ಟೋಲ್ ಕಟ್ಟಬೇಡಿ: ಜನರಿಗೆ ಎಚ್‌ಡಿಕೆ ಸಲಹೆ

ಬೆಂಗಳೂರು: ಪ್ರಧಾನಿ ಮೋದಿ ಈಚೆಗೆ ಲೋಕಾರ್ಪಣೆ ಮಾಡಿದ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ ಮತ್ತು ಸರ್ವೀಸ್ ರಸ್ತೆ ನಿರ್ಮಾಣ ಸೇರಿದಂತೆ ಎಲ್ಲಾ ಬಾಕಿ ಕಾಮಗಾರಿ ಮುಗಿಯುವ ತನಕ ಟೋಲ್ ಸಂಗ್ರಹ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.
ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕು, ಸರ್ವೀಸ್ ರಸ್ತೆ ನಿರ್ಮಾಣ ಸೇರಿ ಬಾಕಿ ಬಿದ್ದಿರುವ ಎಲ್ಲಾ ಕಾಮಗಾರಿಗಳನ್ನು ಕೂಡಲೇ ಮುಗಿಸಬೇಕು. ಅದುವರೆಗೂ ಟೋಲ್ ಸಂಗ್ರಹ ಮಾಡಬಾರದು. ಜನರೂ ಟೋಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಅವರು ಜನರಿಗೆ ತಿಳಿಸಿದ್ದಾರೆ.
ಇವರು ಮಾಡಿದ ಪಾಪಕ್ಕೆ ಜನರು ನೋಯುವಂತಾಗಿದೆ. ಅವೈಜ್ಞಾನಿಕ ಎಕ್ಸ್‌ಪ್ರೆಸ್ ವೇ ಜನರ ಪಾಲಿಗೆ ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಇದು ಹೆದ್ದಾರಿಯೋ ಅಥವಾ ಹೆಮ್ಮಾರಿಯೋ ಎಂದು ‘ಎಕ್ಸ್‌ಪ್ರೆಸ್ ಹೆಮ್ಮಾರಿ’ ಎಂಬ ಹ್ಯಾಷ್‌ಟ್ಯಾಗ್ ಅಡಿ ಟ್ವೀಟ್ ಮಾಡಿದ್ದಾರೆ.
ಸಣ್ಣ ಮಳೆಗೂ ಅಂಡರ್ ಪಾಸ್ ಜಲಾವೃತವಾಗಿದ್ದು, ಹೆದ್ದಾರಿ ತತ್ತರಿಸಿ ಹೋಗಿದೆ. ವಾಹನಗಳು ನೀರಿನಲ್ಲಿ ಮುಳುಗಿವೆ. ಸರಣಿ ಅಪಘಾತಗಳಾಗಿ ಸವಾರರು ಹೈರಾಣಾಗಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದಲೇ ಈ ಅವಾಂತರ ಸೃಷ್ಟಿ ಆಗಿದೆ. ಇದಕ್ಕೆ ರಾಜ್ಯ, ಕೇಂದ್ರ ಸರ್ಕಾರ, ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರೇ ನೇರ ಹೊಣೆ ಎಂದು ಅವರು ಹೇಳಿದ್ದಾರೆ.
ಅಂಡರ್‌ಪಾಸ್‌ನಲ್ಲಿ ಮಳೆ ನೀರಿನಿಂದ ತೊಂದರೆ ಅನುಭವಿಸಿದ ಬಹುತೇಕ ಪ್ರಯಾಣಿಕರದ್ದೂ ಇದೇ ಅಭಿಪ್ರಾಯವಾಗಿತ್ತು. ‘ಬೇಸಿಗೆಯಲ್ಲಿಯೇ ಈ ಗತಿಯಾದರೆ ಇನ್ನೂ ಮಳೆಗಾಲದಲ್ಲಿ ಗತಿ ಏನು’ ಎಂದು ಸಾರ್ವಜನಿಕರು ಪ್ರಶ್ನಿಸಿದರು. ಇನ್ನಾದರೂ ತುರ್ತು ಕಾಮಗಾರಿ ಕೈಗೊಂಡು ಮಳೆಗಾಲ ಆರಂಭಕ್ಕೂ ಮುನ್ನವೇ ಎಲ್ಲ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.