ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಬಿ ‘ಡ್ರಗ್ಸ್’ ಬೇಟೆ; 36 ಪ್ರಕರಣ, 49 ಮಂದಿ ಜೈಲುಪಾಲು

Last Updated 16 ಏಪ್ರಿಲ್ 2021, 20:49 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಚುರುಕಿನ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು, ಗುಪ್ತವಾಗಿ ನಡೆಯುತ್ತಿರುವ ಡ್ರಗ್ಸ್ ಜಾಲಗಳನ್ನು ಒಂದೊಂದಾಗಿ ಬಯಲಿಗೆ ಎಳೆಯುತ್ತಿದ್ದಾರೆ.

ಎರಡೂ ರಾಜ್ಯಗಳಲ್ಲಿ ನಡೆಯುವ ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ಮೇಲೆ ಎನ್‌ಸಿಬಿ ತಂಡ ನಿಗಾ ವಹಿಸಿದೆ. ಬೆಂಗಳೂರು ಹಾಗೂ ಹೈದರಾಬಾದ್ ವಲಯದ ಅಧಿಕಾರಿಗಳು, 2020ರ ಜನವರಿಯಿಂದ 2021ರ ಮಾರ್ಚ್‌ವರೆಗೆ 36 ಪ್ರಕರಣ ದಾಖಲಿಸಿಕೊಂಡು, 49 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅವರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ, ಜಾಲವನ್ನು ಬುಡ ಸಮೇತ ಕಿತ್ತು ಹಾಕಲು ತನಿಖೆ ಮುಂದುವರಿಸಿದ್ದಾರೆ.

ಕೆಲ ಸಿನಿ ತಾರೆಯರು, ಕೆಲ ಉದ್ಯಮಿಗಳು, ಕೆಲ ವ್ಯಾಪಾರಿಗಳು, ಕೆಲ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನೇ ಕಳೆದ ವರ್ಷ ಭೇದಿಸಿದ್ದರು. ಈ ಪ್ರಕರಣದಲ್ಲಿ ಯುವತಿ ಡಿ. ಅನಿಕಾ ಸೇರಿ ಹಲವರನ್ನು ಬಂಧಿಸಿದ್ದ ಎನ್‌ಸಿಬಿ, ಅವರನ್ನು ಜೈಲಿಗಟ್ಟಿದೆ.ಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಎಲ್ಲರ ಮೇಲೂ ದೋಷಾರೋಪ ಪಟ್ಟಿ ಸಹ ಸಲ್ಲಿಕೆಯಾಗಿದೆ.

ಉಡುಪಿ ಜಿಲ್ಲೆಯ ಮಣಿಪಾಲ್ ಸೇರಿದಂತೆ ಹಲವು ನಗರಗಳ ಕೆಲ ವಿದ್ಯಾರ್ಥಿಗಳಿಗೆ ಡ್ರಗ್ಸ್
ಮಾರುತ್ತಿದ್ದ ಅಂತರರಾಜ್ಯ ಜಾಲದ ಸದಸ್ಯರನ್ನೂ ಎನ್‌ಸಿಬಿ ಬಂಧಿಸಿತ್ತು. ಮಕ್ಕಳ ಬ್ಯಾಗ್, ಪಾತ್ರೆಗಳು, ಹೀಗೆ... ಹಲವು ವಸ್ತುಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ಡ್ರಗ್ಸ್ ಜಾಲವನ್ನೂ ಪತ್ತೆ ಮಾಡಿತ್ತು.

ವಿಶೇಷವೆಂದರೆ, ಬಂಧಿತರಲ್ಲಿ ಭಾರತೀಯರೇ ಹೆಚ್ಚಿದ್ದಾರೆ. ವಿದೇಶಿಗರ ಸಂಖ್ಯೆ ತೀರಾ ಕಡಿಮೆ ಇದೆ. ವಿದೇಶದಿಂದ ಡ್ರಗ್ಸ್ ತರಿಸುತ್ತಿರುವ ಸ್ಥಳೀಯರು, ಎರಡೂ ರಾಜ್ಯಗಳಲ್ಲಿ ತಮ್ಮದೇ ಜಾಲ ರೂಪಿಸಿಕೊಂಡು ಮಾರುತ್ತಿದ್ದಾರೆ.

‘ಹೊರ ರಾಜ್ಯಗಳಲ್ಲಿ ಬೆಳೆಯುವ ಗಾಂಜಾವನ್ನು ನಗರಕ್ಕೆ ಮಾರುವವರು ಹೆಚ್ಚಾಗುತ್ತಿದ್ದಾರೆ. ಕಾರು, ಗೂಡ್ಸ್ ವಾಹನಗಳಲ್ಲಿ ನಗರಕ್ಕೆ ಗಾಂಜಾ ಬರುತ್ತಿದೆ. ಉಪ ಪೆಡ್ಲರ್‌ಗಳಮೂಲಕ ಗಾಂಜಾ ಗ್ರಾಹಕರ ಕೈ ತಲುಪುತ್ತಿದೆ. ಜಪ್ತಿ ಮಾಡಲಾದ ಡ್ರಗ್ಸ್‌ಗಳ ಪೈಕಿ ಗಾಂಜಾ ಪ್ರಮಾಣವೂ ಹೆಚ್ಚಿದೆ’ ಎಂದು ಎನ್‌ಸಿಬಿ ಮೂಲಗಳು ಹೇಳಿವೆ.

ಡಾರ್ಕ್‌ನೆಟ್, ಕೋಡ್‌ ವ್ಯವಹಾರ: ಬಹುತೇಕ ಪ್ರಕರಣಗಳಲ್ಲಿ ಡ್ರಗ್ಸ್ ಖರೀದಿ ಮೂಲ ಪತ್ತೆಯಾಗಿಲ್ಲ. ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್ ಖರೀದಿ ಮಾಡುವ ಪೆಡ್ಲರ್‌ಗಳು, ಅದನ್ನು ಕೋರಿಯರ್ ಹಾಗೂ ಇತರೆ ಮಾರ್ಗಗಳಿಂದ ತರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.

ಕ್ರಿಕೆಟ್‌ ಸಾಮಗ್ರಿಗಳಲ್ಲಿ ₹ 20 ಲಕ್ಷ ಮೌಲ್ಯದ ಡ್ರಗ್ಸ್

ಕತಾರ್‌ ದೋಹಾದಿಂದ ನಗರಕ್ಕೆ ಪಾರ್ಸೆಲ್‌ ಕಳುಹಿಸಲಾಗಿದ್ದ ಡ್ರಗ್ಸ್ ಪತ್ತೆ ಮಾಡಿರುವ ಎನ್‌ಸಿಬಿ ಅಧಿಕಾರಿಗಳು, ಆ ಸಂಬಂಧ ಎಸ್‌. ನಶಾಂತ್ ಎಂಬಾತನನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ.

‘ಕೋರಿಯರ್ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಲಾಗಿದ್ದು, ₹ 20 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಶಾಂತ್‌ನನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಎನ್‌ಸಿಬಿ ಬೆಂಗಳೂರು ವಲಯ ನಿರ್ದೇಶಕ ಅಮಿತ್ ಘಾವಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋರಿಯರ್ ಮೂಲಕ ಪಾರ್ಸೆಲ್ ಬಂದಿರುವ ಮಾಹಿತಿ ಸಿಕ್ಕಿತ್ತು. ಏಪ್ರಿಲ್ 8ರಂದು ಕಾರ್ಯಾಚರರಣೆ ನಡೆಸಿದಾಗ, ಕ್ರಿಕೆಟ್‌ಗೆ ಬಳಸುವ ಕೈಗವಸ (ಗ್ಲೌಸ್) ಹಾಗೂ ಸೇಫ್‌ ಗಾರ್ಡ್‌ ಸಾಮಗ್ರಿಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಿಸುತ್ತಿದ್ದ ಸಂಗತಿ ತಿಳಿಯಿತು’

‘ದೋಹಾದ ಎ. ಕುಜಿಯಾಲ್ ಎಂಬಾತನ ಹೆಸರಿನಿಂದ, ಕೇರಳ ಕಾರಸಗೋಡಿನ ಎಸ್‌. ನಶಾಂತ್ ಹೆಸರಿಗೆ ಕೋರಿಯರ್ ಬಂದಿತ್ತು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT