ಬೆಂಗಳೂರು: ‘ಟಿ.ವಿ. ಮೊಬೈಲ್ ಹಾಗೂ ಇಂಟರ್‌ನೆಟ್ ಇಲ್ಲದ ಕಾಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾಡಿದ ಸಾಧನೆ ಅಪಾರವಾದುದು’ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಬಿಲ್ಲವ ಅಸೋಸಿಯೇಷನ್ ಭಾನುವಾರ ಆಯೋಜಿಸಿದ್ದ ‘ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಆಚರಣೆ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಇಂದಿನ ಯುವ ಪೀಳಿಗೆಗೆ ನಾರಾಯಣ ಗುರುಗಳ ಮಾರ್ಗದರ್ಶನ ಅತ್ಯಗತ್ಯ. ಅವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿ ಆಗಬೇಕು’ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಂ. ವೇದಕುಮಾರ್ ಮಾತನಾಡಿ, ‘ಸಮುದಾಯದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನದ ಜೊತೆಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ದಿಶಿತಾ ಆರ್. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಪ್ರಮೀತ್ ಪಿ. ಮತ್ತು ರಚನಾ ಅವರನ್ನು ಸನ್ಮಾನಿಸಲಾಯಿತು.
ಸಂಘದ ಗೌರವ ಅಧ್ಯಕ್ಷ ಗೋಪಾಲಕೃಷ್ಣ ಎನ್., ಉಪಾಧ್ಯಕ್ಷರಾದ ಕೇಶವ ಪೂಜಾರಿ, ಜಯಂತಿ ವಿಜಯಕೃಷ್ಣ, ಕೋಶಾಧಿಕಾರಿ ಜಯಾನಂದ ಪೂಜಾರಿ, ಕಾರ್ಯದರ್ಶಿ ಎಂ.ಕೆ. ದಾಮೋದರ್ ಸುವರ್ಣ, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಮಹಿಳಾ ಘಟಕದ ಗೌರವ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ ಭಾಗವಹಿಸಿದ್ದರು.