ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ಆದಾಯ ಮೂಲವಾಗದ ಖಾಲಿ ಜಾಗ

ಮೆಟ್ರೊ: 2024ರ ವೇಳೆಗೆ 90 ಕಿ.ಮೀಗೆ ಮೆಟ್ರೊ ಜಾಲ ವಿಸ್ತರಿಸುವ ಗುರಿ
Last Updated 20 ಅಕ್ಟೋಬರ್ 2022, 21:31 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ ರೈಲಿಗೆ ಈಗ 11 ವರ್ಷದ ಸಂಭ್ರಮ. 56 ಕಿಲೋ ಮೀಟರ್‌ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭವಾಗಿದ್ದು, ಹೊಸ ಮಾರ್ಗಗಳ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಆದರೆ, ತನ್ನ ಸುಪರ್ದಿಯಲ್ಲಿರುವ 30 ಎಕರೆಗೂ ಅಧಿಕ ಜಾಗವನ್ನು ಆದಾಯದ ಮೂಲವಾಗಿ ಪರಿವರ್ತಿಸಿಕೊಳ್ಳುವಲ್ಲಿ ಬಿಎಂಆರ್‌ಸಿಎಲ್ ಹಿಂದೆ ಬಿದ್ದಿದೆ.

ಮಹಾತ್ಮ ಗಾಂಧಿ ರಸ್ತೆ– ಬೈಯಪ್ಪನಹಳ್ಳಿ ತನಕ 6.7 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗದಲ್ಲಿ 2011 ಅ.20ರಂದು ‘ನಮ್ಮ ಮೆಟ್ರೊ’ ವಾಣಿಜ್ಯ ಸಂಚಾರ ಆರಂಭವಾಗಿತ್ತು. ಆರು ನಿಲ್ದಾಣಗಳನ್ನು ಈ ಮಾರ್ಗವು ಹೊಂದಿತ್ತು. ಅದಾದ ಬಳಿಕ ಒಟ್ಟು ಆರು ವಿಸ್ತರಿತ ಮಾರ್ಗಗಳು ಲೋಕಾರ್ಪಣೆಗೊಂಡಿವೆ. ಈಗ ಮೆಟ್ರೊ ಜಾಲದ ವಾಣಿಜ್ಯ ಕಾರ್ಯಾಚರಣೆ ಈವರೆಗೆ 56 ಕಿಲೋ ಮೀಟರ್‌ಗೆ ವಿಸ್ತರಣೆಗೊಂಡಿದೆ.

ಪ್ರತಿನಿತ್ಯ ಸರಾಸರಿ 5.4 ಲಕ್ಷ ಜನ ಮೆಟ್ರೊ ರೈಲಿನಲ್ಲಿ ಸಂಚರಿಸುತ್ತಿದ್ದು, ₹1.5 ಕೋಟಿ ವರಮಾನ ಸಂಗ್ರಹವಾಗುತ್ತಿದೆ. ಒಟ್ಟಾರೆ ₹11 ಸಾವಿರ ಕೋಟಿಯಷ್ಟು ದೀರ್ಘಾವಧಿ ಸಾಲವನ್ನು ನಿಗಮ ಹೊಂದಿದೆ. 2024ರ ಡಿಸೆಂಬರ್ ವೇಳೆಗೆ ಮೆಟ್ರೊ ರೈಲು ಜಾಲವನ್ನು 90 ಕಿಲೋ ಮೀಟರ್‌ಗೆ ವಿಸ್ತರಿಸಿ ಪ್ರಯಾಣಿಕರ ಸಂಖ್ಯೆಯನ್ನು 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ.

ಚಾಲ್ತಿಯಲ್ಲಿರುವ ನಿಲ್ದಾಣಗಳು, ಡಿಪೊಗಳ ವ್ಯಾಪ್ತಿಯಲ್ಲಿ 30 ಎಕರೆಗೂ ಅಧಿಕ ಜಾಗ ಬಿಎಂಆರ್‌ಸಿಎಲ್ ಸುಪರ್ದಿಯಲ್ಲಿದೆ. ಇದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿ ಆದಾಯ ಬರುವಂತೆ ಮಾಡಿಕೊಳ್ಳುವ ಎಲ್ಲಾ ಅವಕಾಶಗಳಿದ್ದರೂ ಪಾಳುಬಿದ್ದ ಸ್ಥಿತಿಯಲ್ಲೇ ಉಳಿದುಕೊಂಡಿವೆ. ಈ ಆಸ್ತಿಯಿಂದ ವರಮಾನ ವೃದ್ದಿಸಿಕೊಳ್ಳಲು ಪ್ರತ್ಯೇಕ ವಿಭಾಗವಿದ್ದರೂ, ಖಾಲಿಯಾಗಿಯೇ ಉಳಿದುಕೊಂಡಿವೆ.

ಮೆಜೆಸ್ಟಿಕ್, ಎಂ.ಜಿ. ರಸ್ತೆಯಂತಹ ಪ್ರಮುಖ ವಾಣಿಜ್ಯ ಪ್ರದೇಶದಲ್ಲೂ ಮೆಟ್ರೊ ನಿಲ್ದಾಣದ ಆವರಣ ಖಾಲಿಯಾಗಿಯೇ ಉಳಿದುಕೊಂಡಿವೆ. ಮಳಿಗೆ ನಿರ್ಮಾಣದ ತಯಾರಿ ವರ್ಷಗಳಿಂದ ಹಾಗೇ ಉಳಿದುಕೊಂಡಿದೆ. ಯಶವಂತಪುರ, ಮೈಸೂರು ರಸ್ತೆ, ಬನಶಂಕರಿ ನಿಲ್ದಾಣಗಳಲ್ಲಿ ಸಾಕಷ್ಟು ಜಾಗ ಇದೆ. ವಾಹನ ನಿಲುಗಡೆ ತಾಣ, ಬಹುಮಹಡಿ ಕಟ್ಟಡ, ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದರೆ ನಿಗಮಕ್ಕೆ ವರಮಾನ ಹೆಚ್ಚಾಗಲಿದೆ. ಈ ಆಸ್ತಿ ಸದ್ಬಳಕೆ ಮಾಡಿಕೊಂಡರೆ ನಿಗಮದ ಸಾಲ ತೀರಿಸಲು ಅನುಕೂಲ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT