ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಪುನಶ್ಚೇತನ: ‘ಮೇಲ್ವಿಚಾರಣಾ ಸಮಿತಿ ಗಮನಕ್ಕೆ ತನ್ನಿ’

ಎನ್‌ಜಿಟಿ ಸೂಚನೆ
Last Updated 3 ಜನವರಿ 2021, 20:32 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನಲ್ಲಿ ಅತಿಯಾದ ಮಾಲಿನ್ಯಕ್ಕೆ ತುತ್ತಾಗಿರುವ ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಪುನಶ್ಚೇತನ ಕಾರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ನೇತೃತ್ವದ ಮೇಲ್ವಿಚಾರಣಾ ಸಮಿತಿಯ ಗಮನಕ್ಕೆ ತರಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೂಚಿಸಿದೆ.

ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳಿಗೆ ತ್ಯಾಜ್ಯ ಹರಿಬಿಡುತ್ತಿರುವುದು ಹಾಗೂ ಕೆರೆಗಳ ಸಮೀಪವೇ ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಜಲಾನಯನ ಪ್ರದೇಶದ ಅತಿಕ್ರಮಣವನ್ನು ತಡೆಯಬೇಕು. ಕೆರೆಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ನ್ಯಾಯಪೀಠವು ಭಾನುವಾರ ಇವುಗಳ ವಿಚಾರಣೆ ನಡೆಸಿತು.

‘ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಹತ್ತಿರ ಜೈವಿಕ ಉದ್ಯಾನ ಸ್ಥಾಪನೆಗೆ ಅನುಮತಿ ನೀಡುವಂತೆ ಬಿಡಿಎ ಹಾಗೂ ಪ್ರವಾಹದ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಿರುವ ಚರಂಡಿಗಳ ನಿರ್ಮಾಣಕ್ಕೆ ಅನುಮತಿ ಕೊಡುವಂತೆ ಬಿಬಿಎಂಪಿ ತಮ್ಮ ಅರ್ಜಿಯಲ್ಲಿ ಮನವಿ ಮಾಡಿವೆ. ಇವುಗಳನ್ನು ಮೇಲ್ವಿಚಾರಣಾ ಸಮಿತಿ ಪರಿಶೀಲಿಸಲಿದೆ. ಸಮಿತಿಯಲ್ಲಿರುವ ತಜ್ಞರು ಸೂಕ್ತ ಪರಿಹಾರ ಸೂಚಿಸಲಿದ್ದಾರೆ. ಪರಿಸರ ಹಾಗೂ ಕೆರೆಗಳ ಸಂರಕ್ಷಣೆಗೆ ಎನ್‌ಜಿಟಿ ಹೆಚ್ಚಿನ ಆದ್ಯತೆ ನೀಡಲಿದ್ದು, ಈ ಸಂಬಂಧ ಹಲವು ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ’ ಎಂದು ನ್ಯಾಯಮೂರ್ತಿ ಆದರ್ಶ್‌ಕುಮಾರ್‌ ಗೋಯಲ್‌ ಅವರಿದ್ದ ಪೀಠವು ಹೇಳಿತು.

ಜೀವ ವೈವಿಧ್ಯ ಉದ್ಯಾನಗಳನ್ನು ಕೆರೆಗಳ ಗಡಿಯಾಚೆಗೆ ಸ್ಥಾಪಿಸುವ ಬದಲು ಅವುಗಳನ್ನು ಕೆರೆಯ ಗಡಿಯೊಳಗೇ ನಿರ್ಮಿಸಬೇಕು ಎಂದು ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ರಾಜ್‌ ಪಂಜ್ವಾನಿ ಅವರು ಪೀಠಕ್ಕೆ ಹೇಳಿದರು. ಸಣ್ಣ ನಿರಾವರಿ ಇಲಾಖೆಯು ಅಕ್ರಮವಾಗಿ ಪೈಪ್‌ಲೈನ್‌ ಅಳವಡಿಸಿರುವ ಕುರಿತು ನಿಷ್ಪಕ್ಷಪಾತ ತನಿಖೆ ಆಗಬೇಕೆಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT