ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

169 ದಿನಗಳ ನಂತರ ಮೆಟ್ರೊ ಸಂಚಾರ ಆರಂಭ

ನೇರಳೆ ಮಾರ್ಗದಲ್ಲಿ ಹಳಿಗಿಳಿದ ರೈಲುಗಳು l ರಿಚಾರ್ಜ್‌ಗೆ ಅವಕಾಶ
Last Updated 7 ಸೆಪ್ಟೆಂಬರ್ 2020, 19:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 169 ದಿನಗಳ ಬಿಡುವಿನ ನಂತರ ‘ನಮ್ಮ ಮೆಟ್ರೊ’ ರೈಲು ಸಂಚಾರ ಸೋಮವಾರದಿಂದ ಪುನರಾರಂಭವಾಯಿತು.

ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ ನಿಲ್ದಾಣದಿಂದ ಬೆಳಿಗ್ಗೆ 8 ಗಂಟೆಗೆ ಸಂಚಾರ ಆರಂಭಿಸಿದ ರೈಲಿನಲ್ಲಿ 10 ರಿಂದ 12 ಪ್ರಯಾಣಿಕರಷ್ಟೇ ಇದ್ದರು. ಹಸಿರು ಮಾರ್ಗದಲ್ಲಿ ಸೆ.9ರಿಂದ ರೈಲು ಸಂಚಾರ ಆರಂಭವಾಗಲಿದೆ.

ಕೋವಿಡ್‌ ಮಾರ್ಗಸೂಚಿಗಳ ಅಡಿ ಕೆಲವು ನಿರ್ಬಂಧಗಳು ಇದ್ದುದರಿಂದ ಮತ್ತು ದಟ್ಟಣೆಯ ಅವಧಿಯಲ್ಲಿ ಅಂದರೆ, ಬೆಳಿಗ್ಗೆ 8ರಿಂದ 11ರವರೆಗೆ, ಸಂಜೆ 4.30ರಿಂದ 7.30ರವರೆಗೆ ರೈಲುಗಳ ಸಂಚಾರ ಇತ್ತು. ಒಟ್ಟು ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಶಾಲಾ–ಕಾಲೇಜುಗಳ ಇನ್ನೂ ಪ್ರಾರಂಭವಾಗದಿರುವುದರಿಂದ ಮತ್ತು ಹಲವು ಕಂಪನಿಗಳ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯೇ ಇತ್ತು. ಒಟ್ಟು 91 ಬಾರಿ ಈ ಮಾರ್ಗದಲ್ಲಿ ರೈಲುಗಳು ಸಂಚರಿಸಿದವು.

ನಿಲ್ದಾಣದಲ್ಲಿಯೇ ರಿಚಾರ್ಜ್‌ಗೆ ಅವಕಾಶ: ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ನಿಲ್ದಾಣಗಳಲ್ಲಿ ಟೋಕನ್ ವಿತರಿಸಲಾಗುವುದಿಲ್ಲ ಎಂದು ನಿಗಮ ಮೊದಲೇ ಹೇಳಿತ್ತು. ಸ್ಮಾರ್ಟ್‌ಕಾರ್ಡ್‌ ಬಳಕೆದಾರರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ನಿಲ್ದಾಣದಲ್ಲಿ ಹೊಸ ಕಾರ್ಡ್‌ ಖರೀದಿಸುವವರಿಗೆ ಮಾತ್ರ ರಿಚಾರ್ಜ್‌ ಮಾಡುವ ಅವಕಾಶವಿತ್ತು. ಮೊದಲೇ ಸ್ಮಾರ್ಟ್‌ ಕಾರ್ಡ್‌ ಹೊಂದಿದ್ದವರು, ಪ್ರಯಾಣಕ್ಕೂ ಒಂದು ಗಂಟೆ ಮುಂಚೆ ನಿಗಮದ ವೆಬ್‌ಸೈಟ್‌ (webtopup.bmrc.co.in) ಅಥವಾ ನಮ್ಮ ಮೆಟ್ರೊ ಆ್ಯಪ್‌ ಮೂಲಕ ರಿಚಾರ್ಜ್‌ ಮಾಡಿಕೊಳ್ಳಬೇಕಾಗಿತ್ತು.

ಮೊದಲೇ ಸ್ಮಾರ್ಟ್‌ಕಾರ್ಡ್‌ ಹೊಂದಿದ್ದ ಪ್ರಯಾಣಿಕರು, ನಿಲ್ದಾಣದಲ್ಲಿ ರಿಚಾರ್ಜ್‌ಗೆ ಅವಕಾಶ ಇಲ್ಲವೆಂದಾಗ ತೊಂದರೆಗೆ ಈಡಾದರು. ಕೆಲವರು ಅಸ
ಮಾಧಾನ ವ್ಯಕ್ತಪಡಿಸಿದರು. ಕೊನೆಗೆ, ನಿಗಮ ಮೆಟ್ರೊ ನಿಲ್ದಾಣದಲ್ಲಿಯೇ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಲು ಪ್ರಾರಂಭಿಸಿದರು. ಆದರೆ, ನಗದು ಬದಲು ‘ಡಿಜಿಟಲ್‌ ಪಾವತಿ’ ಮೂಲಕ (ಯುಪಿಐ–ಪಿಒಎಸ್‌ ಅಥವಾ ಪೇಟಿಎಂ) ಹಣ ಪಾವತಿಸಿ ರಿಚಾರ್ಜ್‌ ಮಾಡಿಕೊಳ್ಳಬೇಕು. ಅಲ್ಲದೆ, ರಿಚಾರ್ಜ್‌ ಮಾಡಿಸಿ, ಏಳು ದಿನದೊಳಗೆ ಅದನ್ನು ಮೊದಲು ಬಳಸಬೇಕು.

ಸುರಕ್ಷತೆಗೆ ಒತ್ತು: ಕೋವಿಡ್‌ ಮಾರ್ಗಸೂಚಿಗಳ ಪಾಲನೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷಿಸಿದ ನಂತರ ನಿಲ್ದಾಣದೊಳಗೆ ಪ್ರವೇಶ ಮಾಡಬೇಕಾಗಿತ್ತು. ಮಾಸ್ಕ್‌ ಧರಿಸುವುದು ಕಡ್ಡಾಯ ಮಾಡಲಾಗಿತ್ತು. ನಿಲ್ದಾಣದೊಳಗೆ ಮತ್ತು ರೈಲಿ ನೊಳಗೆ ಅಂತರ ಕಾಯ್ದುಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT