ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನೆಹರೂ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೆ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

Published 27 ಮೇ 2024, 17:18 IST
Last Updated 27 ಮೇ 2024, 17:18 IST
ಅಕ್ಷರ ಗಾತ್ರ

ಬೆಂಗಳೂರು: ‘ಹತ್ತು ವರ್ಷ ಅಧಿಕಾರದಲ್ಲಿದ್ದರೂ ಒಂದು ಅಣೆಕಟ್ಟೆಯನ್ನಾಗಲೀ, ಒಂದು ಸಾರ್ವಜನಿಕ ಉದ್ದಿಮೆಯನ್ನಾಗಲೀ ಸ್ಥಾಪಿಸದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಬಹುತೇಕ ಅಣೆಕಟ್ಟುಗಳು ನೆಹರೂ ಅವಧಿಯಲ್ಲೇ ನಿರ್ಮಾಣವಾಗಿದ್ದವು. ಕಾಂಗ್ರೆಸ್‌ ದೇಶಕ್ಕಾಗಿ ಏನೂ ಮಾಡಿಲ್ಲ ಎನ್ನುವುದರಲ್ಲೇ ಮೋದಿ ಕಾಲ ಕಳೆಯುತ್ತಿದ್ದಾರೆ. ಇವರಿಗೆ ನೆಹರೂ ಕುರಿತು ಮಾತನಾಡುವ ಯೋಗ್ಯತೆಯೇ ಇಲ್ಲ’ ಎಂದರು.

‘ನೆಹರೂ ಬ್ರಿಟೀಷರ ವಿರುದ್ಧ ಹೋರಾಡಿ, ಜೈಲು ವಾಸ ಅನುಭವಿಸುತ್ತಿದ್ದಾಗ ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರದವರು ಮೌನ ವಹಿಸಿದ್ದರು. ನೆಪಕ್ಕೂ ಬ್ರಿಟೀಷರ ವಿರುದ್ಧ ಧ್ವನಿ ಎತ್ತಲಿಲ್ಲ. ಸ್ವಾತಂತ್ರ್ಯ ಹೋರಾಟದ ಚರಿತ್ರೆ ಇರುವ ನಮಗೆ ಈಗ ಇವರು ದೇಶಭಕ್ತಿಯ ಪಾಠ ಮಾಡುತ್ತಾ ನಗೆಪಾಟಲಿಗೀಡಾಗಿದ್ದಾರೆ’ ಎಂದು ಟೀಕಿಸಿದರು.

ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವಗಳ ಆಧಾರದಲ್ಲಿ ದೇಶದ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ್ದ ನೆಹರೂ, ಭಾರತವನ್ನು ವಿಶ್ವದ ಅತಿದೊಡ್ಡ ಮತ್ತು ಸದೃಢ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ರೂಪಿಸಿದರು. ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ತರವಾದುದು ಎಂದರು.

ಸೋಲು ಖಚಿತವಾಗಿದೆ:

‘ಮೋದಿಯವರು ಹತಾಶರಾಗಿದ್ದು, ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ದೇವರೇ ನನ್ನನ್ನು ಕಳುಹಿಸಿದ್ದು ಎಂದು ಹೇಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸೋಲುವುದು ಖಚಿತವಾಗಿದೆ. ಸೋಲಿನ ಭೀತಿಯಿಂದ ಪ್ರಧಾನಿ ಹಾಗೆ ಮಾತನಾಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ಮಂಜುನಾಥ್ ಭಂಡಾರಿ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್‌ ಸೊರಕೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವೆ ರಾಣಿ ಸತೀಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT