ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Mysuru Dasara 2023 | ದಸರಾ ಸ್ತಬ್ದಚಿತ್ರಕ್ಕೆ 'ಶಿವಗಂಗೆ' ಆಯ್ಕೆ

Published 18 ಅಕ್ಟೋಬರ್ 2023, 14:14 IST
Last Updated 18 ಅಕ್ಟೋಬರ್ 2023, 14:14 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಮೈಸೂರಿನಲ್ಲಿ ಅ. 24 ರಂದು ನಡೆಯುವ ದಸರಾ ಜಂಬೂ ಸವಾರಿ ಉತ್ಸವಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಶಿವಗಂಗೆ ಕ್ಷೇತ್ರದ ಇತಿಹಾಸ ಸಾರುವಂತಹ ಸ್ತಬ್ಧಚಿತ್ರ ಆಯ್ಕೆಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ ಈ ಸ್ತಬ್ದಚಿತ್ರವನ್ನು ನಿರ್ಮಿಸಲಾಗುತ್ತಿದೆ.

ಸ್ತಬ್ಧಚಿತ್ರದಲ್ಲಿ ಮೊದಲಿಗೆ ಅಸೀನವಾಗಿರುವ ನಂದಿ, ಅದರ ಹಿಂದೆ ಶಿವ ಪಾರ್ವತಿಯ ಮೂರ್ತಿಗಳಿವೆ. ನಂತರ ಹೊನ್ನಮ್ಮದೇವಿ, ಗಂಗಾಧರೇಶ್ವರ ಸ್ವಾಮಿ ದೇಗುಲ, ಬೆಟ್ಟದ ನಡುವಿರುವ ಗೋಪುರಗಳು, ಬೆಟ್ಟದ ತುದಿಯಲ್ಲಿರುವ ಬಸವಣ್ಣನ ವಿಗ್ರಹ, ಕುದುರೆ ಮೆಲೆ ಹೊರಟಿರುವ ನಾಡಪ್ರಭು ಕೆಂಪೇಗೌಡರ ಚಿತ್ರ, ಸುತ್ತಮುತ್ತಲ ಬೆಟ್ಟದ ವಿಹಂಗಮ ನೋಟ, ಕೊನೆಯಲ್ಲಿ ನಂದಿ ಆಸೀನವಾಗಿರುವ ಪ್ರವೇಶದ್ವಾರದ ಚಿತ್ರವಿದೆ.

ದಸರಾ ಉತ್ಸವ ಸಮಿತಿ ಸ್ತಬ್ಧಚಿತ್ರಕ್ಕಾಗಿ ಎರಡು ತಿಂಗಳ ಹಿಂದೆ ಸಲಹೆ ಸೂಚನೆ ಆಹ್ವಾನಿಸಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ ಎಂಟಕ್ಕೂ ಹೆಚ್ಚು ತಾಣಗಳ ಬಗ್ಗೆ ಸಲಹೆಗಳು ಬಂದಿದ್ದವು. ನೆಲಮಂಗಲದ ಶಿವಗಂಗೆ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ, ಹುಲುಕುಡಿ ಬೆಟ್ಟ, ದೇವನಹಳ್ಳಿಯ ಕೊಯಿರಾ, ಮಾಕಳಿ ದುರ್ಗ, ದೇವನಹಳ್ಳಿ ಕೋಟೆ ಪ್ರಮುಖವಾಗಿದ್ದವು. ಇದರಲ್ಲಿ ಶಿವಗಂಗೆಗೆ ಈ ವರ್ಷ ಅದೃಷ್ಟ ಲಭಿಸಿದೆ.

ಹಿಂದೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಶಿವಗಂಗೆ ಕ್ಷೇತ್ರ ಸ್ತಬ್ಧಚಿತ್ರಕ್ಕಾಗಿ ಆಯ್ಕೆಯಾಗಿತ್ತು. ಇದೀಗ ನಮ್ಮ ನಾಡಹಬ್ಬ ದಸರಾ ಉತ್ಸವಕ್ಕೆ ಶಿವಗಂಗೆ ಕ್ಷೇತ್ರ ಆಯ್ಕೆಯಾಗಿರುವುದು ಹೆಮ್ಮೆ ಎನಿಸುತ್ತದೆ ಎಂದು ಶಿವಗಂಗೆ ದೇವಾಲಯದ ಪ್ರಧಾನ ಅರ್ಚಕ ರಾಜು ದೀಕ್ಷಿತ್ ಸಂತಸ ವ್ಯಕ್ತಪಡಿಸಿದ್ದಾರೆ.

'ಮೈಸೂರಿನಲ್ಲಿ ಸ್ತಬ್ಧಚಿತ್ರ ತಯಾರಿ ನಡೆದಿದೆ. ಶಿವಗಂಗೆ ಪರಿಚಯ ಪ್ರಾಕೃತಿಕ ಸೌಂದರ್ಯ ಭೌಗೋಳಿಕ ರೂಪದ ಜೊತೆಗೆ ಗತಕಾಲದ ಇತಿಹಾಸ ಅನಾವರಣಗೊಳಿಸುವ ಅವಕಾಶ ಲಭಿಸಿದೆ.

- ಮಹಮದ್ ರಫೀಕ್ ಉಪನಿರ್ದೇಶಕ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ

ನಾಡಹಬ್ಬದ ಉತ್ಸವದಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಶಿವಗಂಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಕ್ಷೇತ್ರದಲ್ಲಿರುವ ಬೇರೆ ಬೇರೆ ಇತಿಹಾಸ ಪ್ರಸಿದ್ಧ ತಾಣಗಳು ಮುಂದಿನ ದಿನಗಳಲ್ಲಿ ಪ್ರವರ್ಧ ಮಾನಕ್ಕೆ ಬರಲಿ.

-ಎನ್.ಶ್ರೀನಿವಾಸ್ ಶಾಸಕ ನೆಲಮಂಗಲ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT