ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ನಿಲುಗಡೆ: ಉಚಿತ ಸೇವೆಗೆ ಅವಕಾಶವಿಲ್ಲ

ಸ್ವಂತ ವಾಹನದ ಬದಲು ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ
Last Updated 13 ಫೆಬ್ರುವರಿ 2021, 18:42 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಿಲುಗಡೆ ಉಚಿತವಾಗಿರಲೇಬಾರದು. ಸಾರ್ವಜನಿಕ ಸಾರಿಗೆ ಬಳಸುವುದಕ್ಕಿಂತಖಾಸಗಿ ವಾಹನ ಬಳಸುವುದು ದುಬಾರಿ ಎನ್ನುವುದನ್ನು ಖಾತರಿಪಡಿಸುವಂತಿರಬೇಕು ಪಾರ್ಕಿಂಗ್‌ ಶುಲ್ಕ.

ನಗರ ಭೂಸಾರಿಗೆ ನಿರ್ದೇಶನಾಲಯವು (ಡಲ್ಟ್‌) ಅಂತಿಮ ಗೊಳಿಸಿರುವ ‘ವಾಹನ ನಿಲುಗಡೆ ನೀತಿ 2.0’ರಲ್ಲಿ ಸ್ಪಷ್ಟಪಡಿಸಿರುವ ಪ್ರಮುಖ ಅಂಶವಿದು. ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸುವ ಪರಿಪಾಠವನ್ನು ಕೊನೆಗಾಣಿಸಬೇಕಾದರೆ ಪಾರ್ಕಿಂಗ್‌ಗೆ ದುಬಾರಿ ಶುಲ್ಕ ವಿಧಿಸುವುದೊಂದೇ ಮಾರ್ಗೋಪಾಯ ಎನ್ನುತ್ತದೆ ನೂತನ ನೀತಿ.

ನಗರದಲ್ಲಿ ರಸ್ತೆಗಳಿಗೆ ಮೊದಲೇ ಜಾಗದ ಕೊರತೆ ಇದೆ. ಅವುಗಳನ್ನು ವಾಹನ ನಿಲುಗಡೆಗೆ ಬಳಸುವುದಕ್ಕಿಂತ ಸುಸ್ಥಿರ ಮಾದರಿಯ ಸಾರಿಗೆ ಬಳಸುವುದಕ್ಕೇ ಆದ್ಯತೆ ನೀಡಬೇಕಿದೆ. ಪಾರ್ಕಿಂಗ್‌ ಶುಲ್ಕ ಅಗ್ಗವಾದಷ್ಟೂ ಜನ ಖಾಸಗಿ ವಾಹನ ಬಳಸುವುದಕ್ಕೆ ಉತ್ತೇಜನ ಸಿಗಲಿದ್ದು, ಅಂತಿಮವಾಗಿ ರಸ್ತೆಗಳು ವಾಹನಗಳಿಂದ ಗಿಜಿಗುಡುತ್ತವೆ ಎಂಬುದು ಹೊಸ ನೀತಿಯ ತರ್ಕ.

ಈ ನೀತಿಯ ಕರಡಿನಲ್ಲಿ ಶಿಫಾರಸು ಮಾಡಿದ್ದ ಪಾರ್ಕಿಂಗ್‌ ಶುಲ್ಕದ ಪ್ರಮಾಣ ಇನ್ನೂ ಹೆಚ್ಚು ಇತ್ತು. ವಾರ್ಷಿಕ ₹ 50 ಸಾವಿರದ ವರೆಗೆ ಶುಲ್ಕ ಸಂಗ್ರಹಿಸುವುದಕ್ಕೆ ಅವಕಾಶವಿತ್ತು. ಆದರೆ, ನೀತಿಯನ್ನು ಅಂತಿಮಗೊಳಿಸುವಾಗ ಶುಲ್ಕದ ಪ್ರಮಾಣವನ್ನು ಇಳಿಸಲಾಗಿದೆ. ಈಗಿನ ನೀತಿಯಲ್ಲಿ ಗರಿಷ್ಠ ₹ 5000 ಶುಲ್ಕ ವಿಧಿಸುವುದಕ್ಕೆ ಮಾತ್ರ ಅವಕಾಶ ಇದೆ. ಈಗ ನಿಗದಿಪಡಿಸಿರುವ ಶುಲ್ಕವೂ ದುಬಾರಿಯೇ ಎಂಬ ಟೀಕೆಯೂ ವ್ಯಕ್ತವಾಗಿದೆ.

ರಸ್ತೆಯಲ್ಲಿ ವಾಹನ ನಿಲುಗಡೆಗೆ ವಿಧಿಸುವ ಶುಲ್ಕವು ರಸ್ತೆಯಲ್ಲದ ಪಾರ್ಕಿಂಗ್‌ ತಾಣದಲ್ಲಿ ವಿಧಿಸುವ ಶುಲ್ಕಕ್ಕಿಂತ ಒಂದೂವರೆಯಿಂದ ಮೂರು ಪಟ್ಟು ದುಬಾರಿ ಆಗಿರಬೇಕು. ಆಗ ಮಾತ್ರ ಜನ ರಸ್ತೆಯಲ್ಲಿ ವಾಹನ ನಿಲ್ಲಿಸುವ ಬದಲು ಪಾರ್ಕಿಂಗ್‌ ತಾಣದಲ್ಲಿ ವಾಹನ ನಿಲ್ಲಿಸುವುದಕ್ಕೆ ಆಸಕ್ತಿ ತೋರುತ್ತಾರೆ. ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವುದು, ಸಂಚಾರದ ದಕ್ಷತೆ ಕಡಿಮೆ ಆಗುವುದು, ಸಂಚಾರದಲ್ಲಾಗುವ ವಿಳಂಬಗಳಿಗೆ ಇದು ಕಡಿವಾಣ ಹಾಕಲಿದೆ ಎನ್ನುತ್ತದೆ ಹೊಸ ನೀತಿ.

ವಾಣಿಜ್ಯ ಪ್ರದೇಶಕ್ಕೆ ಒಂದೇ ದರ ನಿಗದಿಪಡಿಸಬಾರದು. ಆಯಾ ಬೀದಿಯಲ್ಲಿನ ವಹಿವಾಟು ಮಾದರಿಗಳಿಗೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅನುಗುಣವಾಗಿ ದರವನ್ನು ನಿಗದಿಪಡಿಸಬೇಕು. ಹೆಚ್ಚು ಚಟುವಟಿಕೆಯಿಂದ ಕೂಡಿರುವ ರಸ್ತೆಗಳಲ್ಲಿ ಹೆಚ್ಚು ದರ ಹಾಗೂ ಕಡಿಮೆ ಚಟುವಟಿಕೆಯಿಂದ ಕೂಡಿದ ರಸ್ತೆಗಳಿಗೆ ಕಡಿಮೆ ದರ ನಿಗದಿಪಡಿಸಬೇಕು ಎಂದೂ ನೀತಿಯಲ್ಲಿ ಹೇಳಲಾಗಿದೆ.

ಪಾರ್ಕಿಂಗ್‌ ಶುಲ್ಕ: ಮಾರ್ಗಸೂಚಿಗಳೇನು?

* ವಾಣಿಜ್ಯ ಚಟುವಟಿಕೆಗಳು ತೀವ್ರವಾಗಿರುವ ಪ್ರದೇಶಗಳ 250 ಮೀ ವ್ಯಾಪ್ತಿಯ ರಸ್ತೆಗಳನ್ನು ಪ್ರದೇಶವಾರು ವಾಹನ ನಿಲುಗಡೆ ಯೋಜನೆ ಅನುಷ್ಠಾನಕ್ಕೆ ಬಳಸಬಹುದು. ಇಂತಹ ಪ್ರದೇಶದಲ್ಲಿ ಇತರ ರಸ್ತೆಗಳ ಪಾರ್ಕಿಂಗ್‌ಗಿಂತ ಜಾಸ್ತಿ ದರ ನಿಗದಿಪಡಿಸಬೇಕು.

* ರಸ್ತೆಯಲ್ಲಿ ಅಲ್ಪಾವಧಿಗೆ (1 ಗಂಟೆ ಮೀರದಂತೆ) ಸೀಮಿತವಾಗಿ ವಾಹನ ನಿಲ್ಲಿಸುವುದಕ್ಕೆ ಉತ್ತೇಜನ ನೀಡಬೇಕು. 1ಗಂಟೆಗಿಂತ ಹೆಚ್ಚು ಹೊತ್ತು ವಾಹನ ನಿಲ್ಲಿಸುವವರಿಗೆ ದುಬಾರಿ ಶುಲ್ಕ ವಿಧಿಸುವ ಮೂಲಕ ದೀರ್ಘ ಕಾಲ ವಾಹನ ನಿಲ್ಲಿಸುವುದನ್ನು ತಡೆಯಬೇಕು.

* ಪಾರ್ಕಿಂಗ್‌ ತಾಣದಲ್ಲಿ ವಾಹನ ನಿಲ್ಲಿಸಿ ನಂತರ ಸಾರ್ವಜನಿಕ ಸಾರಿಗೆ (ಪಾರ್ಕ್‌ ಆ್ಯಂಡ್‌ ರೈಡ್‌) ಬಳಸುವುದನ್ನು ಉತ್ತೇಜಿಸಬೇಕು. ಇಂತಹ ಬಳಕೆದಾರರಿಗೆ ದೀರ್ಘಾವಧಿ ವಾಹನ ನಿಲುಗಡೆಗೆ ರಿಯಾಯಿತಿಗಳನ್ನು ನೀಡಬೇಕು. ಪಾರ್ಕಿಂಗ್‌ ತಾಣಗಳಲ್ಲಿ ದೀರ್ಘಕಾಲ ವಾಹನ ನಿಲ್ಲಿಸುವವರಿಗೆ ಹಾಗೂ ಅಲ್ಪ ಕಾಲ ನಿಲ್ಲಿಸುವವರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಕಲ್ಪಿಸಬಹುದು. ಇದರಿಂದ ಜನ ಸ್ವಂತ ವಾಹನದಲ್ಲೇ ರಸ್ತೆಗಳಲ್ಲಿ ಸುತ್ತಾಡುವುದಕ್ಕೆ ಕಡಿವಾಣ ಹಾಕಬಹುದು. 6 ಗಂಟೆವರೆಗೆ, 6ರಿಂದ 12 ಗಂಟೆವರೆಗೆ, 12ರಿಂದ 24 ಗಂಟೆವರೆಗೆ ಪ್ರತ್ಯೇಕ ದರ ನಿಗದಿಪಡಿಸಬಹುದು.

* ಪಾರ್ಕಿಂಗ್‌ ತಾಣಗಳಲ್ಲೂ ಸುಖಾಸುಮ್ಮನೆ ದಿನಗಟ್ಟಲೆ ವಾಹನ ನಿಲ್ಲಿಸುವುದಕ್ಕೆ ಉತ್ತೇಜನ ನೀಡಬಾರದು. 48 ಗಂಟೆಗಳಿಂಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸುವವರಿಗೆ ಮಾಮೂಲಿಗಿಂತ ದುಪ್ಪಟ್ಟು ದರ ವಿಧಿಸಬೇಕು.

* ಪಾರ್ಕಿಂಗ್‌ ತಾಣದಲ್ಲಿ 96 ಗಂಟೆಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ ಅದನ್ನು ಪರಿತ್ಯಕ್ತ ವಾ.ಹನ ಎಂದು ಪರಿಗಣಿಸಬೇಕು. ಸಂಚಾರ ಪೊಲೀಸರು ಅಂತಹ ವಾಹನಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.

* ಪಾರ್ಕಿಂಗ್‌ ತಾಣಗಳಲ್ಲಿ ರಿಯಾಯಿತಿ ದರದ ಮಾಸಿಕ ಪಾಸ್‌ ವಿತರಣೆ ಮಾಡಬಹುದು.

* ಹಂಚಿಕೊಂಡು ಬಳಸುವ ಸಾರಿಗೆ ಉತ್ತೇಜಿಸಲು, ಅಂತಹ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಸಮೂಹ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬಹುದು. ಈ ಕುರಿತ ದತ್ತಾಂಶ ಸೆಂಟ್ರಲ್‌ ಪಾರ್ಕಿಂಗ್ ಪೋರ್ಟಲ್‌ನಲ್ಲಿ ಲಭ್ಯ ಇರಬೇಕು. ಬಳಸಿದಷ್ಟು ಅವಧಿಗೆ ಮಾತ್ರ ಶುಲ್ಕ ವಿಧಿಸುವ ವಿಧಾನವನ್ನೂ ಅನುಸರಿಸಬಹುದು. ಆದರೆ, ಇಂತಹ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡಿದರೆ ಶುಲ್ಕದಲ್ಲಿ ಯಾವುದೇ ರಿಯಾಯಿತಿ ನೀಡುವಂತಿಲ್ಲ.

ಸೈಕಲ್‌ಗೆ ಶುಲ್ಕವಿಲ್ಲ

ಮೋಟಾರುರಹಿತ ಸಾರಿಗೆಯನ್ನು ಉತ್ತೇಜಿಸಲು ವಾಹನ ನಿಲುಗಡೆ ತಾಣದಲ್ಲಿ ಬೈಸಿಕಲ್‌ಗಳಿಗೆ ಅಥವಾ ಪೆಡೆಲ್‌ ಆಧರಿತ ಎಲೆಕ್ಟ್ರಿಕ್‌ ವಾಹನಗಳನ್ನು ನಿಲ್ಲಿಸುವುದಕ್ಕೆ ಜಾಗ ಮೀಸಲಿಡಬೇಕು. ಇಂತಹ ವಾಹನಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಕಡೆಯೂ 10 ಸೈಕಲ್‌ಗಳನ್ನು ನಿಲ್ಲಿಸುವುದಕ್ಕೆ ಅವಕಾಶ ಕಲ್ಪಿಸಬೇಕು.

ವಸತಿ ಪ್ರದೇಶ: ಪಾರ್ಕಿಂಗ್‌ ಶುಲ್ಕ ಎಷ್ಟು?

ಸಣ್ಣ ಕಾರುಗಳಿಗೆ; ₹1,000

ಮಧ್ಯಮ ಗಾತ್ರದ ಕಾರುಗಳಿಗೆ; ₹3,000– ₹4,000

ಎಂಯುವಿ/ ಎಸ್‌ಯುವಿಗಳಿಗೆ; ₹5,000

(ವಾಣಿಜ್ಯ ಪಾರ್ಕಿಂಗ್‌ ಶುಲ್ಕ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಇರಲಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT