ಸೋಮವಾರ, ಜುಲೈ 26, 2021
26 °C
ಲಾಡ್ಜ್‌, ಹೋಟೆಲ್‌ ಕೊಠಡಿ ದರದಲ್ಲಿ ₹ 1 ಸಾವಿರದವರೆಗೆ ಇಳಿಕೆ

ಮೈಸೂರಿನಲ್ಲಿ ಹೋಟೆಲ್‌ ತೆರೆದರೂ, ವ್ಯಾಪಾರವೇ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಲಾಕ್‌ಡೌನ್‌ ಸಡಿಲಗೊಳಿಸಿ ಲಾಡ್ಜ್‌, ಹೋಟೆಲ್‌, ರೆಸ್ಟೋರೆಂಟ್‌ ತೆರೆಯಲು ಅವಕಾಶ ನೀಡಿದ್ದರೂ, ಕೊರೊನಾ ಭಯದಿಂದ ಜನರು ತೆರಳುತ್ತಿಲ್ಲ. ಹೀಗಾಗಿ, ಬಹುತೇಕ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ವ್ಯಾಪಾರವಿಲ್ಲ.

ಕುಳಿತು ಆಹಾರ ಸವಿಯಲು ಅವಕಾಶ ನೀಡಿ ಮೂರು ದಿನಗಳಾಗಿದ್ದು, ಶೇ 25ರಷ್ಟು ಗ್ರಾಹಕರೂ ಬರುತ್ತಿಲ್ಲ ಎಂಬುದು ಮಾಲೀಕರ ಅಳಲು.

ಕೊಠಡಿಗಳನ್ನು ಕಡಿಮೆ ದರಕ್ಕೆ ನೀಡಲಾಗುತ್ತಿದೆ. ದಿನಕ್ಕೆ ₹ 2,500 ಇರುವ ಲಾಡ್ಜ್‌ಗಳಲ್ಲಿ ಚೌಕಾಸಿ ಮಾಡಿದರೆ ₹ 1 ಸಾವಿರದವರೆಗೆ ಇಳಿಕೆ ಮಾಡುತ್ತಿದ್ದಾರೆ. ಇಷ್ಟಾದರೂ ಗ್ರಾಹಕರ ಸಂಖ್ಯೆ ಶೇ 5ಕ್ಕಿಂತ ಹೆಚ್ಚು ದಾಟಿಲ್ಲ. ಕೆಲ ಲಾಡ್ಜ್‌, ರೆಸ್ಟೋರೆಂಟ್‌ಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ.

‘ಮೈಸೂರು ನಗರದಲ್ಲಿ 9,500 ಕೊಠಡಿಗಳಿವೆ. ಮೂರು ದಿನಗಳಲ್ಲಿ ಕೇವಲ 250 ಕೊಠಡಿಗಳು ಭರ್ತಿ ಆಗಿವೆ. ಲಾಕ್‌ಡೌನ್‌ ಪೂರ್ಣ ಪ್ರಮಾಣದಲ್ಲಿ ಇದ್ದಾಗ ಆಗುತ್ತಿದ್ದ ನಷ್ಟ ಬೇರೆ. ಈಗ ಹೋಟೆಲ್‌, ರೆಸ್ಟೋರೆಂಟ್‌ ತೆರೆದೂ ನಷ್ಟ ಮಾಡಿಕೊಂಡು ಸೇವೆ ನೀಡಬೇಕಾಗಿದೆ’ ಎಂದು ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ ಹಾಗೂ ಗ್ರಾಮಾಂತರ ಬಸ್ಸು ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್‌ಗಳೂ ಖಾಲಿ ಹೊಡೆಯುತ್ತಿವೆ. ಸದಾ ಕಿಕ್ಕಿರಿದು ತುಂಬಿರುವ ಬಿ.ಎನ್‌.ರಸ್ತೆಯ ಹೋಟೆಲ್‌ಗಳು ಇನ್ನೂ ತೆರೆದಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬಾರದ ಕಾರಣ ಕೆಲ ಹೋಟೆಲ್‌ಗಳು ಮತ್ತೆ ಬಾಗಿಲು ಹಾಕಲು ಸಿದ್ಧತೆ ನಡೆಸಿವೆ.

‘ನಮ್ಮ ಮೂರು ಬ್ರ್ಯಾಂಚ್‌ಗಳು ನಗರದಲ್ಲಿವೆ. ಹಿಂದೆ ಆಸನಗಳು ಖಾಲಿ ಇಲ್ಲದೇ ಗ್ರಾಹಕರು ಹೊರಗೆ ನಿಂತು ಕಾಯುತ್ತಿದ್ದರು. ಹಿಂದಿನ ದಿನಗಳಿಗೆ ಹೋಲಿಸಿದರೆ ಅದರ ಶೇ 20ರಷ್ಟು ಮಂದಿ ಮಾತ್ರ ಬರುತ್ತಿದ್ದಾರೆ. ಜನರು ಕುಟುಂಬ ಸಮೇತರಾಗಿ ಹೋಟೆಲ್‌ಗೆ ಬರುತ್ತಿಲ್ಲ’ ಎಂದು ಸರಸ್ವತಿಪುರಂನ ದೊನ್ನೆ ಬಿರಿಯಾನಿ ಹೋಟೆಲ್‌ ಮಾಲೀಕ ಮಂಜುನಾಥ್‌ ಹೇಳಿದರು.

ಪಾರ್ಸೆಲ್‌ ಮಾತ್ರ: ‘ನಾವು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೋಟೆಲ್‌ ತೆರೆದಿಲ್ಲ. ಪಾರ್ಸೆಲ್‌ ಮಾತ್ರ ನೀಡುತ್ತಿದ್ದೇವೆ. ನಿರ್ವಹಣೆಗೆ ಆಗುವಷ್ಟು ಹಣ ಬರುತ್ತಿದೆ’ ಎಂದು ಗಾಂಧಿ ವೃತ್ತದ ಬಳಿಯ ಆರ್‌ಆರ್‌ಆರ್‌ ಹೋಟೆಲ್‌ನ ರವೀಂದ್ರ ನುಡಿದರು.

‘ಹೆಚ್ಚು ಮಂದಿ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಿದ್ದಾರೆ. ಹೋಟೆಲ್‌ನಲ್ಲೇ ಉಪಾಹಾರ, ಊಟ ಮಾಡುತ್ತಿರುವವರ ಸಂಖ್ಯೆ ಕಡಿಮೆ. ಸ್ವಲ್ಪ ದಿನ ಕಾದು ನೋಡುತ್ತೇವೆ’ ಎಂದು ಕುವೆಂಪುನಗರದ ಮೈಸೂರು ಮೈಲಾರಿ ಫ್ಯಾಮಿಲಿ ಹೋಟೆಲ್‌ನ ಸಿದ್ದರಾಜೇಗೌಡ ತಿಳಿಸಿದರು.

ಮೈಸೂರಿನ ಹೋಟೆಲ್‌ ವಿವರ

ಲಾಡ್ಜ್‌/ಹೋಟೆಲ್‌: 405

ಕೊಠಡಿ; 9,500

ಸ್ಟಾರ್‌ ಹೋಟೆಲ್‌: 22

ರೆಸ್ಟೋರೆಂಟ್‌; 180

ಬೇಕರಿ; 300

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು