ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರ ಮಾರುಕಟ್ಟೆ: ಒಡೆದ ತಾಳ್ಮೆಯ ಕಟ್ಟೆ

ಹಳೆಯ ಕಟ್ಟಡ ಕೆಡವಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ l ಹೊಸ ಕಟ್ಟಡ ಕಾಮಗಾರಿ ಅರ್ಧದಲ್ಲೇ ಸ್ಥಗಿತ
Last Updated 21 ಏಪ್ರಿಲ್ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಮಧ್ಯಭಾಗದಲ್ಲಿ ಬಸ್‌ಗಾಗಿ ಕಾದು ನಿಲ್ಲುವ ವಿದ್ಯಾರ್ಥಿಗಳು, ಪಾದಚಾರಿ ಮಾರ್ಗವನ್ನು ಆಕ್ರಮಿಸಿರುವ ಮಿನಿ ಮಾರುಕಟ್ಟೆ, ರಸ್ತೆಯಲ್ಲೇ ಬಿದ್ದಿರುವ ಕಸದ ರಾಶಿ, ಒಳಚರಂಡಿ ವ್ಯವಸ್ಥೆಯಿಲ್ಲದೇ ಕಟ್ಟಡದ ನೆಲಮಹಡಿ ಆವರಿಸಿರುವ ಕೊಳಚೆ ನೀರು...

ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಪ್ರಸ್ತುತ ಕಂಡುಬರುವ ದುಃಸ್ಥಿತಿಗಳಿವು. ಈ ಎಲ್ಲ ಸಮಸ್ಯೆಗಳಿಗೆ ಮೂಲಕಾರಣ ಅಲ್ಲಿ ತಲೆ ಎತ್ತಬೇಕಿದ್ದ ಮಾರುಕಟ್ಟೆಯ ಹೊಸ ಕಟ್ಟಡ. ಈ ಜಾಗದಲ್ಲಿ ಹಿಂದೆ ಇದ್ದ ಮಾರುಕಟ್ಟೆಯನ್ನು 2014ರಲ್ಲಿ ಕೆಡವಿ ಅಲ್ಲಿ ಬಿಬಿಎಂಪಿ ಹಾಗೂ ಬಿಡಿಎ ಜಂಟಿಯಾಗಿ ಮಾಲ್‌ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಈ ಸಲುವಾಗಿ ಮಾರುಕಟ್ಟೆಯಲ್ಲಿದ್ದ ಅಂಗಡಿಗಳನ್ನುಏಕಾಏಕಿ ಸ್ಥಳಾಂತರ ಮಾಡುವಂತೆ ಬಿಬಿಎಂಪಿ ನೋಟಿಸ್‌ ನೀಡಿತ್ತು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ವ್ಯಾಪಾರಿಗಳು ಕೋರ್ಟ್‌ ಮೆಟ್ಟಿಲೇರಿದ್ದರು. ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕಾಮಗಾರಿ ಆರಂಭಿಸುವಂತೆ ಕೋರ್ಟ್‌ ಆದೇಶಿಸಿತ್ತು. ಆದರೆ ಕೆಲವೇ ಅಂಗಡಿಗಳಿಗೆ ವ್ಯವಸ್ಥೆ ಕಲ್ಪಿಸಿ ಉಳಿದವರು ಮಲ್ಲೇಶ್ವರದ ಬಸ್‌ನಿಲ್ದಾಣವನ್ನೇ ಮಿನಿ ಮಾರ್ಕೆಟ್‌ ಮಾಡಿಕೊಂಡರು. ಆ ಮಾರುಕಟ್ಟೆ ಕ್ರಮೇಣ ರಸ್ತೆವರೆಗೂ ವ್ಯಾಪಿಸಿದೆ.

ಮಾರುಕಟ್ಟೆಯ ಹಳೆ ಕಟ್ಟಡವನ್ನು ಕೆಡವಿ ಐದು ವರ್ಷಗಳು ಕಳೆದರೂ ಹೊಸ ಮಾರುಕಟ್ಟೆ ತಲೆ ಎತ್ತಲಿಲ್ಲ. ಅಂಗಡಿ ವ್ಯಾಪಾರಿಗಳು ಇಗಲೂ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಈ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಹೊಸ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ. ನಿರ್ಮಾಣ ಹಂತದ ಈ ಕಟ್ಟಡದಲ್ಲಿ ಕೊಳಚೆ ತಾಣವಾಗಿ ಮಾರ್ಪಟ್ಟಿದೆ. ಕಾಮಗಾರಿ ವೇಳೆ ಈ ಪ್ರದೇಶದ ಒಳಚರಂಡಿ ವ್ಯವಸ್ಥೆಗೂ ಹಾನಿಯಾಗಿದ್ದು, ಪಾಳು ಬಿದ್ದ ಈ ಸಂಕೀರ್ಣದ ನೆಲಮಹಡಿಯಲ್ಲಿ 8 ಅಡಿಗಳಷ್ಟು ಕೊಳಚೆ ನೀರು ನಿಂತಿದೆ. ಪಕ್ಕದಲ್ಲಿರುವ ಮಾರುತಿ ಸರ್ವಿಸ್‌ ಸ್ಟೇಷನ್‌ನಿಂದ ಬರುವ ನೀರು, ಮಠದ ನೀರು ಬಂದು ಈ ಕಟ್ಟಡವನ್ನೇ ಸೇರಿಕೊಳ್ಳುತ್ತದೆ.

ಬಿಬಿಎಂಪಿಯವರು ಇಲ್ಲಿ ನಿಂತ ಕೊಳಚೆ ನೀರನ್ನು ಪಂಪ್‌ ಮೂಲಕ ಚರಂಡಿಗೆ ಬಿಡುತ್ತಿದ್ದರು. ಆದರೆ ಐದಾರು ತಿಂಗಳಿನಿಂದ ನೀರು ಹೊರ ಹಾಕದ ಕಾರಣ ನೀರು ಕೆಟ್ಟ ವಾಸನೆ ಬೀರುತ್ತಿದೆ. ಈ ದುರ್ಗಂಧಕ್ಕೆ ಸುತ್ತಮುತ್ತಲಿನ ಜನ ಮೂಗು ಮುಚ್ಚಿಕೊಳ್ಳುವಂತಹ ಪರಿಸ್ಥಿತಿ ಇದೆ. ಈ ಪ್ರದೇಶದಲ್ಲಿ ಡೆಂಗೆ, ಮಲೇರಿಯಾದಂತಹ ಬೀಕರ ರೋಗಗಳು ಹೆಚ್ಚುವ ಆತಂಕವನ್ನು ಸ್ಥಳೀಯರು ಎದುರಿಸುತ್ತಿದ್ದಾರೆ.

ಕಾಮಗಾರಿ ಸಂದರ್ಭದಲ್ಲಿ ಕಟ್ಟಡದ ಪಕ್ಕದಲ್ಲಿದ್ದ ಈಶ್ವರ ಸೇವಾ ಮಂಡಳಿಯ ಆವರಣ ಗೋಡೆ ಕುಸಿದು ಬಿದ್ದಿದೆ. ಇದಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಿಲ್ಲ. ಈ ಬಗ್ಗೆ ಎಷ್ಟು ಬಾರಿ ದೂರು ನೀಡಿದರೂ ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ.

ಕಾಮಗಾರಿಗೆ ಲಕ್ಷಾಂತರ ಮೌಲ್ಯದ ಕಂಬಿ ಹಾಗೂ ಇತರ ಸಾಮಗ್ರಿಗಳನ್ನು ಸ್ಥಳದಲ್ಲಿ ರಾಶಿ ಹಾಕಲಾಗಿದೆ. ಅದನ್ನು ಕಾಯಲು ಭದ್ರತಾ ಸಿಬ್ಬಂದಿಯೂ ಇಲ್ಲ. ಯಾವುದೇ ಸೂಕ್ತ ಭದ್ರತೆ ಇಲ್ಲದ ಕಾರಣ ಈ ಕಟ್ಟಡ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ದೂರುತ್ತಾರೆ.

***

‘ಕೊಳಚೆ ನೀರು ತೆರವು ಮಾಡಲಿ’

ಇಲ್ಲಿ ನಿಂತ ಕೊಳಚೆ ನೀರಿನ ದುರ್ಗಂಧಕ್ಕೆ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆ ಶುಭ ಸಮಾರಂಭಗಳಿಗೆ ಬರುವ ಜನ ಮುಜುಗರಕ್ಕೀಡಾಗುತ್ತಾರೆ. ಮಳೆಗಾಲ ಸಮೀಪಿಸುತ್ತಿದ್ದು ಕೊಳಚೆ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಕೊಳಚೆ ನೀರನ್ನು ತಕ್ಷಣ ತೆರವು ಮಾಡಬೇಕು.

– ಸೌಭಾಗ್ಯ ಈಶ್ವರಯ್ಯ,ಈಶ್ವರ ಸೇವಾ ಮಂಡಳಿ ಅಧ್ಯಕ್ಷರು

***

ಕಾಮಗಾರಿ ಬೇಗ ಪೂರ್ಣಗೊಳಿಸಿ’

ಇಲ್ಲಿದ್ದ ಹಳೆ ಮಾರುಕಟ್ಟೆಯಲ್ಲಿ ನನ್ನ ಅಂಗಡಿ ಇತ್ತು. ಕಾಮಗಾರಿಯಿಂದ ಫುಟ್‌ಪಾತ್‌ ಮೇಲೆ ಅಂಗಡಿ ನಡೆಸುತ್ತಿದ್ದೇವೆ. ಇದಕ್ಕೂ ಮುನ್ನ ಇಲ್ಲಿ ಬಸ್‌ನಿಲ್ದಾಣವಿತ್ತು. ಕಾಮಗಾರಿ ಬೇಗ ಪೂರ್ಣವಾದರೆ ಅಂಗಡಿಗಳು ಸ್ಥಳಾಂತರವಾಗಿ ಬಸ್‌ ನಿಲ್ದಾಣ ಮತ್ತೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.’

– ಸಂತೋಷ್‌ ಕುಮಾರ್‌,ಅಂಗಡಿ ಮಾಲೀಕ

***

‘ವಿದ್ಯಾರ್ಥಿಗಳ ಪಡಿಪಾಟಲು’

ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಮಾರುಕಟ್ಟೆ ಕಟ್ಟಡ ಈ ಸ್ಥಿತಿ ತಲುಪಿದೆ. ಬಸ್‌ ನಿಲ್ದಾಣ ಇಲ್ಲದೇ ವಿದ್ಯಾರ್ಥಿಗಳು ಪ್ರತಿನಿತ್ಯ ಈ ಕಿರಿದಾದ ರಸ್ತೆಯಲ್ಲೇ ಬಸ್‌ಗಾಗಿ ಕಾಯುತ್ತಾರೆ. ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ.

– ಅಭಿಷೇಕ್‌ ರಾವ್‌,ಸ್ಥಳೀಯ

***

ಕಾರಣ ಒಂದು ಸಮಸ್ಯೆ ಹಲವು

l ಪಾದಚಾರಿ ಮಾರ್ಗದಲ್ಲೇ ತಾತ್ಕಾಲಿಕ ಮಾರುಕಟ್ಟೆ

l ಪ್ರಯಾಣಿಕರಿಗೆ ಸೂಕ್ತ ಬಸ್‌ ನಿಲ್ದಾಣವಿಲ್ಲ

l ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ ಮಾರುಕಟ್ಟೆ ತ್ಯಾಜ್ಯ

l ಅನೈತಿಕ ಚಟುವಟಿಕೆಗಳ ತಾಣವಾಗಿದೆ ನಿರ್ಮಾಣದ ಹಂತದಲ್ಲಿರುವ ಕಟ್ಟಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT