ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಪುಟ್ಟ ವ್ಯಾಪಾರಕ್ಕಾಗಿ 23 ಸಾವಿರ ಮಹಿಳೆಯರಿಗೆ ಸಾಲ

ಅಲ್ಪಸಂಖ್ಯಾತ ಬಡ ಮಹಿಳೆಯರಿಗೆ ಸಾಲ ಸೌಲಭ್ಯ
Last Updated 11 ನವೆಂಬರ್ 2020, 11:06 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾರಣ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಬಡ ಮಹಿಳೆಯರಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮೈಕ್ರೊ ಸಾಲ ಯೋಜನೆಯಡಿ ಸಾಲ ಸೌಲಭ್ಯ ನೀಡಲಿದ್ದು, ಇದಕ್ಕಾಗಿ ₹23 ಕೋಟಿ ನಿಗದಿ ಮಾಡಿದೆ ಎಂದು ನಿಗಮದ ಅಧ್ಯಕ್ಷ ಮುಖ್ತಾರ ಹುಸೇನ್‌ ಪಠಾಣ ತಿಳಿಸಿದರು.

ಈ ಯೋಜನೆಯಡಿ ಸುಮಾರು 23 ಸಾವಿರ ಮಹಿಳೆಯರಿಗೆ ಸಾಲ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಪಿಎಲ್‌ ಕಾರ್ಡ್‌ ಹೊಂದಿರುವ 25 ರಿಂದ 50 ವರ್ಷ ವಯೋಮಾನದ ಒಳಗಿನ ಮಹಿಳೆಯರು ತಳ್ಳುವ ಗಾಡಿಯಲ್ಲಿ ವ್ಯಾಪಾರ, ಬೀದಿ ಬದಿ ವ್ಯಾಪಾರ, ಜಾತ್ರೆಗಳಲ್ಲಿ ವ್ಯಾಪಾರ, ಕಿರಾಣಿ ಅಂಗಡಿ, ಅರಿಶಿಣ ಕುಂಕುಮ, ಅಗರಬತ್ತಿ, ಕರ್ಪೂರ, ಫುಟ್‌ಪಾತ್‌ಗಳ ಮೇಲೆ ಕಾಫಿ, ಎಳನೀರು, ಹೂವಿನ ವ್ಯಾಪಾರ, ಹಣ್ಣು–ತರಕಾರಿ ಮಾರಾಟದಂತಹ ಚಟುವಟಿಕೆಗಳನ್ನು ನಡೆಸಲು ಆರಂಭಿಕ ಬಂಡವಾಳವಾಗಿ ₹10 ಸಾವಿರ ಅಲ್ಪಾವಧಿ ಸಾಲ ನೀಡಲಾಗುವುದು. ಇದರಲ್ಲಿ ₹8 ಸಾವಿರ ಸಾಲ ಮತ್ತು ₹2 ಸಾವಿರ ಸಬ್ಸಿಡಿಯಾಗಿರುತ್ತದೆ ಎಂದರು.

ಇದಲ್ಲದೆ, ವೃತ್ತಿ ಪ್ರೋತ್ಸಾಹ ಯೋಜನೆ, ಅರಿವು ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಶ್ರಮಶಕ್ತಿ, ಕಿರು ಸಾಲ ಮತ್ತು ಸಹಾಯಧನ ಯೋಜನೆ, ಗೃಹ ನಿರ್ಮಾಣ ಮಾರ್ಜಿನ್‌ ಯೋಜನೆ, ಪಶುಸಂಗೋಪನೆ ಯೋಜನೆ, ಟ್ಯಾಕ್ಸಿ ಮತ್ತು ಗೂಡ್ಸ್‌ ವಾಹನ ಖರೀದಿಸಲು ಸಹಾಯಧನ, ಅಲ್ಪಸಂಖ್ಯಾತರ ರೈತರ ಕಲ್ಯಾಣ ಯೋಜನೆ ಸೇರಿ ಎಲ್ಲ ಯೋಜನೆಗಳಿಗೆ ಇನ್ನು ಮುಂದೆ ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಫಲಾನುಭವಿಗಳ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಲಾಗುವುದು ಎಂದು ಪಠಾಣ ತಿಳಿಸಿದರು.

ವೆಬ್‌ಸೈಟ್‌ಗಳು: ಅರಿವು(ಶೈಕ್ಷಣಿಕ ಸಾಲ) kmdc.kar.nic.in/arivu2

ಇತರ ಎಲ್ಲ ಯೋಜನೆಗಳು kmdc.kar.nic/loan/login.aspx

ಮೈಕ್ರೊ ಸಾಲ(ವೈಯಕ್ತಿಕ) ಯೋಜನೆ kmdcmicro.karnataka.gov.in

ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲು ₹550 ಕೋಟಿ ಅನುದಾನದ ಅಗತ್ಯವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಕೋವಿಡ್‌ ಇರುವುದರಿಂದ ₹105 ಕೋಟಿ ಬಿಡುಗಡೆ ಮಾಡಿದ್ದಾರೆ. ಆರ್ಥಿಕ ಸಂಕಷ್ಟ ಮುಗಿದ ಬಳಿಕ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಏಜೆಂಟ್‌ಗಳ ವಿರುದ್ಧ ಕ್ರಿಮಿನಲ್‌ ಕೇಸ್‌: ಈ ಯೋಜನೆಗಳಿಗೆ ನೇರವಾಗಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಿ ಸರ್ಕಾರದ ನೆರವು ಬಳಸಿಕೊಳ್ಳಬೇಕು. ಏಜೆಂಟರು ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್‌ ಹೇಳಿದರು.

ಹಿಂದೆಲ್ಲ ಏಜೆಂಟರ ಹಾವಳಿ ವಿಪರೀತವಿತ್ತು. ಅದಕ್ಕೆ ನಾವು ಕಡಿವಾಣ ಹಾಕಿದ್ದೇವೆ. ಆಯೋಗದ ಆಸುಪಾಸಿನಲ್ಲಿ ಏಜೆಂಟರು ಕಂಡುಬಂದರೆ ಕ್ರಿಮಿನಲ್‌ ಕೇಸ್‌ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT