ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಚುನಾವಣೆಗಷ್ಟೇ ಸೀಮಿತವಾಗುವ ಆಶ್ವಾಸನೆ, ‘ಸ್ಮಾರ್ಟ್’ ಆಗದ ಪಾರ್ಕಿಂಗ್

ಜನರ ಕೂಗಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ ಕೋಟಿ ಗಡಿ ದಾಟಿದೆ. ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿರುವ ಹೊಸ ವಾಹನಗಳ ನೋಂದಣಿಯೂ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ವಾಹನ ಖರೀದಿಸುವವರಿಗೆ ನಗರದಲ್ಲಿ ನಿಲುಗಡೆಯದ್ದೇ (ಪಾರ್ಕಿಂಗ್‌) ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪ್ರತಿ ಚುನಾವಣೆಯಲ್ಲೂ ‘ಸ್ಮಾರ್ಟ್ ಪಾರ್ಕಿಂಗ್’ ಆಶ್ವಾಸನೆ ನೀಡುವ ಪಕ್ಷಗಳು ಹಾಗೂ ಜನಪ್ರತಿನಿಧಿಗಳು, ಚುನಾವಣೆ ಮುಗಿಯುತ್ತಿದ್ದಂತೆ ಮೌನವಾಗುತ್ತಾರೆ.

ಅತಿ ವೇಗವಾಗಿ ಬೆಳೆಯುತ್ತಿರುವ ನಗರದ ಬಹುತೇಕ ಪ್ರದೇಶಗಳಲ್ಲಿ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಮನೆಯಿಂದ ವಾಹನಗಳಲ್ಲಿ ಹೊರಗೆ ಬರುವ ಜನ, ‘ಜಾಗ ಯಾವುದಯ್ಯಾ ವಾಹನ ನಿಲ್ಲಿಸಲು?’ ಎನ್ನುತ್ತಾ ಪಾರ್ಕಿಂಗ್‌ಗಾಗಿ ಹುಡುಕಾಡುವ ಸ್ಥಿತಿ ಸಾಮಾನ್ಯವಾಗಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ, ಸಂಚಾರ ಪೊಲೀಸರಿಂದ ದಂಡ ಬೀಳುವ ಭಯವೂ ಕಾಡುತ್ತಿದೆ.

ಸಾರಿಗೆ ಇಲಾಖೆ ಮಾಹಿತಿ ಪ್ರಕಾರ, 2022– 23ರ ಅಂತ್ಯಕ್ಕೆ ನಗರದಲ್ಲಿ 1,10,48,537 ವಾಹನಗಳು ನೋಂದಣಿ ಆಗಿವೆ. ಈ ಪೈಕಿ ಬಹುತೇಕ ವಾಹನಗಳು ನಗರದಲ್ಲಿ ನಿತ್ಯವೂ ಸಂಚರಿಸುತ್ತವೆ. ಜೊತೆಗೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ನಗರಕ್ಕೆ ಬಂದು ಹೋಗುತ್ತವೆ. ಇಂಥ ವಾಹನಗಳ ನಿಲುಗಡೆಗೆ ಕೆಲವು ಕಡೆ ಮಾತ್ರ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಆದರೆ, ಬಹುತೇಕ ಕಡೆ ರಸ್ತೆ ಅಕ್ಕ–ಪಕ್ಕ ಹಾಗೂ ಸಾರ್ವಜನಿಕ ಸ್ಥಳಗಳೇ ಅನಧಿಕೃತ ಪಾರ್ಕಿಂಗ್ ತಾಣಗಳಾಗಿವೆ.

ಬಿಬಿಎಂಪಿಯಿಂದ ಪಾರ್ಕಿಂಗ್ ನೀತಿ ಜಾರಿಯಾಗಿದೆ. ವಾಹನಗಳ ಮಾಲೀಕರು ಸ್ವಂತ ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಳ್ಳುವಂತೆ ನಿಯಮ ರೂಪಿಸಲಾಗಿದೆ. ಜೊತೆಗೆ, ಸುಸಜ್ಜಿತ ಸ್ಮಾರ್ಟ್ ಪಾರ್ಕಿಂಗ್ ಕಲ್ಪಿಸುವ ಬಗ್ಗೆ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಜನರ ವಾಹನಗಳ ನಿಲುಗಡೆ ಸಮಸ್ಯೆಗೆ ಇದುವರೆಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ಈ ವಿಷಯದಲ್ಲಿ ಮೌನ ವಹಿಸಿದ್ದಾರೆ.

ಪಾರ್ಕಿಂಗ್ ನೀತಿಯನ್ನು ಬಹುತೇಕ ಕಟ್ಟಡಗಳು ಸರಿಯಾಗಿ ಪಾಲಿಸುತ್ತಿಲ್ಲ. ಇದು ಸಹ ಪಾರ್ಕಿಂಗ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ. ಹಲವಡೆ ಪಾದಚಾರಿ ಮಾರ್ಗ ಮತ್ತು ರಸ್ತೆಯ ಅಕ್ಕ–ಪಕ್ಕ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ, ಇತರೆ ವಾಹನಗಳ ಸಂಚಾರಕ್ಕೆ ಇಕ್ಕಟ್ಟಾಗುತ್ತಿದೆ. ಪಾದಚಾರಿ ಸಂಚಾರಕ್ಕೂ ಹಲವು ರಸ್ತೆಗಳಲ್ಲಿ ಜಾಗವೇ ಇಲ್ಲದಂತಾಗಿದೆ.

ಕೈಕೊಟ್ಟ ಕಂಪನಿ, ಪಾರ್ಕಿಂಗ್ ನೀತಿಗೆ ಹಿನ್ನೆಡೆ: ನಗರದ ಕಸ್ತೂರಬಾ ರಸ್ತೆಯಲ್ಲಿ 2019ರಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಇದಾದ ನಂತರ, ಬಿಬಿಎಂಪಿ ವತಿಯಿಂದ ನಗರದ 87 ಪ್ರಮುಖ ರಸ್ತೆಗಳಲ್ಲಿ ‘ಸ್ಮಾರ್ಟ್‌ ಪೇ ಪಾರ್ಕಿಂಗ್‌’ ಜಾರಿಗೆ ಕ್ರಮ ಕೈಗೊಳ್ಳಲಾಗಿತ್ತು. ನಿರ್ವಹಣೆ ಹೊಣೆಯನ್ನು ಕಂಪನಿಯೊಂದಕ್ಕೆ ವಹಿಸಲಾಗಿತ್ತು.

ಎಂ.ಜಿ. ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ರೆಸಿಡೆನ್ಸಿ, ಚರ್ಚ್‌ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ ಸೇರಿದಂತೆ ಕೆಲ ಪ್ರಮುಖ ಪ್ರದೇಶಗಳಲ್ಲಿ ಮಾತ್ರ ಹಣ ಪಾವತಿಸಿ ವಾಹನ ನಿಲ್ಲಿಸುವ (ಪೇ ಪಾರ್ಕಿಂಗ್) ವ್ಯವಸ್ಥೆ ಜಾರಿಗೆ ತರಲಾಗಿತ್ತು. ಪೇ ಪಾರ್ಕಿಂಗ್‌ನಿಂದ ಬಿಬಿಎಂಪಿಗೆ ವಾರ್ಷಿಕ ₹ 31.56 ಕೋಟಿ ಆದಾಯ ನಿರೀಕ್ಷಿಸಲಾಗಿತ್ತು. ಪಾರ್ಕಿಂಗ್ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದ ಕಂಪನಿಯಿಂದ ಬಿಬಿಎಂಪಿಗೆ ಇದುವರೆಗೂ ಹಣ ಪಾವತಿಯಾಗಿಲ್ಲವೆಂಬುದು ಗೊತ್ತಾಗಿದೆ. 

ಪಾರ್ಕಿಂಗ್ ನೀತಿ 2.0 ಅಡಿ ನಗರದ 723 ರಸ್ತೆಗಳಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿ ಟೆಂಡರ್ ಕರೆದಿತ್ತು. ಆದರೆ, ಯಾರೂ ಟೆಂಡರ್‌ನಲ್ಲಿ ಭಾಗವಹಿಸಿರಲಿಲ್ಲ. ಪಾರ್ಕಿಂಗ್ ನೀತಿಯಲ್ಲಿರುವ ಕೆಲ ಅವೈಜ್ಞಾನಿಕ ನಿಯಮಗಳೇ ಇದಕ್ಕೆ ಕಾರಣ ಎಂಬ ಆರೋಪಗಳೂ ಇವೆ. ಶಾಂತಿನಗರ ಬಸ್‌ ನಿಲ್ದಾಣ ಹಾಗೂ ಇತರೆಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಲ್ಲೆಲ್ಲ ಮೂಲಸೌಕರ್ಯ ಕೊರತೆಯೂ ಎದ್ದು ಕಾಣುತ್ತಿದೆ.

ದುಬಾರಿ ದರ ವಸೂಲಿ: ಕೆಲ ಉದ್ಯಾನಗಳು, ಶಾಪಿಂಗ್ ಮಾಲ್‌ಗಳು, ಬಿಬಿಎಂಪಿ ಬಸ್ ನಿಲ್ದಾಣ, ಮೆಟ್ರೊ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಟೆಂಡರ್ ಪಡೆದಿರುವ ಏಜೆನ್ಸಿಯವರು ದುಬಾರಿ ಶುಲ್ಕ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪವಿದೆ. ಇದರಿಂದ ಬೇಸತ್ತ ಜನ, ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದು ಕಂಡುಬರುತ್ತಿದೆ.

ನಗರದ ಬಹುತೇಕ ಕಡೆ ಖಾಸಗಿಯವರು ನಿಗದಿತ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿದ್ದಾರೆ. ಗಂಟೆ ಲೆಕ್ಕದಲ್ಲಿ ದರ ನಿಗದಿ ಮಾಡಿದ್ದಾರೆ. ಇದಕ್ಕೆ ಮಾನದಂಡ ಏನು ಎಂದೇ ತಿಳಿಯುವುದಿಲ್ಲ ಎನ್ನುತ್ತಾರೆ ನಾಗರಿಕರು. ಹೀಗೆ ದರ ನಿಗದಿ ವಿಚಾರದಲ್ಲೂ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಖಾಸಗಿಯವರ ವರ್ತನೆಯಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.

‘ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಖಾಸಗಿ ಜಾಗದಲ್ಲಿ ವಾಹನ ನಿಲುಗಡೆ ಮಾಡುತ್ತೇನೆ. ಪ್ರತಿ ಗಂಟೆಗೆ ₹ 40 ಪಡೆಯುತ್ತಿದ್ದಾರೆ. ವಾರಾಂತ್ಯದಲ್ಲಿ ₹ 60 ವಸೂಲಿ ಮಾಡುತ್ತಾರೆ. ದರದ ಬಗ್ಗೆ ಪ್ರಶ್ನೆ ಮಾಡಿದರೆ, ‘ಬೇಕಾದರೆ ವಾಹನ ನಿಲ್ಲಿಸಿ. ಇಲ್ಲದಿದ್ದರೆ ಹೋಗಿ’ ಎನ್ನುತ್ತಾರೆ’ ಎಂದು ಕಂಪನಿಯೊಂದರ ಉದ್ಯೋಗಿ ಎನ್‌.ಆರ್. ಸಾಗರ್ ದೂರಿದರು.

‘ಜನರ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ ಆಗುತ್ತಿಲ್ಲ. ಹೀಗಾಗಿ, ಖಾಸಗಿಯವರ ಆರ್ಭಟವೂ ಜೋರಾಗಿದೆ. ದರಕ್ಕೆ ಲಗಾಮು ಹಾಕಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಜನರಿಗೆ ಹೊರೆಯಾಗದಂತೆ ದರ ನಿಗದಿಪಡಿಸಬೇಕು. ಹೆಚ್ಚು ದರ ವಸೂಲಿ ಮಾಡುವ ಖಾಸಗಿಯವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಶಾಶ್ವತ ಪರಿಹಾರಕ್ಕೆ ಆಗ್ರಹ: ‘ಪ್ರತಿ ಚುನಾವಣೆಯಲ್ಲೂ ಮತ ಕೇಳಿಕೊಂಡು ಮನೆಗೆ ಬರುವ ಜನಪ್ರತಿನಿಧಿಗಳು, ‘ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುತ್ತೇವೆ’ ಎನ್ನುತ್ತಿದ್ದಾರೆ. ಚುನಾವಣೆಗಳು ಕಳೆದು ಹೊಸ ಚುನಾವಣೆಗಳು ಬಂದರೂ ಭರವಸೆಗಳು ಈಡೇರುತ್ತಿಲ್ಲ’ ಎಂದು ಜನರು ದೂರುತ್ತಿದ್ದಾರೆ.

‘ಚುನಾವಣೆಯಲ್ಲಿ ಗೆದ್ದವರಿಗೆ ಸಾಕಷ್ಟು ರಿಯಾಯಿತಿಗಳಿವೆ. ನಗರದ ಯಾವುದೇ ಭಾಗದಲ್ಲಿ ವಾಹನ ನಿಲ್ಲಿಸಿದರೂ ಯಾರೂ ಪಾರ್ಕಿಂಗ್ ಶುಲ್ಕ ಕೇಳುವುದಿಲ್ಲ. ಹೀಗಾಗಿ, ಜನಪ್ರತಿನಿಧಿಗಳಿಗೆ ಜನರ ಪಾರ್ಕಿಂಗ್ ಸಮಸ್ಯೆಯ ಬಿಸಿ ತಟ್ಟುತ್ತಿಲ್ಲ. ಇದೇ ಕಾರಣಕ್ಕೆ ಅವರ‍್ಯಾರೂ ಸ್ಮಾರ್ಟ್ ಪಾರ್ಕಿಂಗ್ ಬಗ್ಗೆ ಮಾತನಾಡುತ್ತಿಲ್ಲ. ಯಾವುದೇ ಸರ್ಕಾರ ಹಾಗೂ ಜನಪ್ರತಿನಿಧಿ ಆಡಳಿತಕ್ಕೆ ಬರಲಿ, ಮೊದಲು ಸ್ಮಾರ್ಟ್ ಪಾರ್ಕಿಂಗ್ ಕಲ್ಪಿಸಲು ಒತ್ತು ನೀಡಬೇಕು’ ಎಂದು ಜನರು ಆಗ್ರಹಿಸುತ್ತಿದ್ದಾರೆ.

ಲಭ್ಯವಾಗದ ಬಹುಮಹಡಿ ಕಟ್ಟಡ

‘ಸ್ಮಾರ್ಟ್ ಪಾರ್ಕಿಂಗ್’ ಉದ್ದೇಶಕ್ಕಾಗಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಬಹುಮಹಡಿ ಕಟ್ಟಡ’ ನಿರ್ಮಿಸಲಾಗಿದೆ. ವಾಹನಗಳ ನಿಲುಗಡೆಗೆ ಅಗತ್ಯವಿರುವ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಕಟ್ಟಡ ಇದುವರೆಗೂ ಜನರ ಸೇವೆಗೆ ಲಭ್ಯವಾಗಿಲ್ಲ. ‘ಪ್ರಿನ್ಸ್‌ ರಾಯಲ್‌ ಪಾರ್ಕಿಂಗ್‌ ಸೆಲ್ಯೂಷನ್‌ ಕಂಪನಿ’ಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಕಾಳಿದಾಸ ರಸ್ತೆ ಕನಕದಾಸ ರಸ್ತೆ ಶೇಷಾದ್ರಿ ರಸ್ತೆ ಗಾಂಧಿನಗರ ಮೆಜೆಸ್ಟಿಕ್‌ ವಿಧಾನಸೌಧ ಹಾಗೂ ಸುತ್ತಮುತ್ತ ಸ್ಥಳಕ್ಕೆ ಬಂದು ಹೋಗುವವರಿಗೆ ಈ ಕಟ್ಟಡದಿಂದ ಅನುಕೂಲವಾಗಲಿದೆ. ‘ಬಿಬಿಎಂಪಿಯ ನಗರೋತ್ಥಾನ ಯೋಜನೆಯಡಿ 2017ರಲ್ಲಿ ಕಟ್ಟಡದ ಕಾಮಗಾರಿ ಆರಂಭವಾಗಿತ್ತು. ಕಟ್ಟಡ ನಿರ್ಮಾಣ ಕೆಲಸ ಎರಡು ವರ್ಷಗಳ ಹಿಂದೆಯೇ ಮುಗಿದಿದೆ. ಇಷ್ಟಾದರೂ ಕಟ್ಟಡದ ಬಳಕೆಗೆ ಇದುವರೆಗೂ ಅವಕಾಶ ಸಿಕ್ಕಿಲ್ಲ’ ಎಂದು ಚಾಲಕರು ದೂರಿದರು.

ನಿಲುಗಡೆ ವಿಚಾರಕ್ಕೆ ಮಾರಾಮಾರಿ

ಎಚ್‌ಎಎಲ್‌ ಠಾಣೆ ವ್ಯಾಪ್ತಿಯ ದೊಡ್ಡನೆಕ್ಕುಂದಿಯಲ್ಲಿ ಕಾರು ನಿಲುಗಡೆ ವಿಚಾರವಾಗಿ ಅಕ್ಕ–ಪಕ್ಕದ ಮನೆಯವರ ನಡುವೆ ಮಾರಾಮಾರಿ ನಡೆದಿತ್ತು. ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ದಂಪತಿ ಮೇಲೆ ಹಲ್ಲೆ ಸಹ ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಪಾರ್ಕಿಂಗ್ ವಿಚಾರಕ್ಕೆ ಜನರ ನಡುವೆಯೇ ಪದೇ ಪದೇ ಗಲಾಟೆಗಳು ನಡೆಯುತ್ತಿವೆ. ಕೊಲೆ ಯತ್ನದಂಥ ಪ್ರಕರಣಗಳೂ ವರದಿಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT