ಸೋಮವಾರ, ಸೆಪ್ಟೆಂಬರ್ 27, 2021
28 °C
ಯಲಹಂಕ: ಬೃಹತ್ ಲಸಿಕಾ ಕೇಂದ್ರ ಉದ್ಘಾಟನೆ

ಮಹಿಳೆಯರಿಗೆ ಲಸಿಕೆ ಹಾಕಲು ಪಿಂಕ್‌ ಬೂತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಲಸಿಕಾ ಅಭಿಯಾನವನ್ನು ಚುರುಕುಗೊಳಿಸುವ ಉದ್ದೇಶದಿಂದ ಹಾಗೂ ಜನರು ಸರತಿ ಸಾಲಿನಲ್ಲಿ ಕಾಯದೇ ಗೊಂದಲರಹಿತವಾಗಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸುವ ಸಲುವಾಗಿ ಬಿಬಿಎಂಪಿಯು ಕೇರ್ ಇಂಡಿಯಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ‘ಬೃಹತ್ ಲಸಿಕಾ ಕೇಂದ್ರ’ಗಳನ್ನು ಸ್ಥಾಪಿಸುತ್ತಿದೆ.

ಮಹಿಳೆಯರು ಅಡ್ಡಿ ಆತಂಕಗಳಿಲ್ಲದೇ ಲಸಿಕೆ ಪಡೆಯಲು ಅನುವು ಮಾಡಿಕೊಡುವ ಸಲುವಾಗಿ ಬೃಹತ್‌ ಲಸಿಕಾ ಕೇಂದ್ರಗಳಲ್ಲಿ ಪಿಂಕ್‌ ಬೂತ್‌ಗಳನ್ನು ಸ್ಥಾಪಿಸಲಾಗುತ್ತದೆ. ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೂ ಲಸಿಕೆ ನೀಡುವ ವ್ಯವಸ್ಥೆ ಇಲ್ಲಿರಲಿದೆ.

ಲಸಿಕೆ ಪಡೆಯುವ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಮತ್ತು ಅಂಗವಿಕಲರನ್ನು ನೋಂದಣಿ ಮಾಡಿಸಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.‌ ಅಂಗವಿಕಲರಿಗಾಗಿ ಗಾಲಿ ಕುರ್ಚಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿರುತ್ತದೆ.

ಯಲಹಂಕದ ಎನ್ಇಎಸ್ ವೃತ್ತದ ಬಳಿಯ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಿರುವ ‘ಬೃಹತ್ ಲಸಿಕಾ ಕೇಂದ್ರ’ಕ್ಕೆ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಬುಧವಾರ ಚಾಲನೆ ನೀಡಿದರು. ಯಲಹಂಕ ವಲಯ ಆಯುಕ್ತ ಕೆ.ಎ.ದಯಾನಂದ್, ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್, ಯಲಹಂಕ ವಲಯ ಜಂಟಿ ಆಯುಕ್ತ ಡಾ. ಅಶೋಕ್ ಉಪಸ್ಥಿತರಿದ್ದರು.

‘ಕಳೆದ 15 ದಿನಗಳಲ್ಲಿ ಬಿಬಿಎಂಪಿಗೆ ಪೂರೈಕೆಯಾಗುವ ಲಸಿಕೆ ಪ್ರಮಾಣ ಹೆಚ್ಚಾಗಿದೆ. ನಿತ್ಯ 1.5 ಲಕ್ಷ ಜನರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದಕ್ಕೆ ಪೂರಕವಾಗಿ ಬೃಹತ್‌ ಲಸಿಕಾ ಕೇಂದ್ರಗಳನ್ನು ಪ್ರಾರಂಭಿಸುತ್ತಿದ್ದೇವೆ. ಆರಂಭದಲ್ಲಿ ಮೂರು ಕಡೆ ಇಂತಹ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಕ್ರಮೇಣ ಇವುಗಳ ಸಂಖ್ಯೆಯಲ್ಲಿ ಹೆಚ್ಚಿಸಲಿದ್ದೇವೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

ಬೃಹತ್ ಲಸಿಕಾ ಕೇಂದ್ರದ ವಿಶೇಷಗಳೇನು?

ಉಚಿತ ಲಸಿಕಾಕರಣ: ಲಸಿಕಾ ಕೇಂದ್ರದಲ್ಲಿ ಜನಜಂಗುಳಿ ಉಂಟಾಗುವುದನ್ನು ತಡೆಗಟ್ಟಲು ನಾಲ್ಕು ಲಸಿಕಾ ಬೂತ್‌ಗಳನ್ನು ತೆರೆಯಲಾಗಿದೆ. ಅರ್ಹತೆ ಹೊಂದಿರುವ ಎಲ್ಲ ಫಲಾನುಭವಿಗಳಿಗೂ ಇಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು.

ನಿರೀಕ್ಷಣಾ  ವ್ಯವಸ್ಥೆ: ಕೋವಿಡ್ ಲಸಿಕೆಯನ್ನು ಪಡೆದವರು ತುಸು ಹೊತ್ತು ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಇಲ್ಲಿರಲಿದೆ. ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾದಲ್ಲಿ ತಕ್ಷಣ ಚಿಕಿತ್ಸೆ ಹಾಗೂ ಆರೈಕೆ ಒದಗಿಸಲು ವೈದ್ಯಾಧಿಕಾರಿಗಳು ಲಭ್ಯ ಇರುತ್ತಾರೆ.

ನೇರವಾಗಿ ಲಸಿಕೆ ಪಡೆಯುವ ವ್ಯವಸ್ಥೆ:

ಕೇಂದ್ರಕ್ಕೆ ವಾಹನದಲ್ಲಿ ಬಂದು ಲಸಿಕೆ ಪಡೆಯಲು ಇಚ್ಛಿಸುವವರಿಗೆ ಪ್ರತ್ಯೇಕ ಕೌಂಟರ್ ಇರಲಿದೆ. ಅವರು ವಾಹನಗಳಲ್ಲಿಯೇ ಕುಳಿತು ಕೋವಿಡ್ ಲಸಿಕೆ ಪಡೆಯಬಹುದು. ವಾಹನದಲ್ಲೇ ನೋಂದಣಿ, ಪರಿಶೀಲನೆಗೆ ಅವಕಾಶವಿರಲಿದೆ. ಲಸಿಕೆ ಪಡೆದ ನಂತರ ನಿಗದಿತ ವಾಹನ ನಿಲುಗಡೆ ಸ್ಥಳದಲ್ಲಿ 30 ನಿಮಿಷಗಳ ಕಾಲ ಕಾಯಬಹುದು.

ಬೃಹತ್‌ ಲಸಿಕಾ ಕೇಂದ್ರದಲ್ಲಿರುವ ಇತರ ಸೌಕರ್ಯಗಳು

ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ

ಸರತಿ ಸಾಲಿನಲ್ಲಿ ಕಾಯದೆ ತ್ವರಿತವಾಗಿ ಲಸಿಕೆ ಪಡೆಯುವ ವ್ಯವಸ್ಥೆ

ಸೆಲ್ಪಿ ಮತ್ತು ಪೋಟೋ ಕಾರ್ನರ್ ವ್ಯವಸ್ಥೆ

ಆರೋಗ್ಯ ಜಾಗೃತಿ ಮೂಡಿಸುವ ವಿಡಿಯೊ ಮತ್ತು ಪೋಸ್ಟರ್‌ಗಳ ಪ್ರದರ್ಶನ

ಲಸಿಕೆ ಪಡೆದ ಫಲಾನುಭವಿಗಳಿಗೆ ಕೋವಿನ್ ಪೋರ್ಟಲ್‌ನಿಂದ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು.

ಬೃಹತ್ ಲಸಿಕಾ ಕೇಂದ್ರಗಳು

* ಡಾ. ಬಿ.ಆರ್.ಅಂಬೇಡ್ಕರ್ ಭವನ, ಯಲಹಂಕ ವಲಯ

* ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಮೆಟ್ರೊ ನಿಲ್ದಾಣ ಹಿಂಭಾಗ, ಪೂರ್ವ ವಲಯ.

* ಯಂಗ್ ಸ್ಟರ್‌ ಕಬಡ್ಡಿ ಕ್ಲಬ್ ಮೈದಾನ, ಮಲ್ಲೇಶ್ವರ, ಪಶ್ಚಿಮ ವಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು