ಶನಿವಾರ, ಸೆಪ್ಟೆಂಬರ್ 18, 2021
24 °C
ಅಕ್ರಮ ಹೆಚ್ಚಳಕ್ಕೆ ಕಾರಣವಾಗಲಿದೆ ಹೊಸ ಜಾಹೀರಾತು ನಿಯಮ: ಕಳವಳ

ಸ್ವಾಧೀನಾನುಭವ ಪ್ರಮಾಣಪತ್ರ ಇಲ್ಲದ ಕಟ್ಟಡದಲ್ಲೂ ಹೋರ್ಡಿಂಗ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಿಸುವ ಕಟ್ಟಡವನ್ನು ಬಳಸುವುದಕ್ಕೆ ಮುನ್ನ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದು ಕಡ್ಡಾಯ. ಅಚ್ಚರಿ ಎಂದರೆ, ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ‘ಬಿಬಿಎಂಪಿ ಜಾಹೀರಾತು ನಿಯಮಗಳು 2019’, ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯದ ಕಟ್ಟಡಗಳಲ್ಲೂ ಹೋರ್ಡಿಂಗ್‌ಗಳನ್ನು ಅಳವಡಿಸಲು ಅವಕಾಶ ಕಲ್ಪಿಸುತ್ತದೆ.

ಅಸ್ತಿತ್ವದಲ್ಲಿರುವ ಯಾವುದೇ ಕಟ್ಟಡದಲ್ಲಿ ಹೋರ್ಡಿಂಗ್‌ ಅಥವಾ ಜಾಹೀರಾತು ಅಳವಡಿಸುವುದಕ್ಕೆ ಆ ಕಟ್ಟಡದ ದೃಢತೆ ಪ್ರಮಾಣಪತ್ರ ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರವನ್ನು ಹಾಜರುಪಡಿಸುವುದು ನಿಯಮ 6 (2) (iv)ರ ಪ್ರಕಾರ ಕಡ್ಡಾಯ. ಒಂದು ವೇಳೆ ಕಟ್ಟಡವು ಸ್ವಾಧಿನಾನುಭವ ಪ್ರಮಾಣಪತ್ರ ಹೊಂದಿರದಿದ್ದಲ್ಲಿ ಹೆಚ್ಚುವರಿ ದಂಡ ವಿಧಿಸಿ ಜಾಹೀರಾತು ಅಳವಡಿಸುವುದಕ್ಕೂ ಇದೇ ನಿಯಮ ಅವಕಾಶ ಕಲ್ಪಿಸುತ್ತದೆ.

ಸ್ವಾಧೀನಾನುಭವ ಪ್ರಮಾಣಪತ್ರ ಇಲ್ಲದ ಕಟ್ಟಡದಲ್ಲಿ ಜಾಹೀರಾತು ಅಳವಡಿಸಬೇಕಾದರೆ ಶೆಡ್ಯೂಲ್‌ 1ರಲ್ಲಿ ನಿಗದಿಪಡಿಸಿದ ಮೊತ್ತಕ್ಕೆ ಶೇ 150ರಷ್ಟು ದಂಡವನ್ನು ಸೇರಿಸಿ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನುತ್ತದೆ ನಿಯಮ 6 (3) (ಬಿ). ಅಷ್ಟೇ ಅಲ್ಲ, ಅದರ ಜೊತೆಗೆ ಆ ಕಟ್ಟಡವು ಅನಧಿಕೃತವಾಗಿದ್ದರೆ ಅಥವಾ ಮಂಜೂರಾತಿ ಪಡೆದ ಯೋಜನಾ ನಕ್ಷೆ ಉಲ್ಲಂಘಿಸಿದ್ದರೆ ಸರ್ಕಾರವು ನಿಗದಿಪಡಿಸಿದಷ್ಟು ಮೊತ್ತದ ಇತರ ದಂಡವನ್ನೂ ಪಾವತಿಸಬೇಕಾಗುತ್ತದೆ ಎಂದು ಈ ನಿಯಮದಲ್ಲಿ ವಿವರಿಸಲಾಗಿದೆ. 

ಕಟ್ಟಡ ಉಲ್ಲಂಘನೆ ಎಷ್ಟು ಪ್ರಮಾಣದವರೆಗೆ ಇದ್ದರೆ ಅದರ ಮೇಲೆ ಜಾಹೀರಾತು ಅಥವಾ ಹೋರ್ಡಿಂಗ್‌ ಅಳವಡಿಕೆಗೆ ಅವಕಾಶ ಕಲ್ಪಿಸಬಹುದು ಎಂಬ ಬಗ್ಗೆ ನಿಯಮಗಳಲ್ಲಿ ಸ್ಪಷ್ಟತೆ ಇಲ್ಲ. 2003ರ ಬಿಬಿಎಂಪಿ ಕಟ್ಟಡ ಬೈಲಾ ನಿಯಮಗಳ ಪ್ರಕಾರ ನಗರದಲ್ಲಿ ಪ್ರಸ್ತುತ ನಕ್ಷೆಗೆ ಮಂಜೂರಾತಿ ಪಡೆದ ಬಳಿಕ ಅನಿವಾರ್ಯ ಕಾರಣಗಳಿಂದ ಶೇ 5ರಷ್ಟು ಉಲ್ಲಂಘನೆಗಳು ಆಗಿದ್ದರೆ, ಅಂತಹ ಕಟ್ಟಡಗಳಿಗೆ ದಂಡನಾ ಶುಲ್ಕ ವಿಧಿಸಿ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡಲು ಅವಕಾಶ ಇದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಲ್ಲಂಘನೆ ಆಗಿದ್ದರೆ ಆ ಕಟ್ಟಡಗಳಿಗೆ ಒ.ಸಿ ಲಭಿಸದು. ಅಂದರೆ ಅಂತಹ ಕಟ್ಟಡಗಳು ಅಕ್ರಮ ಕಟ್ಟಡಗಳೆಂದೇ ಲೆಕ್ಕ. ಕಟ್ಟಡ ನಿರ್ಮಾಣದ ವೇಳೆ ಶೇ 5ಕ್ಕಿಂತ ಹೆಚ್ಚು ಉಲ್ಲಂಘನೆ ಆಗಿದ್ದರೆ, ಅಂತಹ ಅಕ್ರಮ ಕಟ್ಟಡಗಳಿಗೆ ದಂಡ ವಿಧಿಸಿ ಜಾಹೀರಾತು ಅಳವಡಿಕೆಗೆ ಅವಕಾಶ ಕಲ್ಪಿಸುವುದು ಎಷ್ಟು ಸರಿ ಎಂಬುದು ಪ್ರಶ್ನೆ.

‘ಇಂತಹ ಗೊತ್ತು ಗುರಿ ಇಲ್ಲದ ನಿಯಮಗಳು ಅಕ್ರಮ ಕಟ್ಟಡಗಳನ್ನು ಉತ್ತೇಜಿಸಿದಂತೆ. ಶೇ 150ರಷ್ಟು ದಂಡನಾ ಶುಲ್ಕ ಪಾವತಿಸುವುದು ಜಾಹೀರಾತು ಏಜೆನ್ಸಿಗಳಿಗೆ ದೊಡ್ಡ ಹೊರೆ ಏನಲ್ಲ. ನಗರದ ಪ್ರಮುಖ ಸ್ಥಳಗಳಲ್ಲಿನ ಅಕ್ರಮ ಕಟ್ಟಡಗಳಲ್ಲೂ ಜಾಹೀರಾತು ಹಾಕಲು ಅವಕಾಶ ಕಲ್ಪಿಸುತ್ತಾ ಹೋದರೆ, ಬಿಬಿಎಂಪಿಯು ಭವಿಷ್ಯದಲ್ಲಿ ಇಕ್ಕಟ್ಟಿಗೆ ಸಿಲುಕಲಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಇಂತಹ ಜಾಹೀರಾತುಗಳಿಗೆ ಅನುಮತಿ ನಿರಾಕರಿಸಬಹುದು

* ವಾಹನ ಚಲಾವಣೆಗೆ ಅಡ್ಡಿ ಉಂಟುಮಾಡುವ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಭಂಗ ತರುವಂತಹವು

* ಅಧಿಕೃತ ಸಂಚಾರ ಸಂಕೇತಗಳು, ಸಿಗ್ನಲ್‌ಗಳನ್ನು ಹೋಲುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವಂತಹವು; ಸಂಚಾರ ಸಿಗ್ನಲ್‌ಗಳಲ್ಲಿ ಬಳಸುವ ಕೆಂಪು, ಹಳದಿ ಹಾಗೂ ಹಸಿರು ಬಣ್ಣವನ್ನು ಬಳಸುವಂತಹವು ಅಥವಾ ಸಂಚಾರ ಸಿಗ್ನಲ್‌ಗಳ ಆಕಾರವನ್ನು ಹೋಲುವಂತಹವು

* ನಿಲ್ಲಿಸಿ, ವೀಕ್ಷಿಸಿ, ಬಳಸುದಾರಿ, ಅಪಾಯ, ಎಚ್ಚರಿಕೆ.. ಮುಂತಾದ ‍ಪದಗಳನ್ನು ಹೊಂದಿರುವಂಥವು

ಹೋರ್ಡಿಂಗ್‌: ನಿಗದಿಪಡಿಸಿರುವ ಗಾತ್ರಗಳ ವಿವರ

ವಿಧ; ಗರಿಷ್ಠ ಉದ್ದ (ಮೀ); ಗರಿಷ್ಠ ಅಗಲ (ಮೀ); ಗರಿಷ್ಠ ಎತ್ತರ (ಮೀ); ನೆಲಮಟ್ಟದಿಂದ ಕನಿಷ್ಠ (ಮೀ)

30 ಮೀ.ಗಿಂತ ಕಡಿಮೆ ಅಗಲದ ಕಟ್ಟಡ/ ಗೋಡೆ; 12; 6; 18; ಅನ್ವಯಿಸದು

30 ಮೀ.ಗಿಂತ ಹೆಚ್ಚು ಅಗಲದ ಕಟ್ಟಡ/ ಗೋಡೆ; 18; 9; 18; ಅನ್ವಯಿಸದು

ತ್ರಿಕೋನಾಕಾರದ ಜಾಹೀರಾತು; 12; 6; 18; ಅನ್ವಯಿಸದು

ಕ್ಷಣ ಕ್ಷಣಕ್ಕೂ ವಿಷಯ ಬದಲಾಗುವ ಎಲ್ಇಡಿ/ಎಲ್‌ಸಿಡಿ ಪರದೆಯ ಜಾಹೀರಾತು; 12; 6; –; ನೆಲದ ಮೇಲೆ 2.5 (ಕಟ್ಟಡದ ಮೇಲಿನದ್ದಕ್ಕೆ ಅನ್ವಯಿಸದು)

ನೆಲದಲ್ಲಿ ನಿಲ್ಲಿಸುವ ಬಿಲ್ ಬೋರ್ಡ್‌; 18; 9; 25; 2.5

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು