ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಗೆ ದೌರ್ಜನ್ಯ; ಅಪರಾಧಿಗೆ ಜೀವಾವಧಿ ಶಿಕ್ಷೆ

ಮನೆ ಬಿಟ್ಟು ಬಂದಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ * ಅಕ್ರಮ ಬಂಧನದಲ್ಲಿಟ್ಟಿದ್ದ ಪ್ರಕಾಶ್
Last Updated 13 ಜೂನ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ತಂದೆ– ತಾಯಿ ಮೇಲಿನ ಸಿಟ್ಟಿನಿಂದ ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕಾಶ್ ಎಂಬಾತನಿಗೆ ನಗರದ 71ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯ ಗಾಯತ್ರಿನಗರದಲ್ಲಿ ವಾಸವಿದ್ದ ಪ್ರಕಾಶ್, ಕೊಪ್ಪಳ ಜಿಲ್ಲೆಯ ಬಾಲಕಿಯನ್ನು ತನ್ನ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮೋಹನ್ ಪ್ರಭು, ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಜೆ.ಮೀನಾ ಕುಮಾರಿ ವಾದಿಸಿದ್ದರು.

ರೈಲು ನಿಲ್ದಾಣದಲ್ಲಿ ಪರಿಚಯ: ಚೆನ್ನಾಗಿ ಓದು ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಸಿಟ್ಟಾಗಿದ್ದ ಬಾಲಕಿ, 2017ರ ಆಗಸ್ಟ್ 8ರಂದು ರೈಲಿನಲ್ಲಿ ಬೆಂಗಳೂರಿಗೆ ಬಂದು ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಇಳಿದಿದ್ದಳು. ‘ಮನೆ ಬಿಟ್ಟು ಬಂದಿದ್ದೇನೆ. ನನಗೆ ಯಾವುದಾದರೂ ಕೆಲಸ ಕೊಡಿಸು’ ಎಂದು ರೈಲಿನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳನ್ನು ಕೋರಿದ್ದಳು.

ಆ ಯುವತಿಯೇ ತನ್ನ ಸ್ನೇಹಿತ ಪ್ರಕಾಶ್‌ಗೆ ಕರೆ ಮಾಡಿ ನಿಲ್ದಾಣಕ್ಕೆ ಕರೆಸಿಕೊಂಡಿದ್ದಳು. ‘ನಿನಗೆ ಈತ ಕೆಲಸ ಕೊಡಿಸುತ್ತಾನೆ’ ಎಂದು ಬಾಲಕಿಗೆ ಹೇಳಿ ಆತನ ಜೊತೆ ಕಳುಹಿಸಿಕೊಟ್ಟಿದ್ದರು. 15ಕ್ಕೂ ಹೆಚ್ಚು ದಿನ ಬಾಲಕಿಯನ್ನು ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟಿದ್ದ ಅಪರಾಧಿ, ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿ ಕ್ರೂರವಾಗಿ ವರ್ತಿಸಿದ್ದ. ತಾನು ಹೊರಗೆ ಹೋಗುವಾಗ ಬಾಲಕಿಯನ್ನು ಮನೆಯಲ್ಲೇ ಕೂಡಿಹಾಕಿ ಹೊರಗಡೆಯಿಂದ ಬೀಗ ಹಾಕಿಕೊಂಡು ಹೋಗುತ್ತಿದ್ದ.

ಅಪರಾಧಿಯ ಕೃತ್ಯದಿಂದ ನೊಂದ ಸಂತ್ರಸ್ತೆ, ತನ್ನನ್ನು ಊರಿಗೆ ವಾಪಸ್ ಕಳುಹಿಸುವಂತೆ ಗೋಗರೆದು ಚೀರಾಡಲಾರಂಭಿಸಿದ್ದಳು. ಅಕ್ಕ– ಪಕ್ಕದ ನಿವಾಸಿಗಳಿಗೆ ವಿಷಯ ಗೊತ್ತಾಗುತ್ತದೆ ಎಂದು ತಿಳಿದ ಅಪರಾಧಿ, ಆಕೆಯನ್ನು ಊರಿಗೆ ಕಳುಹಿಸಲು ಮುಂದಾಗಿದ್ದ.

ಬಾಲಕಿ ರಕ್ಷಿಸಿದ್ದ ರೈಲ್ವೆ ಪೊಲೀಸರು: ಕೊಪ್ಪಳದಿಂದ ಬಾಲಕಿ ಕಾಣೆಯಾಗುತ್ತಿದ್ದಂತೆ ಗಾಬರಿಗೊಂಡಿದ್ದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿಯ ಫೋಟೊವನ್ನು ರಾಜ್ಯದ ಎಲ್ಲ ಠಾಣೆಗಳಿಗೆ ಹಾಗೂ ಬಸ್ ಮತ್ತು ರೈಲು ನಿಲ್ದಾಣಗಳಿಗೆ ಪೊಲೀಸರು ಕಳುಹಿಸಿಕೊಟ್ಟಿದ್ದರು.

ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲೂ ಬಾಲಕಿಯ ಫೋಟೊವನ್ನು ಅಂಟಿಸಲಾಗಿತ್ತು. ಬಾಲಕಿಯನ್ನು ರೈಲಿಗೆ ಹತ್ತಿಸಲು ಅಪರಾಧಿ ನಿಲ್ದಾಣಕ್ಕೆ ಬಂದಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ಗಮನಿಸಿದ್ದರು. ಅಪರಾಧಿಯನ್ನು ವಶಕ್ಕೆ ಪಡೆದುಬಾಲಕಿಯನ್ನು ವಿಚಾರಿಸಿದಾಗ ವಿಷಯ
ಗೊತ್ತಾಗಿತ್ತು. ಈತನನ್ನು ಸುಬ್ರಹ್ಮಣ್ಯನಗರ ಠಾಣೆಯ ಪೊಲೀಸರ ಸುಪರ್ದಿಗೆ ನೀಡಿದ್ದರು. ಪೋಕ್ಸೊ ಕಾಯ್ದೆ, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.

*
ಹೊರಜಗತ್ತಿನ ಅರಿವು ಇಲ್ಲದ ವಯಸ್ಸಿನಲ್ಲಿ ಕೆಲ ಬಾಲಕಿಯರು ಮನೆ ಬಿಟ್ಟು ಹೋಗುತ್ತಿದ್ದಾರೆ. ಇವರನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಈ ಆದೇಶ ಕಠಿಣ ಎಚ್ಚರಿಕೆ ಆಗಿದೆ.
-ಕೆ.ಜೆ.ಮೀನಾಕುಮಾರಿ,ಪಬ್ಲಿಕ್ ಪ್ರಾಸಿಕ್ಯೂಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT