ಮೆಟ್ರೊ ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯದ ಸರ್ಕಾರವನ್ನು ಪ್ರತಿನಿಧಿಸುವ ನಾಯಕರು ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡುತ್ತಿರುವುದು ಖಂಡನೀಯ. ಸಾರ್ವಜನಿಕರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಮೆಟ್ರೊ ಪ್ರಯಾಣ ದರವನ್ನು ಇಳಿಸಬೇಕು. ಈಗ ನಿಗದಿಪಡಿಸಿರುವ ದರ ಎಲ್ಲ ವರ್ಗದ ಜನರಿಗೆ ಹೊರೆಯಾಗಲಿದೆ. ಈಗಾಗಲೇ ಬಿಎಂಆರ್‌ಸಿಎಲ್ ಸಂಸ್ಥೆ ಲಾಭದಲ್ಲಿದೆ. ಮೆಟ್ರೊ ಪ್ರಯಾಣ ದರ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಹೋಗಬೇಕು.ಪ್ರಸಾದ್ ಆರ್., ಕೆಂಗೇರಿ ಉಪನಗರ
‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಏಕರೂಪವಾಗಿ ನಿಗದಿ ಮಾಡದೆ, ತಮಗೆ ಇಷ್ಟ ಬಂದಂತೆ ನಿಗದಿ ಮಾಡುವ ಮೂಲಕ ಮೆಟ್ರೊ ಇರುವುದು ಕೇವಲ ಉಳ್ಳವರಿಗೆ ಮಾತ್ರ ಎಂಬುದನ್ನು ಬಿಎಂಆರ್‌ಸಿಎಲ್ ಸಾಬೀತುಪಡಿಸಿದೆ. ನಾನು ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದಿಂದ ಸರ್.ಎಂ. ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ಮೆಟ್ರೊ ನಿಲ್ದಾಣಕ್ಕೆ ನಿಗದಿತ ಸಮಯಕ್ಕೆ ತೆರಳಲು ಅನುಕೂಲವಾಗಿತ್ತು. ಆದರೆ, ಈಗ ಈ ಮಾರ್ಗದಲ್ಲಿ ಶೇಕಡ 60ರಷ್ಟು ಪ್ರಯಾಣ ದರವನ್ನು ಹೆಚ್ಚಿಸಿರುವುದು ಹೊರೆಯಾಗಿ ಪರಿಣಮಿಸಿದೆ. ನಮ್ಮ ಮೆಟ್ರೊ ಈಗ ದೇಶದಲ್ಲಿ ದುಬಾರಿ ಪ್ರಯಾಣ ದರ ಹೊಂದಿರುವ ಕುಖ್ಯಾತಿಗೆ ಒಳಗಾಗಿದೆ.ಸಿದ್ದೇಶ ಸಿ., ವಿಘ್ನೇಶ್ವರನಗರ
ನಾನು ಪ್ರತಿದಿನ ನಾಗಸಂದ್ರ ಮೆಟ್ರೊ ನಿಲ್ದಾಣದಿಂದ ಕೆಂಪೇಗೌಡ ಮೆಟ್ರೊ ನಿಲ್ದಾಣದವರೆಗೆ ಸಂಚರಿಸುತ್ತೇನೆ. ಹಿಂದೆ ಈ ಮಾರ್ಗದ ಪ್ರಯಾಣ ದರ ₹36.10 ಇತ್ತು. ಈಗ ₹57 ಆಗಿದೆ. ಏಕಾಏಕಿ ₹20.90 ಏರಿಕೆಯಾಗಿದ್ದು, ಯಾವ ಆಧಾರದಲ್ಲಿ ಇಷ್ಟೊಂದು ಪ್ರಯಾಣ ದರ ನಿಗದಿ ಪಡಿಸಿದ್ದಾರೆ ಎಂಬುದನ್ನು ಬಿಎಂಆರ್‌ಸಿಎಲ್ ಬಹಿರಂಗ ಪಡಿಸಬೇಕು. ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ, ಜಾಲಹಳ್ಳಿ, ದಾಸರಹಳ್ಳಿ ಮೆಟ್ರೊ ನಿಲ್ದಾಣಗಳಲ್ಲಿ ಇಳಿದರೂ ಪ್ರಯಾಣ ದರ ₹57 ಕಡಿತವಾಗುತ್ತಿದೆ. ಇದು ಅವೈಜ್ಞಾನಿಕ. ಬಿಎಂಆರ್‌ಸಿಎಲ್ ಲೂಟಿ ಸಂಸ್ಥೆಯಾಗದೇ, ಸಾರ್ವಜನಿಕರ ಸೇವೆ ಮಾಡುವ ಸಂಸ್ಥೆಯಾಗಲಿ.ಡಿ. ಗಂಗಾಧರಪ್ಪ, ನಾಗಸಂದ್ರ
ನಗರದಲ್ಲಿ ಈಗಾಗಲೇ ವಿದ್ಯುತ್ ಚಾಲಿತ (ಇವಿ) ದ್ವಿಚಕ್ರ ವಾಹನ ಮತ್ತು ಕಾರುಗಳ ಸಂಖ್ಯೆ ಹೆಚ್ಚಾಗಿದೆ. ನನ್ನ ಇ.ವಿ ಕಾರಿನಲ್ಲಿ ಕೋಣನಕುಂಟೆ ಕ್ರಾಸ್‌ನಿಂದ ಮೆಜೆಸ್ಟಿಕ್ ತಲುಪಲು ₹26 ವೆಚ್ಚ ತಗಲುತ್ತದೆ. ಆದರೆ, ಕೋಣನಕುಂಟೆ ಮೆಟ್ರೊ ನಿಲ್ದಾಣದಿಂದ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣಕ್ಕೆ ತಲುಪಲು ₹72 ಪ್ರಯಾಣ ದರ ಪಾವತಿಸಬೇಕಾಗಿದೆ. ಇ.ವಿ ದ್ವಿಚಕ್ರ ವಾಹನದಲ್ಲಿ ಇದಕ್ಕಿಂತ ಕಡಿಮೆ ವೆಚ್ಚವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮೆಟ್ರೊ ಪ್ರಯಾಣ ದರವನ್ನು ಇಳಿಸಬೇಕು.ಮಂಡಗದ್ದೆ ಶ್ರೀನಿವಾಸಯ್ಯ, ಪ್ರೆಸ್ಟೀಜ್ ಫಾಲ್ಕನ್ ಸಿಟಿ
ನಗರದಲ್ಲಿರುವ ಬಹುತೇಕ ಐ.ಟಿ. ಕಂಪನಿಗಳು ತಮ್ಮ ನೌಕರರಿಗೆ ವಾಹನದ ವ್ಯವಸ್ಥೆ ಕಲ್ಪಿಸಿವೆ. ಆದರೆ, ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಐ.ಟಿ. ಉದ್ಯೋಗಿಗಳು ಮೆಟ್ರೊ ಮೂಲಕ ಕಚೇರಿಗಳಿಗೆ ತಲುಪುತ್ತಾರೆ. ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿರುವುದರಿಂದ ನಮ್ಮಂತಹ ಐ.ಟಿ. ಉದ್ಯೋಗಿಗಳು ಮೆಟ್ರೊ ತ್ಯಜಿಸಿ, ಕಂಪನಿಯ ವಾಹನಗಳನ್ನು ಬಳಸುತ್ತೇವೆ. ಇದರಿಂದ ಸಂಚಾರ ದಟ್ಟಣೆಯ ಸಮಸ್ಯೆ ಹೆಚ್ಚಾಗಲಿದೆ. ವಾಯು ಮಾಲಿನ್ಯದಿಂದ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತವೆ. ಕೂಡಲೇ ಮೆಟ್ರೊ ಪ್ರಯಾಣ ದರವನ್ನು ಪರಿಷ್ಕರಿಸುವ ಅಗತ್ಯವಿದೆ.ಅನುಷಾ ಬಿ., ಎಂಟನೇ ಮೈಲಿ
ನಾನು ಪ್ರತಿನಿತ್ಯ ವೈಟ್‌ಫೀಲ್ಡ್‌ನಿಂದ ಕೆಂಗೇರಿಯ ಕುಂಬಳಗೋಡಿನಲ್ಲಿರುವ ಎಂಜಿನಿಯರಿಂಗ್ ಕಾಲೇಜಿಗೆ ಮೆಟ್ರೊ ಮೂಲಕ ಪ್ರಯಾಣ ಮಾಡುತ್ತೇನೆ. ಸರಿಯಾದ ಸಮಯಕ್ಕೆ ಕಾಲೇಜಿಗೆ ತೆರಳಲು ಹಾಗೂ ಸುರಕ್ಷಿತವಾಗಿ ಮತ್ತೆ ಮನೆಗೆ ಬರಲು ಮೆಟ್ರೊ ಅನುಕೂಲವಾಗಿತ್ತು. ಕಾಲೇಜಿನಲ್ಲಿ ನೀಡುವ ಎಲ್ಲ ಅಸೈನ್‌ಮೆಂಟ್‌ಗಳು ಹಾಗೂ ನನ್ನ ಅಧ್ಯಯನಕ್ಕೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಈಗ ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿರುವುದರಿಂದ ನನಗೆ ಹೊರೆಯಾಗಿ ಪರಿಣಮಿಸಿದೆ. ನಾನು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಸರಿಯಾದ ಸಮಯಕ್ಕೆ ಕಾಲೇಜಿಗೆ ತೆರಳು ಸಾಧ್ಯವಿಲ್ಲ. ಬಿಎಂಆರ್‌ಸಿಎಲ್ ಕೂಡಲೇ ಮೆಟ್ರೊ ಪ್ರಯಾಣ ದರವನ್ನು ಇಳಿಸಿದರೆ ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.ರೇವತಿ, ವಿದ್ಯಾರ್ಥಿ, ವೈಟ್‌ಫೀಲ್ಡ್
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪದೇ ಪದೇ ಅಗತ್ಯ ವಸ್ತುಗಳ ದರ ಏರಿಕೆ ಮಾಡುತ್ತಿವೆ. ಈಗಾಗಲೇ ನೀರು, ಸಾರಿಗೆ, ವಿದ್ಯುತ್ ದರಗಳನ್ನು ಹೆಚ್ಚಿಸಲಾಗಿದೆ. ಈಗ ಮೆಟ್ರೊ ಪ್ರಯಾಣ ದರ ಏರಿಕೆ ಮಾಡುವ ಮೂಲಕ ಸಾರ್ವಜನಿಕರ ಮೇಲೆ ಬರೆ ಎಳೆದಿವೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಾಡುವ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಮೆಟ್ರೊ ಪ್ರಯಾಣ ದರ ಏರಿಕೆಯ ನಿರ್ಧಾರವನ್ನು ಪರಿಷ್ಕರಿಸಬೇಕು.ರಕ್ಷಿತಾ ಎಂ.ಕೆ., ವಿದ್ಯಾರ್ಥಿನಿ
ಬೆಂಗಳೂರು ಮೆಟ್ರೊ ರೈಲು ನಿಗಮವು ನಷ್ಟದ ನೆಪವೊಡ್ಡಿ ಪ್ರಯಾಣ ದರ ಏರಿಕೆಯನ್ನು ಮಾಡಿರುವ ನಿರ್ಧಾರ ಸಮಂಜಸವಲ್ಲ. ಜಾಗತೀಕರಣದ ನಂತರ ಸರ್ಕಾರದ ಹಲವು ಅಂಗ ಸಂಸ್ಥೆಗಳು ಪ್ರತ್ಯೇಕ ನಿಗಮಗಳಾಗಿ ಬದಲಾಗಿರುವುದರ ನೇರ ಪರಿಣಾಮ ಇದು. ಸ್ವಯಂ ಹಣಕಾಸು ಸಂಸ್ಥೆಗಳಾಗಿ ಈ ಸಾರಿಗೆ ನಿಗಮಗಳು ಮಾರ್ಪಾಡುಗೊಂಡ ನಂತರ ಖಾಸಗಿ ಸಂಸ್ಥೆಗಳ ರೀತಿಯಲ್ಲಿ ಲಾಭ ನಷ್ಟದ ಬಗ್ಗೆ ಮಾತನಾಡಿ ಪ್ರಯಾಣ ದರ ಏರಿಕೆ ಮಾಡಿರುವುದು ಖಂಡನೀಯ.ಅಜಯ್ ಕಾಮತ್, ಮಲ್ಲೇಶ್ವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.