ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳರ ಮನಸ್ಸು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ: ಮಲ್ಲಿಕಾ ಘಂಟಿ

Last Updated 17 ಏಪ್ರಿಲ್ 2021, 20:33 IST
ಅಕ್ಷರ ಗಾತ್ರ

ಬೆಂಗಳೂರು: ‘ಕಳ್ಳರ ಮನಸ್ಸು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯದ ಮನಸ್ಸು ಮತ್ತು ಸೃಜನಶೀಲ ಶಕ್ತಿ ಉಳ್ಳವರು ಕ್ರೌರ್ಯದಿಂದ ದೂರ ಉಳಿಯುತ್ತಾರೆ. ಜೈಲಿನಲ್ಲಿರುವ ಕೈದಿಗಳು ಬರವಣಿಗೆ ಮೈಗೂಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ತಪ್ಪಿನ ಅರಿವಾಗುತ್ತಿದೆ. ಮುಖ್ಯವಾಹಿನಿಗೆ ಬರಬೇಕೆಂಬ ಅಪೇಕ್ಷೆ ಅವರಲ್ಲಿ ಮೂಡುತ್ತಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಶನಿವಾರ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ‘ಮಹಿಳಾ ಸಾಹಿತ್ಯ ಸಂಪುಟಗಳು’ ಕುರಿತ ವಿಚಾರ ಸಂಕಿರಣ
ದಲ್ಲಿ ಮಾತನಾಡಿದ ಅವರು, ‘ಬರೆಯುವ ಹಾಗೂ ಬರೆದಿದ್ದನ್ನು ಬದುಕಿಗೆ ಅಳವಡಿಸಿಕೊಳ್ಳುವ ಕೆಲಸವನ್ನು ಲೇಖಕಿಯರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಸಂಸ್ಥೆಯೊಂದರ ಜವಾಬ್ದಾರಿ ಹೊತ್ತ ವ್ಯಕ್ತಿಗಳು ಪೂರ್ವಗ್ರಹವಿಲ್ಲದೆ ಸಮಾಜವನ್ನು ನೋಡುವುದರ ಜೊತೆಗೆ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಆಗ ಮಾತ್ರ ಕಾಲ ದಾಖಲಿಸಿಕೊಳ್ಳಬಹುದಾದ ಕೆಲಸವೊಂದನ್ನು ಮಾಡಲು ಸಾಧ್ಯ’ ಎಂದರು.

‘ಸಹನೆ ಮತ್ತು ಸಹಬಾಳ್ವೆಯನ್ನು ಒತ್ತಿ ಹೇಳುವ ಸಾಹಿತ್ಯ ಇಂದಿನ ಸಮಾಜಕ್ಕೆ ಅಗತ್ಯವಿದೆ. ಆಧುನಿಕ ಕಾಲದಲ್ಲಿ ಹಣಬಲ ಮತ್ತು ತೋಳ್ಬಲ ಪ್ರಜಾಪ್ರಭುತ್ವದ ಆಶಯಗಳನ್ನು ನುಂಗಿ ಹಾಕುತ್ತಿದೆ. ಹೆಣ್ಣು ಮಕ್ಕಳು ಇವೆರಡು ಇಲ್ಲದೆ ರಾಜಕೀಯ ಮತ್ತು ಸಾಮಾಜಿಕವಾಗಿ ಬಲಿಷ್ಠರಾಗುವುದು ಅಸಾಧ್ಯ’ ಎಂದು ತಿಳಿಸಿದರು.

ಲೇಖಕಿ ಹೇಮಲತಾ ಮಹಿಷಿ, ‘ಮಹಿಳಾ ಸಾಹಿತ್ಯವೆಂದರೆ ‘ಅಡುಗೆ ಮನೆ’ ಸಾಹಿತ್ಯ ಎಂದು ಮೂದಲಿಸುವ ಕಾಲ ಹಿಂದೆ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಾಹಿತ್ಯದ ಎಲ್ಲಾ ಕ್ಷೇತ್ರಗಳು ಹಾಗೂ ಪ್ರಕಾರಗಳಲ್ಲೂ ಮಹಿಳೆಯರು ಛಾಪು ಮೂಡಿಸುತ್ತಿದ್ದಾರೆ. ಸಾಹಿತ್ಯ ಪರಿಷತ್‌ ಹೊರತಂದಿರುವ ಎಂಟು ಸಂಪುಟಗಳು ಆಕರ್ಷಕವಾಗಿವೆ’ ಎಂದು ಹೇಳಿದರು.

ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ‘ಪುರುಷರಿಂದ ಸಾಧ್ಯವಾಗದ ಕೆಲಸವನ್ನು ಮಹಿಳೆಯರು ಮಾಡಿ ತೋರಿಸಿದ್ದಾರೆ. ನನ್ನ ಅವಧಿಯಲ್ಲಿ ₹12.5 ಲಕ್ಷ ಗೌರವ ಧನ ಬಂದಿದೆ. ಈ ಮೊತ್ತವನ್ನು ದತ್ತಿನಿಧಿಯನ್ನಾಗಿ ಇಟ್ಟು ಮಹಿಳೆ ಮತ್ತು ಪುರುಷರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ’ ಎಂದರು.

ಪರಿಷತ್ತಿನ ಗೌರವ ಕಾರ್ಯದರ್ಶಿ ಪದ್ಮರಾಜ ದಂಡಾವತಿ, ಕೆ.ರಾಜಕುಮಾರ್,ಗೌರವ ಕೋಶಾಧ್ಯಕ್ಷ ಪಿ.ಮಲ್ಲಿ
ಕಾರ್ಜುನಪ್ಪ, ಸವಿತಾ ಶ್ರೀನಿವಾಸ್‌ ಹಾಗೂ ಪದ್ಮಿನಿ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT