ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧಿ ಜಯಂತಿ: 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ

Published : 1 ಅಕ್ಟೋಬರ್ 2024, 15:19 IST
Last Updated : 1 ಅಕ್ಟೋಬರ್ 2024, 15:19 IST
ಫಾಲೋ ಮಾಡಿ
Comments

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ‘ಸ್ವಚ್ಛತಾ ಆಂದೋಲನ ಪ್ರತಿಜ್ಞಾ ವಿಧಿ’ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಸ್ವಚ್ಛತೆ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅಕ್ಟೋಬರ್‌ 2ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸ್ವಚ್ಛತೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ ಎಂದು ಬಿಬಿಎಂಪಿಯ ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್‌ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ– ಸಿಬ್ಬಂದಿ ಹಾಗೂ 800 ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ನಾಗರಿಕರೂ ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಲು ಯ್ಯೂಟ್ಯೂಬ್ ಲಿಂಕ್: https://www.youtube.com/live/ hGhl_6fj8v4 ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಬುಧವಾರ ಬೆಳಿಗ್ಗೆ 9ಕ್ಕೆ ನಗರದ ಶಿವಾನಂದ ವೃತ್ತದ ಬಳಿಯಿರುವ ಗಾಂಧಿ ಭವನದಿಂದ ಶಿವಾನಂದ ವೃತ್ತ, ರೇಸ್ ಕೋರ್ಸ್ ವೃತ್ತ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ವಿಧಾನಸೌಧದ ಪಶ್ಚಿಮ‌ ದ್ವಾರದವರೆಗೆ ಒಂದು ಕಿ.ಮೀ ‘ಗಾಂಧಿ ನಡಿಗೆ’ಯನ್ನು ಹಮ್ಮಿಕೊಳ್ಳಲಾಗಿದೆ.

ಪಾಲಿಕೆಯ ಎಲ್ಲ ಎಂಟು ವಲಯಗಳಲ್ಲಿ ವಲಯ ಆಯುಕ್ತರ ನೇತೃತ್ವದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಲಿದೆ. ಅಧಿಕಾರಿಗಳು, ಪೌರ ಕಾರ್ಮಿಕರು, ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸರ್ಕಾರೇತರ ಸಂಸ್ಥೆಗಳ ಸದಸ್ಯರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರೀತಿ ಗೆಹ್ಲೋಟ್‌ ತಿಳಿಸಿದ್ದಾರೆ.

72 ಸಾವಿರ ಪ್ರತಿಜ್ಞೆ: ಬೆಂಗಳೂರನ್ನು ಸ್ವಚ್ಛವಾಗಿರಿಸುವ ಮತ್ತು ಹಸಿರೀಕರಣಗೊಳಿಸಲು 72 ಸಾವಿರಕ್ಕೂ ಹೆಚ್ಚು ನಾಗರಿಕರು ಮತ್ತು ವಿದ್ಯಾರ್ಥಿಗಳು https://cleanblr.bbmp.gov.in/ pledge.php ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಇವರಿಗೆ ಉಪ ಮುಖ್ಯಮಂತ್ರಿಯವರ ಸಹಿಯುಳ್ಳ ‘ಡಿಜಿಟಲ್ ಪ್ರಶಂಸಾ ಪತ್ರ’ವನ್ನು ನೀಡಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT