ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋಷಣೆ ಪ್ರಕರಣ: ಪೊಲೀಸ್‌ ಕಸ್ಟಡಿಗೆ ಆರೋಪಿಗಳು

ಪೊಲೀಸ್‌ ಠಾಣೆ ಎದುರು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ಮತ್ತೊಬ್ಬ ಆರೋಪಿಗೆ ಶೋಧ
Published 18 ಏಪ್ರಿಲ್ 2024, 16:51 IST
Last Updated 18 ಏಪ್ರಿಲ್ 2024, 16:51 IST
ಅಕ್ಷರ ಗಾತ್ರ

ಬೆಂಗಳೂರು: ಜೈಶ್ರೀರಾಮ್‌ ಘೋಷಣೆ ಕೂಗಿಕೊಂಡು ಕಾರಿನಲ್ಲಿ ಹೋಗುತ್ತಿದ್ದ ಯುವಕರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಬಂಧಿಸಲಾಗಿರುವ ಆರೋಪಿಗಳಾದ ಫರ್ಮಾನ್‌ ಹಾಗೂ ಸಮೀರ್‌ ಎಂಬುವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು, ಏಳು ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಮತ್ತಿಬ್ಬರು ಬಾಲಕರನ್ನು ಬಾಲಮಂದಿರಕ್ಕೆ ಕಳುಹಿಸಿದ್ದು, ಇನ್ನೊಬ್ಬ ಆರೋಪಿ ಪತ್ತೆಗೆ ಶೋಧ ಮುಂದುವರಿಸಿದ್ದಾರೆ. ಗುರುವಾರ ಸಂಜೆ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಘಟನೆಯ ಹಿಂದಿರುವ ವ್ಯಕ್ತಿಗಳನ್ನೂ ಬಂಧಿಸಬೇಕು ಎಂದು ಆಗ್ರಹಿಸಿ ಠಾಣೆ ಎದುರು ಬಿಜೆಪಿ ಹಾಗೂ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಹಲ್ಲೆಗೆ ಒಳಗಾದ ರಾಹುಲ್‌ ಹಾಗೂ ಪವನ್‌ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್‌ ಠಾಣಾ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಸಹಕಾರನಗರದ ಪವನ್‌ಕುಮಾರ್‌, ಸಂಜೀವಿನಿನಗರದ ವಿನಾಯಕ್‌ ಹಾಗೂ ರಾಹುಲ್‌ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಫರ್ಮಾನ್‌ ಹಾಗೂ ಸಮೀರ್‌ ಸೇರಿದಂತೆ ಇಬ್ಬರು ಬಾಲಕರನ್ನು ಪೊಲೀಸರು ಬುಧವಾರ ರಾತ್ರಿಯೇ ಬಂಧಿಸಿದ್ದರು.

‘ಹಲ್ಲೆ ನಡೆಸುವ ಯಾವುದೇ ಉದ್ದೇಶವೂ ಇರಲಿಲ್ಲ. ಸ್ಥಳದಲ್ಲಿ ನಡೆದ ಘರ್ಷಣೆಯಿಂದ ಹಲ್ಲೆ ನಡೆಸಲಾಯಿತೆಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಜೈಶ್ರೀರಾಮ್‌ ಹೇಳುವಂತೆ ಒತ್ತಾಯ’:

‘ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಎಂ.ಎಸ್‌.ಪಾಳ್ಯ ರಸ್ತೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದೆವು. ಅದೇ ವೇಳೆಯಲ್ಲಿ ಕಾರಿನಲ್ಲಿ ಮೂವರು ಯುವಕರು ಜೈಶ್ರೀರಾಮ್‌ ಘೋಷಣೆ ಕೂಗುತ್ತಾ ಬರುತ್ತಿದ್ದರು. ಅವರು ಜೈಶ್ರೀರಾಮ್‌ ಘೋಷಣೆ ಕೂಗುತ್ತಾ ಕಾರಿನಲ್ಲಿ ಜೋರಾಗಿ ಹಾಡು ಹಾಕಿಕೊಂಡಿದ್ದರು. ಜೈಶ್ರೀರಾಮ್‌ ಹೇಳುವಂತೆ ನಮ್ಮನ್ನು ಒತ್ತಾಯಿಸಿದರು. ಅದಕ್ಕೆ ಪ್ರತಿಯಾಗಿ ನಾವು ಅಲ್ಲಾ ಹು ಅಕ್ಬರ್‌ ಎಂದು ಕೂಗುವಂತೆ ಒತ್ತಾಯಿಸಿದೆವು. ಆಗ ಗಲಾಟೆ ನಡೆಯಿತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಇಬ್ಬರು ಮದ್ಯ ಸೇವಿಸಿ ಗಲಾಟೆ ನಡೆಸಿರುವುದು ದೃಢಪಟ್ಟಿದೆ’ ಎಂದು ಮೂಲಗಳು ತಿಳಿಸಿವೆ.

ಕಾರ್ಯಕರ್ತರ ಆಕ್ರೋಶ:
‘ಪ್ರಕರಣದ ಹಿಂದೆ ಕಿಡಿಗೇಡಿಗಳ ಷಡ್ಯಂತ್ರ ಇದೆ. ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆ ನಡೆಸಬೇಕು’ ಎಂದು ಬಿಜೆಪಿ ಮುಖಂಡ ಎ.ರವಿ ಆಗ್ರಹಿಸಿದರು.

‘ಹಲ್ಲೆಗೊಳಗಾದ ಯುವಕರು ಯಾವುದೇ ಘೋಷಣೆ ಕೂಗಿಲ್ಲ. ಬಂಧಿತರ ವಿರುದ್ಧ ಕಾನೂನು ಕ್ರಮ ಆಗದಿದ್ದರೆ ಮತ್ತೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

‘ಬುಧವಾರ ಮಧ್ಯಾಹ್ನ ಶ್ರೀರಾಮನವಮಿ ಮುಗಿಸಿ ಕಾರಿನಲ್ಲಿ ಬರುತ್ತಿದ್ದೆವು. ಬೈಕ್‌ನಲ್ಲಿ ಬಂದ ಇಬ್ಬರು ಕಾರಿಗೆ ಕಟ್ಟಿದ್ದ ಶ್ರೀರಾಮನ ಧ್ವಜ ನೋಡಿ ನಮ್ಮನ್ನು ಅಡ್ಡಗಟ್ಟಿದ್ದರು. ಅಲ್ಲಾ ಹು ಅಕ್ಬರ್‌ ಕೂಗುವಂತೆ ಬಲವಂತ ಮಾಡಿದರು. ನಾವು ಜೈಶ್ರೀರಾಮ್‌ ಹೇಳುವಂತೆ ಒತ್ತಾಯಿಸಿಲ್ಲ’ ಎಂದು ರಾಹುಲ್‌ ಹೇಳಿದರು.

‘ಆರೋಪಿಗಳು ಹಲ್ಲೆ ನಡೆಸಲು ಮುಂದಾದ ವೇಳೆ ನಾನು ತಪ್ಪಿಸಿಕೊಂಡು ಬಿಎಂಟಿಸಿ ಬಸ್‌ ಹತ್ತಿದೆ. ಆದರೆ, ವಿನಾಯಕ್‌ ಹಾಗೂ ರಾಹುಲ್ ಅವರ ಕೈಗೆ ಸಿಕ್ಕಿದರು. ದೊಣ್ಣೆಯಿಂದ ಹಲ್ಲೆ ನಡೆಸಿದರು. ಹಲ್ಲೆ ನಡೆಸುತ್ತಿದ್ದರೂ ಯಾರೂ ರಕ್ಷಣೆಗೆ ಬರಲಿಲ್ಲ’ ಎಂದು ಪವನ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT