ಮಂಗಳವಾರ, ಅಕ್ಟೋಬರ್ 26, 2021
26 °C

ಶೇ 100 ಅವಕಾಶ: ಪ್ರೇಕ್ಷಕರ ಪ್ರತಿಕ್ರಿಯೆ ನೀರಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರ ಆಸನ ಭರ್ತಿಗೆ ಅವಕಾಶ ಕೊಟ್ಟರೂ ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ನೀರಸವಾಗಿದೆ.

ಒರಾಯನ್‌ ಮಾಲ್‌, ಗರುಡಾಮಾಲ್‌, ಯಶವಂತಪುರದ ಗೋವರ್ಧನ, ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರಗಳಲ್ಲೂ ಅಷ್ಟಾಗಿ
ಪ್ರೇಕ್ಷಕರ ದಟ್ಟಣೆ ಇರಲಿಲ್ಲ.ಮೆಜೆಸ್ಟಿಕ್‌ ಪ್ರದೇಶದ ಕೆಲವು ಚಿತ್ರಮಂದಿರಗಳು ಇನ್ನೂ ನಿರ್ವಹಣೆಯ ಹಂತದಲ್ಲಿದ್ದವು. 

ರಾಜ್ಯದ ಇತರ ಭಾಗಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ ಎಂದು ಚಿತ್ರಮಂದಿರಗಳ ಮಾಲೀಕರು ತಿಳಿಸಿದರು.

ಶುಕ್ರವಾರ ಸಾಮಾನ್ಯ ಕೆಲಸದ ದಿನ ಆಗಿರುವುದು, ಬಹುತೇಕರು ಇನ್ನೂ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯಲ್ಲಿರುವುದು, ಆನ್‌ಲೈನ್‌ ವೀಕ್ಷಣೆ ಸಾಧ್ಯವಾಗಿರುವುದು ಇದಕ್ಕೆ ಕಾರಣವಾಗಿರಬಹುದು ಎಂಬ ವಿಶ್ಲೇಷಣೆಯೂ ಚಿತ್ರಮಂದಿರಗಳ ನಿರ್ವಾಹಕರು ಮತ್ತು ಈ ಕ್ಷೇತ್ರದ ಪ್ರಮುಖರಿಂದ ಕೇಳಿಬಂದಿದೆ.  

ಚಿತ್ರಪ್ರದರ್ಶಕರ ಒಕ್ಕೂಟದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌ ಪ್ರತಿಕ್ರಿಯಿಸಿ, ‘ಹೊಸ ಚಿತ್ರಗಳೇನೋ ಬಿಡುಗಡೆಯಾಗಿವೆ. ಆದರೆ, ಪ್ರೇಕ್ಷಕರ ಪ್ರಮಾಣ ಪ್ರತಿ ಪ್ರದರ್ಶನದಲ್ಲಿ ಶೇ 10ರಿಂದ ಶೇ 20ರ ಒಳಗಿದೆ. ಜನರ ನಾಡಿಮಿಡಿತ ಅರಿಯುವುದೇ ಕಷ್ಟ’ ಎಂದರು.

‘ಹೊಸ ಚಿತ್ರಗಳು ಪರಿಣಾಮಕಾರಿ ವಿಷಯ ಹೊಂದಿಲ್ಲದಿರುವುದು. ಅವುಗಳ ಬಗ್ಗೆ ಜನಾಭಿಪ್ರಾಯ ಮೂಡದಿರುವುದೂ ಕಾರಣವಿರಬಹುದು ಎಂದ ಅವರು, ಅನೇಕರು ಒಟಿಟಿ ಪ್ಯಾಕೇಜ್‌ಗಳನ್ನು ಹಾಕಿಕೊಂಡಿರುವುದರಿಂದ ಅದರಲ್ಲಿ ಈ ಚಿತ್ರಗಳು ಬಿಡುಗಡೆಯಾಗುವವರೆಗೆ ಕಾಯುವ ಪ್ರವೃತ್ತಿಯೂ ಕಾರಣವಾಗಿರಬಹುದು’ ಎಂದು ಚಂದ್ರಶೇಖರ್‌ ಅಭಿಪ್ರಾಯಪಟ್ಟರು. 

‘ಅ. 14ರ ನಂತರ ಖ್ಯಾತನಟರ ದೊಡ್ಡ ಬಜೆಟ್‌ ಚಿತ್ರಗಳು ಬರಲಿವೆ. ಆಗ ಬುಕ್ಕಿಂಗ್‌ ಆಧಾರದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ತಿಳಿಯಲಿದೆ’ ಎಂದು ಅವರು ಹೇಳಿದರು.

‘ಶೇ 50ರ ಆಸನ ಭರ್ತಿವರೆಗೆ ಇದ್ದ ಪರಿಸ್ಥಿತಿಯೇ ಇಂದೂ ಇದೆ. ಕೆಲ ದಿನಗಳ ನಂತರ ಜನರ ಪ್ರತಿಕ್ರಿಯೆ ಗೊತ್ತಾಗಬಹುದು’ ಎಂದು ಉತ್ತರ ಕರ್ನಾಟಕ ಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಓದುಗೌಡರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು