ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ | ಬೆಂಗಳೂರಿನಲ್ಲಿ ಒಂದೇ ದಿನ 1,172 ಪ್ರಕರಣಗಳು, 24 ಮಂದಿ ಸಾವು

ಸೋಂಕಿತರ ಸಂಖ್ಯೆ 8,345ಕ್ಕೆ ಏರಿಕೆ * ಕೋವಿಡ್‌ಗೆ 24 ಸಾವು
Last Updated 4 ಜುಲೈ 2020, 21:27 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ಒಂದೇ ದಿನ 1,172 ಪ್ರಕರಣಗಳು ವರದಿಯಾಗಿದೆ. ಈವರೆಗೆ ಒಂದು ದಿನ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿದ್ದು, ಕೋವಿಡ್ ಪೀಡಿತರ ಸಂಖ್ಯೆ 8,345ಕ್ಕೆ ತಲುಪಿದೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದವರಲ್ಲಿ ಮತ್ತೆ 24 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ನಗರದಲ್ಲಿ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 129ಕ್ಕೆ ಏರಿಕೆಯಾಗಿದೆ. 48 ಗಂಟೆಗಳಲ್ಲಿ 2,166 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ ಒಟ್ಟು 31 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.

ಕೆಲವರು ಆಸ್ಪತ್ರೆಗೆ ತೆರಳುವಾಗ ನಡು ರಸ್ತೆಯಲ್ಲಿಯೇ ಕೊನೆಯುಸಿರೆಳೆದಿದ್ದು, ಅವರಿಗೂ ಸೋಂಕು ತಗುಲಿರುವುದು ಮರಣೋತ್ತರ ಕೋವಿಡ್ ಪರೀಕ್ಷೆಯಿಂದ ದೃಢಪ‍ಟ್ಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ 124 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ ಒಂದೇ ದಿನ 195 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ 965ಕ್ಕೆ ತಲುಪಿದೆ. ಸದ್ಯ ನಗರದ ವಿವಿಧ ಆಸ್ಪತ್ರೆಗಳಲ್ಲಿ 7,250 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲಿಯೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಕೆಲ ರೋಗಿಗಳು ಆಸ್ಪತ್ರೆಯ ಆವರಣದಲ್ಲಿಯೇ ಗಂಟೆಗಟ್ಟಲೆ ಕಾದ ಘಟನೆ ನಗರದ ವಿವಿಧೆಡೆ ಶನಿವಾರವೂ ನಡೆದಿದೆ. ಕೆಲವರು ಚಿಕಿತ್ಸೆ ಸಲುವಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ.

ಜಲಮಂಡಳಿಯ ಬ್ಯಾಟರಾಯನಪುರ ವ್ಯಾಪ‍್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಜನಾ ವಿಭಾಗದ ಸಹಾಯಕ ಎಂಜಿನಿಯರ್ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಮಾಗಡಿ ರಸ್ತೆಯ ಸೇವಾ ಠಾಣೆಯಲ್ಲಿ ಒಳಚರಂಡಿ ನಿರ್ಮಲೀಕರಣದ ಕೆಲಸ ಮಾಡುತ್ತಿರುವ 7 ನೌಕರರು ಕೋವಿಡ್ ಪೀಡಿತರಾಗಿದ್ದಾರೆ. ಇದರಲ್ಲಿ ಒಬ್ಬರು ಕಾಯಂ ಹಾಗೂ ಆರು ಮಂದಿ ಗುತ್ತಿಗೆ ನೌಕರರಾಗಿದ್ದಾರೆ.

ಸಕಾಲಕ್ಕೆ ಚಿಕಿತ್ಸೆ ಸಿಗದೆ ಇಬ್ಬರು ಸಾವು
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ಶನಿವಾರ ಇಬ್ಬರು ಮೃತಪಟ್ಟಿದ್ದಾರೆ. ಜೊತೆಗೆ, ಸೋಂಕಿತರು ಮತ್ತು ಸೋಂಕಿತರಲ್ಲದವರು ಚಿಕಿತ್ಸೆ ಸಿಗದೆ ಆಸ್ಪತ್ರೆಗಳಿಗೆ ಅಲೆದಾಡುವ ಪ್ರಕರಣಗಳೂ ದಿನೇ ದಿನೇ ಹೆಚ್ಚಾಗುತ್ತಲೇ ಇವೆ.

ಮಂಜುನಾಥ್ ಎಂಬುವವರು ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಹಲವು ಆಸ್ಪತ್ರೆಗಳ ಕದ ತಟ್ಟಿದ್ದರು. ಆದರೆ, ಹಾಸಿಗೆ ಖಾಲಿ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆಗೆ ಎಲ್ಲೂ ಅವಕಾಶ ಸಿಕ್ಕಿರಲಿಲ್ಲ.

ಶನಿವಾರ ಅವರ ಆರೋಗ್ಯ ತೀರಾ ಹದಗೆಟ್ಟಾಗ ಅವರ ಪತ್ನಿ ವೈದ್ಯರನ್ನು ಕಾಡಿ ಬೇಡಿ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದರು. ಪರಿಸ್ಥಿತಿ ಕೈಮೀರಿ ಹೋಗಿದ್ದರಿಂದ ಅವರು ಆಸ್ಪತ್ರೆಗೆ ದಾಖಲಾದ 15 ನಿಮಿಷದಲ್ಲೇ ಕೊನೆಯುಸಿರೆಳೆದರು.

ಮೃತ ವ್ಯಕ್ತಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ಮೃತ ದೇಹವನ್ನು ಕುಟುಂಬದವರಿಗೆ ಒಪ್ಪಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಬಂದಿದ್ದ ಮಂಜುನಾಥ್ ಅವರ ಪತ್ನಿ ಒಬ್ಬಂಟಿಯಾಗಿ ಆಸ್ಪತ್ರೆ ಬಳಿಯೇ ಕುಳಿತಿದ್ದರು. ‘ಸಂಬಂಧಿಕರು ದೂರವಾಣಿ ಮೂಲಕವೇ ಸಾಂತ್ವನ ಹೇಳುತ್ತಿದ್ದರೆ. ಮುಂದೇನು ಮಾಡಬೇಕು ಎಂಬುದೇ ತೋಚುತ್ತಿಲ್ಲ’ ಎಂದು ಅವರು ಕಣ್ಣೀರಿಟ್ಟರು.

ಸರ್ಕಾರಿ ಕಚೇರಿಗಳು ಸೀಲ್ ಡೌನ್
ಕೋವಿಡ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನ,ಆನಂದರಾವ್ ವೃತ್ತದಲ್ಲಿರುವ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಪ್ರಧಾನ ಎಂಜಿನಿಯರ್ ಅವರ ಕಚೇರಿ ಹಾಗೂ ಕಾವೇರಿ ನೀರಾವರಿ ನಿಗಮದ ಕಾರ್ಪೋರೇಟ್ ಕಚೇರಿಯನ್ನು ಜುಲೈ 7ರವರೆಗೆ ಸೀಲ್ ಡೌನ್ ಮಾಡಲಾಗಿದೆ.

ಕನ್ನಡ ಭವನದಲ್ಲಿರುವ ಜಾನಪದ ಅಕಾಡೆಮಿಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಸೇರಿ ಐದು ಮಂದಿ ಸೋಂಕಿತರಾಗಿದ್ದಾರೆ.

ಜಯದೇವ ಒಪಿಡಿ: ನಾಳೆ ಪುನರಾರಂಭ
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ಹಾಗೂ ಸಿಬ್ಬಂದಿಯಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಸಂಸ್ಥೆಯ ಹೊರರೋಗಿ ವಿಭಾಗ (ಒಪಿಡಿ) ಸೋಮವಾರದಿಂದ (ಜು.6) ಪುನರಾರಂಭವಾಗಲಿದೆ.

ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ವೈದ್ಯರು, ಶುಶ್ರೂಷಕರು, ಆರೋಗ್ಯ ಸಿಬ್ಬಂದಿ ಸೇರಿದಂತೆ 20ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ತಾತ್ಕಾಲಿಕವಾಗಿ ಒಪಿಡಿ ಸ್ಥಗಿತಗೊಳಿಸಲಾಗಿತ್ತು.

ಆರ್ಚ್ ‌ಬಿಷಪ್‌ಗೆ ಸೋಂಕು
ಬೆಂಗಳೂರಿನ ಆರ್ಚ್ ‌ಬಿಷಪ್ ಬರ್ನಾರ್ಡ್‌ ಮೊರಾಸ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರು ಸೇಂಟ್ ಜಾನ್ಸ್‌ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು. ಈ ವೇಳೆ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು.

12 ಆಸ್ಪತ್ರೆ ಸುತ್ತಿದ ಮಹಿಳೆ
ಮೂರು ದಿನಗಳಿಂದ 12 ಆಸ್ಪತ್ರೆಗಳನ್ನು ಸುತ್ತಿದರೂ ಚಿಕಿತ್ಸೆ ಸಿಗದೇ 50 ವರ್ಷದ ಮಹಿಳೆ ಶನಿವಾರ ಮೃತಪಟ್ಟರು.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಸಂತಾ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪತಿ ಬಾಬು ಅವರು ಸೇಂಟ್ ಮಾರ್ಥಾಸ್, ವಿಕ್ಟೋರಿಯಾ, ಆಶೀರ್ವಾದ ಆಸ್ಪತ್ರೆ, ಕಿಮ್ಸ್, ಮಣಿಪಾಲ್ ಸೇರಿ 12 ಆಸ್ಪತ್ರೆಗಳನ್ನು ಸುತ್ತಿದ್ದರು.

ಹಾಸಿಗೆ ಖಾಲಿ ಇಲ್ಲದ ಕಾರಣ ಈ ಆಸ್ಪತ್ರೆಗಳ ಸಿಬ್ಬಂದಿ ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಶನಿವಾರ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಅವರು ಮೃತಪಟ್ಟರು.

ಚಿಕಿತ್ಸೆಗಾಗಿ ಅಂಗಲಾಚಿದ ಪತಿ
ವೈಟ್‌ಫೀಲ್ಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇರುವ ಮಾಹಿತಿ ತಿಳಿದು ವ್ಯಕ್ತಿಯೊಬ್ಬರು ಕೊರೊನಾ ಸೋಂಕಿತರಾಗಿದ್ದ ತಮ್ಮ ಪತ್ನಿಯನ್ನು ಬನಶಂಕರಿಯಿಂದ ಕರೆತಂದಿದ್ದರು. ಆದರೆ ಅಷ್ಟರಲ್ಲಿ ತುರ್ತು ಅಗತ್ಯದ ಕಾರಣಕ್ಕೆ ಬೇರೆ ರೋಗಿಗೆ ಆ ಹಾಸಿಗೆ ನೀಡಲಾಗಿತ್ತು.

‘ನನ್ನ ಪತ್ನಿಗೂ ಜ್ವರ ಮತ್ತು ಉಸಿರಾಟದ ತೊಂದರೆ ಜಾಸ್ತಿ ಇದೆ. ಆಸ್ಪತ್ರೆಗೆ ದಾಖಲಿಸಿಕೊಳ್ಳಿ’ ಎಂದು ಪತಿ ಅಂಗಲಾಚಿದರು.

ಆಸ್ಪತ್ರೆಗೆ ದಾಖಲಿಸಲು ವಿಳಂಬ
ಕೊರೊನಾ ಸೋಂಕು ದೃಢಪಟ್ಟ ಕೆಂಗೇರಿಯ ನಿವಾಸಿಯೊಬ್ಬರು ಒಂದು ದಿನ ಕಳೆದರೂ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದರು.

‘ಸೋಂಕು ಇರುವುದನ್ನು ಖಚಿತಪಡಿಸಿದ ಬಿಬಿಎಂಪಿ ಸಿಬ್ಬಂದಿ, ಇನ್ನೂ ಕರೆದೊಯ್ಯಲು ಆಂಬುಲೆನ್ಸ್‌ ಕಳುಹಿಸಿಲ್ಲ. ಕೆಮ್ಮು ಮತ್ತು ಉಸಿರಾಟದ ತೊಂದರೆ ಹೆಚ್ಚಾಗುತ್ತಿದೆ’ ಎಂದು ಅವರು ದೂರವಾಣಿ ಮೂಲಕ ಮಾಧ್ಯಮಗಳ ಬಳಿ ಅಳಲು ತೋಡಿಕೊಂಡರು. ಮಧ್ಯಾಹ್ನದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಟಿಎಂ ಲೇಔಟ್‌ನ 62 ವರ್ಷದ ವ್ಯಕ್ತಿಯೊಬ್ಬರಿಗ 10 ದಿನಗಳ ಹಿಂದೆ ಜ್ವರ ಬಂದಿತ್ತು. ಅವರಿಗೆ ಶುಕ್ರವಾರ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಲು ಅವರು ಅನೇಕ ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಬಳಿಕ ರಾಜೀವ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರು. ಅವರ ಗಂಟಲ ದ್ರವದ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ.

ಮನೆಯಲ್ಲೇ ಇದ್ದ ಮೃತದೇಹ
ಕಲಾಸಿಪಾಳ್ಯದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಶುಕ್ರವಾರ ಮೃತಪಟ್ಟಿದ್ದು, ಅವರ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಲು ಒಂದು ದಿನ ಕಳೆದರೂ ಬಿಬಿಎಂಪಿಯ ಶ್ರದ್ಧಾಂಜಲಿ ವಾಹನ ಬಂದಿರಲಿಲ್ಲ.

ಅವರ ಮನೆಯ ಬಳಿ ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಲಾಗಿತ್ತು. ಆದರೆ ಮೃತದೇಹವು ಮನೆಯಲ್ಲೇ ಇದ್ದ ಕಾರಣ ಅಕ್ಕ–ಪಕ್ಕದ ನಿವಾಸಿಗಳು ಆತಂಕಪಟ್ಟಿದ್ದರು. ಮಧ್ಯಾಹ್ನದ ನಂತರ ಮೃತದೇಹವನ್ನು ಅಂತ್ಯಕ್ರಿಯೆಗೆ ಬಿಬಿಎಂಪಿ ಸಿಬ್ಬಂದಿ ಕೊಂಡೊಯ್ದರು.

ಕಚೇರಿ ಬಂದ್
ಕರ್ನಾಟಕ ಗೃಹ ಮಂಡಳಿಯ ಕಚೇರಿ, ಕಂದಾಯ ಭವನದ ಸುತ್ತಮುತ್ತಲಿನ ಕಚೇರಿಗಳಲ್ಲಿಯೂ ಕೋವಿಡ್ ಪ್ರಕರಣ ವರದಿಯಾಗಿದೆ. ಆದ್ದರಿಂದಕರ್ನಾಟಕ ರಾಜ್ಯ ಮಹಿಳಾ ಆಯೋಗವು ತನ್ನ ಕಚೇರಿಯನ್ನು ಜುಲೈ 6ರಿಂದ 10ರವರೆಗೆ ಬಂದ್ ಮಾಡಲು ನಿರ್ಧರಿಸಿದೆ. ‘ದೂರುಗಳನ್ನು ವಾಟ್ಸ್‌ ಆ್ಯಪ್ ಸಂಖ್ಯೆ 9481004361ಕ್ಕೆ ಅಥವಾ ಇ ಮೇಲ್ ವಿಳಾಸ kscwbang123@gmail.comಗೆ ಕಳುಹಿಸಬಹುದು’ ಎಂದು ಆಯೋಗವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT