ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ರಾಜಕಾರಣ: ‘ಆಪರೇಷನ್‌’ ಸದ್ದು; ಕಾಂಗ್ರೆಸ್ ಗುದ್ದು

Published 13 ಮೇ 2024, 18:28 IST
Last Updated 13 ಮೇ 2024, 18:28 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ‘ಆಪರೇಷನ್‌ ಕಮಲ’ದ ಸದ್ದು ಎದ್ದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಚರ್ಚೆಯ ಕಿಡಿ ಹೊತ್ತಿಸಿದೆ.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಂಪುಟದ ಹಲವು ಸದಸ್ಯರು ಅಂತಹ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ‘ನಮ್ಮ ಸರ್ಕಾರದಲ್ಲಿ ಭಿನ್ನಮತ ಇದೆ’ ಎಂದಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಚರ್ಚೆಯ ಕಾವು ಏರಿಸಿದ್ದಾರೆ.

ಮಹಾರಾಷ್ಟ್ರದ ಸತಾರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಮಾತನಾಡಿರುವ ಶಿಂಧೆ, ‘ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳಲಿದೆ’ ಎನ್ನುವ ಮೂಲಕ ‘ಆಪರೇಷನ್‌ ಕಮಲ’ ದ ತಯಾರಿಯ ಸುಳಿವು ನೀಡಿದ್ದಾರೆ.

ಶಿಂಧೆ ಹೇಳಿಕೆ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಆಪರೇಷನ್‌ ಕಮಲ ನಡೆಸಿ ನಮ್ಮ ಸರ್ಕಾರ ಪತನಗೊಳಿಸುವುದು ಬಿಜೆಪಿಯ ಹಗಲುಗನಸು’ ಎಂದು ತಿರುಗೇಟು ನೀಡಿದರು.

‘ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗುವುದಿಲ್ಲ. ಮಹಾರಾಷ್ಟ್ರದ ಶಿಂಧೆ ಸರ್ಕಾರವೇ ಉರುಳಲಿದೆ’ ಎಂದು ಶಿವಕುಮಾರ್‌ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

‘ರಾಜ್ಯದಲ್ಲಿ ಕಾಂಗ್ರೆಸ್‌ನ 136 ಶಾಸಕರಿದ್ದೇವೆ. ಸರ್ಕಾರ ಉರುಳಬೇಕಾದರೆ 89 ಮಂದಿ ಬಿಜೆಪಿಗೆ ಹೋಗಬೇಕಾಗುತ್ತದೆ. ಈಗ ಬೇರೆ ಪಕ್ಷಕ್ಕೆ ಹೋಗುವಷ್ಟು ದಡ್ಡರು ಯಾರೂ ಇಲ್ಲ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಶಾಸಕರು ಮಾರಾಟಕ್ಕಿಲ್ಲ: ಸಿ.ಎಂ

‘ಮಾರಾಟವಾಗಲು ನಮ್ಮ ಶಾಸಕರಲ್ಲಿ ಯಾರೂ ತಯಾರಿಲ್ಲ. ಒಂದು ವರ್ಷದಿಂದ ಇಂತಹ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಇನ್ನೊಂದು ಬಾರಿ ಏಕೆ ಪ್ರಯತ್ನಿಸುತ್ತಾರೆ? ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲಿ ಆಗಲು ಸಾಧ್ಯವಿಲ್ಲ’ ಎಂದು  ಸಿದ್ದರಾಮಯ್ಯ ಹೇಳಿದರು. ಏಕನಾಥ ಶಿಂದೆ ಹೇಳಿಕೆಗೆ ಪ್ರತಿಕ್ರಿಯಿಸಿದರು. 

ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಧ್ರುವೀಕರಣ ಆಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಗೆಲ್ಲಲಿದ್ದು, ನಮ್ಮವರೇ ಪ್ರಧಾನ ಮಂತ್ರಿಯಾಗಲಿದ್ದಾರೆ’ ಎಂದು ಹೇಳಿದರು

ಶಿಂದೆ ಸರ್ಕಾರವೇ ಪತನ: ಡಿಕೆಶಿ

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮಹಾರಾಷ್ಟ್ರದಲ್ಲಿ ಏಕನಾಥ ಶಿಂದೆ ನೇತೃತ್ವದ ಸರ್ಕಾರ ಉಳಿಯದು. ಅಲ್ಲಿ ಮತ್ತೆ ಕಾಂಗ್ರೆಸ್‌–ಎನ್‌ಸಿಪಿ–ಶಿವಸೇನಾ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಮೇಲುಗೈ ಸಾಧಿಸಲಿದ್ದಾರೆ. ಎರಡೂ ಪಕ್ಷಗಳ ಶಾಸಕರು ಮೂಲ ಬಣಗಳಿಗೆ ಮರಳುತ್ತಾರೆ’ ಎಂದರು.

‘ಭಿನ್ನಮತ ಇದೆ, ಸರ್ಕಾರ ಬೀಳದು’

‘ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಭಿನ್ನಮತವಿದೆ. ಆದರೆ, ಅದು ಸರ್ಕಾರ ಪತನಕ್ಕೆ ಕಾರಣವಾಗುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ನಮ್ಮದು ಪಕ್ಷದ ಒಳಗಿನ ಘರ್ಷಣೆ.  ಹೊರಗೆ ಯಾವುದೇ ಘರ್ಷಣೆ ಇಲ್ಲ. ಹೀಗಾಗಿ ಭಿನ್ನಮತದಿಂದ ನಮ್ಮ ಸರ್ಕಾರ ಬೀಳುತ್ತದೆ ಎನ್ನುವುದು ಸುಳ್ಳು’ ಎಂದರು.

‘ಅಭಿವೃದ್ಧಿ, ಅನುದಾನ, ವರ್ಗಾವಣೆ ವಿಚಾರಗಳಲ್ಲಿ ಸರ್ಕಾರ ದಲ್ಲಿ ಭಿನ್ನಮತ ಇರಬಹುದು. ಅಧಿಕಾರ ಇರುವವರೆಗೂ ಸಮಸ್ಯೆಗಳು ಇರುತ್ತವೆ. ಅವುಗಳನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ಗೊಂದಲ, ಭಿನ್ನಮತ ಬರುತ್ತವೆ, ಹೋಗುತ್ತವೆ. ಅವುಗಳ ಕಾರಣಕ್ಕೆ ಸರ್ಕಾರ ಪತನವಾಗುತ್ತದೆ ಎನ್ನುವುದರಲ್ಲಿ ಸತ್ಯವಿಲ್ಲ’ ಎಂದು ಹೇಳಿದರು.

ರಾಜೀನಾಮೆ ಪ್ರಶ್ನೆ ಉದ್ಭವಿಸದು: ‘ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನ ಗೆದ್ದ ಕಾರಣಕ್ಕೆ ಮುಖ್ಯಮಂತ್ರಿ ಅಥವಾ ಸರ್ಕಾರದಲ್ಲಿರುವವರು ರಾಜೀನಾಮೆ ನೀಡಬೇಕಾದ ಪ್ರಶ್ನೆ ಉದ್ಭವಿಸದು. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಯಾವ ಪಕ್ಷ ಅಧಿಕಾರದಲ್ಲಿದ್ದಾಗಲೂ ರಾಜೀನಾಮೆ ನೀಡಿದ ಉದಾಹರಣೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT