ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇವಪುರ ವಿಧಾನಸಭಾ ಕ್ಷೇತ್ರ: ಹೊರವಲಯವನ್ನು ಕಾಡುತ್ತಿರುವ ಜಲ ಕಂಟಕ

ಬಹುತೇಕ ವಾರ್ಡುಗಳಲ್ಲಿ ದೂಳು– ಗುಂಡಿಗಳ ಸಮಸ್ಯೆ * ಹೂಳು ತುಂಬಿರುವ ವರ್ತೂರು ಕೆರೆ * ಪಾತಾಳಕ್ಕೆ ಕುಸಿದಿರುವ ಅಂತರ್ಜಲಮಟ್ಟ
Last Updated 7 ಮಾರ್ಚ್ 2020, 22:24 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ‘ಒಂದಲ್ಲ, ಎರಡು ಸಾವಿರ ಅಡಿ ಆಳದಲ್ಲೂ ನೀರಿಲ್ಲ. ದಣಿದು ಮನೆಗೆ ಬಂದವರಿಗೆ ಒಂದು ಲೋಟ ನೀರು ಕೊಡಲು ಯೋಚನೆ ಮಾಡುತ್ತಿದ್ದೇವೆ. ಟ್ಯಾಂಕರ್‌ಗಳು ಹೊತ್ತು ಬರುವ ನೀರು, ನಮ್ಮ ಪಾಲಿಗೆ ಜೀವಜಲ’ – ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರು, ಹಗದೂರು, ಕಾಡುಗೋಡಿ, ಹೂಡಿ ವಾರ್ಡ್‌ ನಿವಾಸಿಗಳು ಹೇಳುವ ಮಾತುಗಳಿವು. ಇದರೊಂದಿಗೆ 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಕಾಮಗಾರಿ, ಬಡಾವಣೆಗಳನ್ನು ಕೆಮ್ಮಣ್ಣು ಗುಂಡಿಗಳನ್ನಾಗಿ ಮಾಡಿದೆ. ನಾಲ್ಕು ವಾರ್ಡ್‌ಗಳ ಸದ್ಯದ ಚಿತ್ರಣವನ್ನು ವಿಜಯಕುಮಾರ್ ಎಸ್.ಕೆ. ಕಟ್ಟಿಕೊಟ್ಟಿದ್ದಾರೆ.

ವರ್ತೂರು –149
ಕಾಡುಬೀಸನಹಳ್ಳಿ ಬೆಳಗೆರೆ ರಸ್ತೆಯಲ್ಲಿ ಮುಂದೆ ಸಾಗಿದರೆ ವರ್ತೂರು ಸಿಗುತ್ತದೆ. ವರ್ತೂರು ವಾರ್ಡ್‌ಗೆ ಪಣತ್ತೂರು, ಬೆಳಗೆರೆ, ಮಧುರಾನಗರ 1, 2 ಮತ್ತು 3ನೇ ಹಂತ, ಗುಂಜೂರು, ಗುಂಜೂರು ಹೊಸಹಳ್ಳಿ, ವಿನಾಯಕನಗರ ಸೇರಿ ಹತ್ತಾರು ಹಳ್ಳಿಗಳು ಸೇರುತ್ತವೆ. ಈ ವಾರ್ಡ್‌ನ ಬಹುತೇಕ ಬಡಾವಣೆಗಳಲ್ಲಿ 110 ಹಳ್ಳಿ ಯೋಜನೆಯ (ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಹಳ್ಳಿಗಳು) ಕಾಮಗಾರಿ ನಡೆಯುತ್ತಿದೆ. ಮುನ್ನೆಕೊಳ್ಳಾಲದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಅದನ್ನು ಬಿಟ್ಟರೆ ಬೇರೆ ಹಳ್ಳಿಗಳಲ್ಲಿ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದರ ನಡುವೆ ಇಡೀ ವಾರ್ಡ್‌ನಲ್ಲಿ ಜಲಕ್ಷಾಮವೇ ತಲೆದೋರಿದೆ. ನಗರ ಬೆಳೆದಂತೆಲ್ಲಾ ಕೃಷಿ ಜಮೀನಿನಲ್ಲಿ ಕಟ್ಟಡಗಳು ಎದ್ದು ನಿಂತವು. ಭೂಮಿಗೆ ಬೆಲೆಯಂತೂ ಬಂತು. ಆದರೆ, ಕುಡಿಯಲು ನೀರಿಲ್ಲ. ಅಂತರ್ಜಲದ ಸೆಲೆಯಂತಿದ್ದ ವರ್ತೂರು ಕೆರೆ ಹೂಳು ತುಂಬಿಕೊಂಡ ನಂತರ ಕೊಳವೆ ಬಾವಿಗಳು ಬತ್ತಿ ಹೋಗಿವೆ. ದಿನನಿತ್ಯ ನೂರಾರು ಟ್ಯಾಂಕರ್‌ಗಳು ನೀರು ಹೊತ್ತು ತಿರುಗುತ್ತಿವೆ. ದಿನ ಬಳಕೆಗೂ ಹಣ ಕೊಟ್ಟು ನೀರು ಖರೀದಿಸಿಸಬೇಕಾದ ಸ್ಥಿತಿ ಇದೆ. ಕಾವೇರಿ ನೀರಿನ ಸಂಪರ್ಕ ಕೊಡಿಸುವುದಾಗಿ ರಾಜಕಾರಣಿಗಳು, ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಅದ್ಯಾವಾಗ ನೀರು ಬರುತ್ತದೋ ಗೊತ್ತಿಲ್ಲ ಎನ್ನುತ್ತಾರೆ ವರ್ತೂರು ವಾರ್ಡ್‌ನ ಜನ.

‌ಹಗದೂರು –84
ವೈಟ್‌ಫೀಲ್ಡ್‌ಗೆ ಹೊಂದಿ ಕೊಂಡಿರುವ ಹಗದೂರು ವಾರ್ಡ್‌ ವ್ಯಾಪ್ತಿಯಲ್ಲಿ ಸಿದ್ಧಾಪುರ, ರಾಮಗೊಂಡನಹಳ್ಳಿ, ನಾಗೊಂಡನಹಳ್ಳಿ, ಗಾಂಧಿಪುರ, ವಿಜಯನಗರ, ನಲ್ಲೂರಹಳ್ಳಿ ಸೇರಿ ಹಲವು ಬಡಾವಣೆಗಳಿವೆ. ಕಾವೇರಿ ನೀರು ಪೂರೈಕೆ ಯೋಜನೆಯ ಕಾಮಗಾರಿ ಈ ವಾರ್ಡ್‌ನಲ್ಲೂ ನಡೆಯುತ್ತಿದೆ. ಕೆಮ್ಮಣ್ಣಿನ ದೂಳಿನೊಂದಿಗೆ ಜನರ ಜೀವನ ಬೆರೆತು ಹೋಗಿದೆ. ಮಣ್ಣಿನ ಗುಂಡಿಯಲ್ಲಿ ಜೀವನ ಮಾಡಿದ ಅನುಭವವಾಗುತ್ತಿದೆ. ಇನ್ನೂ ಅದೆಷ್ಟು ದಿನ ಈ ಮಣ್ಣಿನೊಂದಿಗೆ ವಾಸವೋ ಗೊತ್ತಿಲ್ಲ ಎನ್ನುತ್ತಾರೆ ನಿವಾಸಿಗಳು. ಕಸ ನಿರ್ವಹಣೆ ಸಮಸ್ಯೆ ಅಷ್ಟಾಗಿ ಇಲ್ಲದಿದ್ದರೂ, ಅಲ್ಲಲ್ಲಿ ಖಾಲಿ ನಿವೇಶನಗಳಲ್ಲಿ ಕಸ ಬಿದ್ದಿದೆ. ಕುಡಿಯುವ ನೀರಿನ ಸಮಸ್ಯೆಯೂ ಈ ವಾರ್ಡ್‌ ಜನರನ್ನು ಕಾಡುತ್ತಿದೆ. ಆದರೆ, ನೆರೆ ಹೊರೆಯ ವಾರ್ಡ್‌ಗಳಿಗಿಂತ ಸ್ವಲ್ಪ ಮಟ್ಟಿಗೆ ಕಡಿಮೆ ಸಮಸ್ಯೆ ಇದೆ. ಕಾವೇರಿ ನೀರಿನ ಸಂಪರ್ಕದ ನಿರೀಕ್ಷೆಯಲ್ಲಿ ಜನ ಕಾಯುತ್ತಿದ್ದಾರೆ. ವರ್ತೂರು ಕೆರೆಯ ಹೂಳೆತ್ತಿ ನೀರು ಸಂಗ್ರಹವಾದರೆ ಈ ವಾರ್ಡ್‌ನಲ್ಲೂ ಅಂತರ್ಜಲ ವೃದ್ಧಿಯಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಹೂಡಿ–54
ಬೈರತಿ, ಬಿಳೆ ಶಿವಾಲೆ, ವಾರಣಸಿ, ಬೆಳತ್ತೂರು, ಕುಂಬೇನ ಅಗ್ರಹಾರ, ಸಾದರಮಂಗಲ, ಹೂಡಿ, ಸಾದರಮಂಗಲ ಕಾಲೊನಿ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಈ ಹಿಂದೆ ನಗರಸಭೆ ವ್ಯಾಪ್ತಿಯಲ್ಲಿದ್ದ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಬೈರತಿ, ಬಿಳೆ ಶಿವಾಲೆ ಮತ್ತು ವಾರಣಸಿ ಗ್ರಾಮಗಳಲ್ಲಿ110 ಹಳ್ಳಿ ಯೋಜನೆ ಕಾಮಗಾರಿ ನಡೆಯುತ್ತಿದೆ. ಈ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜಲಮಂಡಳಿ ಕೈಗೊಂಡಿರುವ ಒಳಚರಂಡಿ ಮತ್ತು ಕಾವೇರಿ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. 3 ವರ್ಷಗಳ ಹಿಂದೆ ಆರಂಭವಾಗಿರುವ ಕಾಮಗಾರಿ ಇನ್ನೂ ಮುಗಿದಿಲ್ಲ. ದೂಳು, ಗುಂಡಿಗಳ ನಡುವೆ ವಾಹನ ಚಾಲನೆ ಮಾಡುವುದು ವಾಹನ ಸವಾರರಿಗೆ ಸಾಹಸದ ಕೆಲಸವಾಗಿದೆ. ಸಾದರಮಂಗಲ, ಹೂಡಿ ಮತ್ತು ವಾರಣಸಿ ಕೆರೆಗಳು ಅಭಿವೃದ್ಧಿ ಕಂಡಿವೆ. ಬೈರತಿ, ಬಿಳೆಶಿವಾಲೆ ಉದ್ಯಾನಗಳು ಅಭಿವೃದ್ಧಿಯಾಗಿವೆ. ಒಳಚರಂಡಿ ಕಾಮಗಾರಿಯನ್ನು ವೇಗವಾಗಿ ಮುಗಿಸಬೇಕು ಎಂಬುದು ವಾರ್ಡ್ ಜನರ ಒತ್ತಾಯ.

ಕಾಡುಗೋಡಿ–83
ವೈಟ್‌ಫೀಲ್ಡ್‌ಗೆ ಹೊಂದಿ ಕೊಂಡಿರುವ ಕಾಡುಗೋಡಿ ವಾರ್ಡ್‌ನಲ್ಲಿ ಸಾಲು ಸಾಲು ಐಟಿ ಕಂಪನಿಗಳಿವೆ. ಚನ್ನಸಂದ್ರ, ಪಟಾಲಮ್ಮ ಲೇಔಟ್, ಮುನೇಶ್ವರ ಲೇಔಟ್, ಮೈತ್ರಿ ಲೇಔಟ್, ಪ್ರಶಾಂತ್ ಲೇಔಟ್, ಅಂಬೇಡ್ಕರ್ ನಗರ, ಬೃಂದಾವನ ಲೇಔಟ್, ವೀರಸ್ವಾಮಿ ಲೇಔಟ್ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ವಾಹನಗಳ ಸಂಖ್ಯೆ ಮತ್ತು ಜನವಸತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಂತೆಯೇ ಮೂಲಸೌಕರ್ಯ ಸಮಸ್ಯೆಯೂ ಹೆಚ್ಚಾಗುತ್ತಲೇ ಇದೆ. ಕಾವೇರಿ ನೀರಿನ ಸಂಪರ್ಕ ಇಲ್ಲದ ಬಡಾವಣೆಗಳಲ್ಲಿ ಕುಡಿಯುವ ನೀರಿನ ಬವಣೆ ಹೇಳತೀರದಾಗಿದೆ. ಬಿಂದಿಗೆ ನೀರಿಗೂ ಜನ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡ ಮನೆಯ ನಿವಾಸಿಗಳು ಟ್ಯಾಂಕರ್ ನೀರು ಖರೀದಿಸಿ ಬಳಸುತ್ತಿದ್ದಾರೆ, ಕೂಲಿ ಕಾರ್ಮಿಕ ಸಮುದಾಯ ನೀರು ಖರೀದಿ ಮಾಡಲು ಸಾಧ್ಯವಾಗದೆ ಪರಿತಪಿಸುತ್ತಿದೆ. ಕೊಡ ಹಿಡಿದು ನೀರಿಗಾಗಿ ಬೇಡುವ ಸ್ಥಿತಿ ಇದೆ. ಕಸ ನಿರ್ವಹಣೆ ಮಾಡುತ್ತಿದ್ದರೂ ಖಾಲಿ ನಿವೇಶನಗಳು ಕಸದ ಗುಂಡಿಗಳಾಗಿವೆ. ಎ.ಕೆ. ಗೋಪಾಲನ್ ಲೇಔಟ್, ಕಾಡುಗೋಡಿ ಪ್ಲಾಂಟೇಷನ್(ದಿನ್ನೂರು), ಚನ್ನಸಂದ್ರದಲ್ಲಿ 110 ಹಳ್ಳಿ ಕಾಮಗಾರಿ ನಡೆಯುತ್ತಿದೆ. ಈ ಬಡಾವಣೆಗಳಲ್ಲಿ ಜನ ದೂಳಿನಲ್ಲಿ ಮಿಂದೇಳುತ್ತಿದ್ದಾರೆ.

ಪಾಲಿಕೆ ಸಸ್ಯರು ಹೇಳುವುದೇನು?
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಾರ್ಡ್‌ಗೆ ‌₹21 ಕೋಟಿ ಅನುದಾನ ಬಂದಿದೆ. ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. 60ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಿದ್ದೇವೆ. ಎಲ್ಲವೂ ಬತ್ತಿ ಹೋಗಿವೆ. ವರ್ತೂರು ಕೆರೆ ಹೂಳೆತ್ತಿದರೆ ಅಂತರ್ಜಲ ವೃದ್ಧಿಯಾಗಲಿದೆ. ಈ ಕಾಮಗಾರಿ ಸದ್ಯ ಆರಂಭವಾಗಿದೆ. 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 110 ಹಳ್ಳಿ ಕಾಮಗಾರಿಗಳನ್ನು ಜಲಮಂಡಳಿ ಮುಗಿಸಿಕೊಟ್ಟಿಲ್ಲ. ಹೀಗಾಗಿ ರಸ್ತೆಗಳ ಸಮಸ್ಯೆ ಬಿಗಡಾಯಿಸಿದೆ.
–ಪುಷ್ಪಾ ಮಂಜುನಾಥ್,ಪಾಲಿಕೆಯ ವರ್ತೂರು ವಾರ್ಡ್ ಸದಸ್ಯೆ

**
ಕುಡಿಯುವ ನೀರಿನ ಸಮಸ್ಯೆ ಇರುವುದು ನಿಜ. ಅಕ್ಕ–ಪಕ್ಕದ ವಾರ್ಡ್‌ಗಳಿಗೆ ಹೋಲಿಸಿಕೊಂಡರೆ ಸ್ವಲ್ಪ ಮಟ್ಟಿಗೆ ಕಡಿಮೆ ಎನ್ನಬಹುದು. ನೀರು ಸಿಗುವ ಜಾಗ ಹುಡುಕಿ ಕೊಳವೆ ಬಾವಿ ಕೊರೆಸಿ ನೀರು ಪೂರೈಸುವ ಪ್ರಯತ್ನ ನಡೆದಿದೆ. ಕಾವೇರಿ ನೀರಿನ ಸಂಪರ್ಕ ದೊರೆತರೆ ನೀರಿನ ಸಮಸ್ಯೆಗೂ ಪರಿಹಾರ ಸಿಗಲಿದೆ. ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ವಾರ್ಡ್‌ ಅಭಿವೃದ್ಧಿಗೆ ₹100 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ.
–ಎಸ್‌. ಉದಯಕುಮಾರ್,ಪಾಲಿಕೆಯ ಹಗದೂರು ವಾರ್ಡ್ ಸದಸ್ಯ

**
ಕಾವೇರಿ ನೀರು ಸಂಪರ್ಕ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ. ಈ ಯೋಜನೆ ಪ್ರಗತಿಯಲ್ಲಿರುವ ಹಳ್ಳಿಗಳಲ್ಲಿ ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ. ಕಾಮಗಾರಿ ಮುಗಿದರೆ ರಸ್ತೆ ಅಭಿವೃದ್ಧಿಯಾಗಲಿದೆ. ಕಸದ ಸಮಸ್ಯೆ ವಾರ್ಡ್‌ನಲ್ಲಿ ಇಲ್ಲ. ಈವರೆಗೆ ₹ 90 ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಮೂರು ಪಾರ್ಕ್‌ ಮತ್ತು ಮೂರು ಕೆರೆಗಳ ಅಭಿವೃದ್ಧಿ ಮಾಡಿಸಿದ್ದೇನೆ.
–ಎ.ಸಿ.ಹರಿಪ್ರಸಾದ್,ಪಾಲಿಕೆಯ ಹೂಡಿ ವಾರ್ಡ್ ಸದಸ್ಯ

**

ಕೋಲಾರಕ್ಕೆ ಸಂಸದನಾದರೂ ನಮ್ಮ ಮನೆ ಕಾಡುಗೋಡಿ ವಾರ್ಡ್‌ನಲ್ಲೇ ಇದೆ. ಮೂಲತಃ ನಾನು ಅದೇ ವಾರ್ಡಿನ ನಿವಾಸಿ. ಜನರ ಸಮಸ್ಯೆಗಳಿಗೆ ಈಗಲೂ ಸ್ಪಂದಿಸುತ್ತಿದ್ದೇನೆ. ನಾನು ಪಾಲಿಕೆ ಸದಸ್ಯನಾದ ನಂತರ ವಾರ್ಡ್‌ನ ಅಭಿವೃದ್ಧಿ ಚಿತ್ರಣವನ್ನೇ ಬದಲಾವಣೆ ಮಾಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದೇನೆ. ನನ್ನ ಸ್ವಂತ ಹಣದಲ್ಲೇ ಕೊಳವೆ ಬಾವಿ ಕೊರೆಸಿರುವ ಉದಾಹರಣೆ ಇದೆ. ಬಿಬಿಎಂಪಿಯಿಂದ ₹80.93 ಕೋಟಿ ಮೊತ್ತದಲ್ಲಿ 349 ಮತ್ತು ಜಲಮಂಡಳಿಯಿಂದ ₹35 ಕೋಟಿ ಮೊತ್ತದ 4 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಒಟ್ಟಾರೆ ₹115.93 ಕೋಟಿ ಅನುದಾನದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ.
–ಎಸ್.ಮುನಿಸ್ವಾಮಿ,ಕಾಡುಗೋಡಿ ವಾರ್ಡ್‌ ಸದಸ್ಯ

**

ಜನ ಏನಂತಾರೆ
ವರ್ತೂರು ಕೆರೆ ಹೂಳು ತುಂಬಿಕೊಂಡ ನಂತರ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಟ್ಯಾಂಕರ್‌ ನೀರು ಬರದಿದ್ದರೆ ಸ್ನಾನವೇ ಇಲ್ಲ. ಒಂದು ಟ್ರ್ಯಾಕ್ಟರ್ ಟ್ಯಾಂಕರ್ ನೀರಿಗೆ ₹500ರಿಂದ ₹800 ಕೊಡಬೇಕು. ಯಾರಾದರೂ ಮನೆಗೆ ಬಂದರೆ ನೀರು ಕುಡಿಯುತ್ತೀರಾ ಎಂದು ಕೇಳುವುದೂ ಕಷ್ಟವಾಗಿದೆ
–ನಂಜುಂಡರೆಡ್ಡಿ,ವರ್ತೂರು

**

1,800 ಅಡಿ ಕೊರೆದರೂ ಅಂತರ್ಜಲ ಇಲ್ಲ. ಬರುವ ಒಂದಿಂಚು ಅಥವಾ ಎರಡಿಂಚು ನೀರು ಒಂದು ತಿಂಗಳಲ್ಲೇ ನಿಂತು ಹೋಗುತ್ತದೆ. ಕಾವೇರಿ ನೀರಿನ ಸಂಪರ್ಕ ಕೊಡಿಸುತ್ತೇವೆ ಎಂದು ಊರಿನ ರಸ್ತೆಗಳನ್ನೆಲ್ಲಾ ಕಿತ್ತು ಬಿಸಾಡಿದ್ದಾರೆ. ಅದ್ಯಾವ ಕಾಲಕ್ಕೆ ಬರುತ್ತದೋ ಗೊತ್ತಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಇಚ್ಛಾಶಕ್ತಿ ಬೇಕು.
–ಸುಬ್ಬಣ್ಣ,ವರ್ತೂರು

**

ರಸ್ತೆಗಳನ್ನು ಅಗೆದು ಆರು ತಿಂಗಳಾಗಿದೆ. ದೂಳಿನ ನಡುವೆ ಜೀವನ ಸಾಗಿದೆ. ಬಡಾವಣೆಯ ಯಾವುದೇ ರಸ್ತೆಗೆ ಹೋದರೂ ಇದೇ ಸ್ಥಿತಿ ಇದೆ. ಭಯದ ನಡುವೆ ಜೀವನ ನಡೆಸುವಂತಾಗಿದೆ. ಆದಷ್ಟು ಬೇಗ ಜಲಮಂಡಳಿಯವರು ಕಾಮಗಾರಿ ಪೂರ್ಣಗೊಳಿಸಬೇಕು.
–ನಾಗರಾಜ್,ಹಗದೂರು


**
ಹಗದೂರು ವಾರ್ಡ್‌ನಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ರಸ್ತೆಯಲ್ಲಿ 10 ನಿಮಿಷ ನಿಂತರೆ ಹತ್ತಾರು ಟ್ಯಾಂಕರ್‌ಗಳು ಓಡಾಡುವುದನ್ನು ನೋಡಬಹುದು. ನಿತ್ಯ ಬಳಕೆಗೂ ನೀರು ಖರೀದಿ ಮಾಡಬೇಕಿದೆ. ಕಾವೇರಿ ನೀರಿನ ಸಂಪರ್ಕವನ್ನು ಆದಷ್ಟು ಬೇಗ ಕಲ್ಪಿಸಬೇಕು. ಇಲ್ಲದಿದ್ದರೆ ಇನ್ನಷ್ಟು ತೊಂದರೆ ಎದುರಾಗಲಿದೆ.
–ತ್ಯಾಗರಾಜ್, ವಿನಾಯಕನಗರ

**
ಕಾಡುಗೋಡಿ ವಾರ್ಡ್‌ನ ಕಟೇರಮ್ಮ ದೇವಸ್ಥಾನ ಮತ್ತು ಸುತ್ತಮುತ್ತಲ ಬೀದಿಗಳಲ್ಲಿ ಸಂಚಾರವೇ ಕಷ್ಟವಾಗಿದೆ. ಕುಡಿಯಲು ನೀರಿಲ್ಲ, ರಸ್ತೆಗಳಂತೂ ಇಲ್ಲವೇ ಇಲ್ಲ. ಮನೆ ತುಂಬ ದೂಳು ತುಂಬಿಕೊಳ್ಳುತ್ತಿದೆ. ಕಾವೇರಿ ನೀರಿನ ಸಂಪರ್ಕ ಇಲ್ಲದೆ ಹನಿ ನೀರಿಗೆ ತೊಂದರೆ ಅನುಭವಿಸುತ್ತಿದ್ದೇವೆ.
–ಅನಸೂಯಾ,ಕಟೇರಮ್ಮ ಬಡಾವಣೆ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT