ಡಿ.ಕೆ. ಶಿವಕುಮಾರ್, ನ್ಯಾಷನಲ್‍ಎಜುಕೇಶನ್ಫೌಂಡೇಷನ್‍ನ ಸ್ಥಾಪಕ ಅಧ್ಯಕ್ಷರಾಗಿ ಎಂಜಿನಿಯರಿಂಗ್, ನರ್ಸಿಂಗ್ ಹಾಗೂ ಮ್ಯಾನೇಜ್‍ಮೆಂಟ್ ವಿದ್ಯಾಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ವಿಶ್ವಮಟ್ಟದ ಎರಡು ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿದ್ದಾರೆ. ಡಿಕೆಎಸ್ಚಾರಿಟೇಬಲ್ ಟ್ರಸ್ಟ್‌ ಮೂಲಕ ಹಳ್ಳಿಗಳಲ್ಲಿಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT