ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಾನದ ಮೇಲಷ್ಟೇ ಕಣ್ಣಿಟ್ಟು ಪಾರ್ಕಿಂಗ್ ನೀತಿ

‘ಪ್ರಾಯೋಗಿಕವಾಗಿ ಒಂದು ಪ್ರದೇಶದಲ್ಲಿ ಅನುಷ್ಠಾನಗೊಳಿಸಿ ಯಶಸ್ವಿಯಾದರೆ ವಿಸ್ತರಿಸಲಿ’
Last Updated 15 ಫೆಬ್ರುವರಿ 2021, 20:58 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಹೊಸ ಪಾರ್ಕಿಂಗ್ ನೀತಿಯನ್ನು ತರಾತುರಿಯಲ್ಲಿ ಜಾರಿಗೊಳಿಸದೆ ಸಾಧಕ ಬಾಧಕಗಳ ಬಗ್ಗೆ ಸರ್ಕಾರ ಚರ್ಚೆ ನಡೆಸಬೇಕು ಮತ್ತು ಪ್ರಾಯೋಗಿಕ ಒಂದು ಪ್ರದೇಶದಲ್ಲಿ ಅನುಷ್ಠಾನಗೊಳಿಸಿ, ಯಶಸ್ವಿಯಾದರೆ ಮಾತ್ರ ಎಲ್ಲ ಪ್ರದೇಶಗಳಿಗೆ ವಿಸ್ತರಿಸಬೇಕು’ ಎಂದು ‘ಸಿಟಿಜನ್ ಆ್ಯಕ್ಷನ್ ಫೋರಂ‘ ಸದಸ್ಯ ಡಿ.ಎಸ್. ರಾಜಶೇಖರ್ ಸಲಹೆ ನೀಡಿದರು.

‘ಪ್ರಜಾವಾಣಿ’ ಫೇಸ್‌ಬುಕ್ ಲೈವ್ ಚರ್ಚೆಯಲ್ಲಿ ಮಾತನಾಡಿದ ಅವರು, ‘ಸ್ವಂತ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಲೂ ಶುಲ್ಕ ನೀಡಬೇಕು ಎಂಬ ಪಾರ್ಕಿಂಗ್ ನೀತಿಯನ್ನು ಏಕಾಏಕಿ ಅನುಷ್ಠಾನಗೊಳಿಸಲು ಆಗುವುದಿಲ್ಲ. ಅದಕ್ಕೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಪರ್ಯಾಯ ವಾಹನ ನಿಲುಗಡೆ ತಾಣದ ವ್ಯವಸ್ಥೆ ಮಾಡಬೇಕು. ಅದ್ಯಾವುದನ್ನೂ ಮಾಡಿದೆ ವರಮಾನದ ಮೇಲಷ್ಟೇ ಕಣ್ಣಿಟ್ಟುಕೊಂಡು ನೀತಿಗಳನ್ನು ಜಾರಿಗೆ ತಂದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಕೋವಿಡ್ ಕಾರಣದಿಂದ ಜನ ಉದ್ಯೋಗ ಇಲ್ಲದೆ ತತ್ತರಿಸಿ ಹೋಗಿದ್ದಾರೆ. ಅವರಿಗೆ ನೆರವಾಗುವ ಬದಲು ಅವರ ಮೇಲೆ ಹೊರೆ ಹೇರಲು ಸರ್ಕಾರ ಹೊರಟಿದೆ. ಈ ನೀತಿ ಜಾರಿಗೆ ನಾವು ಅವಕಾಶ ಕೊಡುವುದಿಲ್ಲ. ನಗರ ಭೂಸಾರಿಗೆ ನಿರ್ದೇಶನಾಲಯ(ಡಲ್ಟ್) ನೀಡಿರುವ ಶಿಫಾರಸುಗಳನ್ನು ಬಿಬಿಎಂಪಿ ಅಧಿಕಾರಿಗಳು ಸಂಪೂರ್ಣವಾಗಿ ಓದಬೇಕು. ಅದನ್ನು ಬಿಟ್ಟು ಸರ್ಕಾರಕ್ಕೆ ವರಮಾನ ಬರಲಿದೆ ಎಂಬ ಕೊನೆಯ ಒಂದೇ ಒಂದು ಸಾಲನ್ನು ಓದಿಕೊಂಡು ಮುಂದುವರಿದರೆ ಬೆಂಗಳೂರಿನ ಜನ ರೊಚ್ಚಿಗೇಳಲಿದ್ದಾರೆ’ ಎಂದರು.

‘ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಆಗುತ್ತಿರುವುದಕ್ಕೆ ಹೊಣೆಯನ್ನು ಬಿಬಿಎಂಪಿ ಹೊರಬೇಕೇ ಹೊರತು ಸಾರ್ವಜನಿಕರಲ್ಲ. ನಿಯಮಗಳನ್ನು ಉಲ್ಲಂಘಿಸಿ ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕೊಟ್ಟವರು ಅಧಿಕಾರಿಗಳು. ಈಗ ಜನರ ಮೇಲೆ ಭಾರ ಹೊರಿಸಲು ಮುಂದಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹೊಸ ಪಾರ್ಕಿಂಗ್ ನೀತಿ ಜಾರಿಗೆ ಬಂದರೆ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಇಲ್ಲವಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ, ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಿ ವಾಯು ಮಾಲಿನ್ಯ ಕಡಿಮೆಯಾಗಲಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಇವರ ಕಲ್ಪನೆಯೇ ಬೇರೆ, ವಾಸ್ತವಾಂಶವೇ ಬೇರೆ’ ಎಂದು ಹೇಳಿದರು.

‘ಏಕೆಂದರೆ, ಯಾವ ಬಡಾವಣೆಗಳಲ್ಲೂ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಇಲ್ಲ. ಕಾರು ಮಾಲೀಕರು ಅನಿವಾರ್ಯವಾಗಿ ಶುಲ್ಕ ಪಾವತಿಸಿ ಮನೆ ಮಂದೆಯೇ ವಾಹನ ನಿಲ್ಲಿಸಿಕೊಳ್ಳುತ್ತಾರೆ. ಸಾರ್ವಜನಿಕ ಸಾರಿಗೆ ಕೊನೆಯ ತಾಣಕ್ಕೆ ಸಂಪರ್ಕ ಇಲ್ಲದ ಕಾರಣ ಕಾರು ಮತ್ತು ಬೈಕ್‌ಗಳನ್ನು ಉಪಯೋಗಿಸಲೇಬೇಕಾದ ಅನಿವಾರ್ಯತೆ ಇದೆ. ಸಮಸ್ಯೆಯ ಮೂಲಗಳನ್ನು ಸರಿಪಡಿಸದೆ ಕೇವಲ ಶುಲ್ಕ ವಿಧಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಹೊಸ ಪಾರ್ಕಿಂಗ್ ನೀತಿ ಮತ್ತೊಂದು ರೀತಿಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಿದೆ’ ಎಂದು ಅವರು ಪ್ರತಿಪಾದಿಸಿದರು.

‘ದುರಾಲೋಚನೆಯಿಂದ ಕೂಡಿರುವ ನೀತಿ’
‘ಪಾರ್ಕಿಂಗ್ ಸಮಸ್ಯೆಯನ್ನು ನಗರಕ್ಕೆ ತಂದಿಟ್ಟಿರುವುದೇ ಬಿಬಿಎಂಪಿ. ತನ್ನ ತಪ್ಪು ಮುಚ್ಚಿಕೊಳ್ಳಲು ಈಗ ದುರಾಲೋಚನೆಯಿಂದ ಕೂಡಿರುವ ಪಾರ್ಕಿಂಗ್ ನೀತಿ 2.0 ಜಾರಿಗೆ ತರಲು ಹೊರಟಿದೆ’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಕಿಡಿ ಕಾರಿದರು.

‘ಕಟ್ಟಡಗಳನ್ನು ನಿರ್ಮಿಸುವಾಗ ನಿಯಮಗಳ ಪ್ರಕಾರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿಕೊಳ್ಳಬೇಕು. ಆದರೆ, ನಿಯಮ ಉಲ್ಲಂಘಿಸಿ ಕಟ್ಟಡ ನಕ್ಷೆ ಇದೆಯೇ ಎಂಬುದನ್ನು ಗಮನಿಸದ ಅಧಿಕಾರಿಗಳು ಅನುಮೋದನೆ ನೀಡುತ್ತಿದ್ದಾರೆ. ಸ್ವಾಧೀನಾನುಭವ ಪ್ರಮಾಣ ಪತ್ರ (ಒ.ಸಿ) ನೀಡುವಾಗಲೂ ಅದನ್ನು ಗಮನಿಸಿಲ್ಲ ಎಂದರೆ ಲಂಚ ಪಡೆದು ಒ.ಸಿ ನೀಡಿದ್ದಾರೆ ಎಂದೇ ಅರ್ಥ’ ಎಂದರು.

‘ನಿಯಮ ಉಲ್ಲಂಘಿಸಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಲಿ. ಅದಕ್ಕೂ ಮೊದಲು ಈ ರೀತಿಯ ಕಟ್ಟಡಗಳ ನಿರ್ಮಾಣಕ್ಕೆ ಯಾವ ಅಧಿಕಾರಿ ಕಾರಣ ಎಂಬುದನ್ನು ಪತ್ತೆ ಹಚ್ಚಿ ಅವರಿಂದಲೂ ದಂಡ ವಸೂಲಿ ಮಾಡಲಿ. ಪಾರ್ಕಿಂಗ್ ಶುಲ್ಕದಿಂದ ಬರುವ ವರಮಾನಕ್ಕಿಂತ ಹೆಚ್ಚು ಆದಾಯ ಸರ್ಕಾರಕ್ಕೆ ಬರಲಿದೆ’ ಎಂದು ಹೇಳಿದರು.

‘ಆಟೋಚಾಲಕರು, ತಳ್ಳುವ ಗಾಡಿ ಇಟ್ಟುಕೊಂಡು ಜೀವನ ನಡೆಸುವವರು ಇದ್ದಾರೆ. ಮೊದಲೇ ಅವರು ಚಿಕ್ಕ ಮನೆಗಳಲ್ಲಿ ವಾಸವಿದ್ದಾರೆ. ಅವರು ಮನೆಯೊಳಗೆ ವಾಹನ ನಿಲುಗಡೆ ಸಾಧ್ಯವೇ, ಡೆಲಿವರಿ ಬಾಯ್‌ಗಳು ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸಿ ಮನೆ–ಮನೆಗೆ ವಸ್ತುಗಳನ್ನು ತಲುಪಿಸಬೇಕು, ಯಾವುದೋ ದೇಶದಲ್ಲಿ ಈ ರೀತಿಯ ಪಾರ್ಕಿಂಗ್ ವ್ಯವಸ್ಥೆ ಇರಬಹುದು. ಅಷ್ಟರ ಮಟ್ಟಿನ ಸೌಕರ್ಯವನ್ನು ನಮ್ಮ ಸರ್ಕಾರಗಳು ಕಲ್ಪಿಸಿವೆಯೇ’ ಎಂದು ಪ್ರಶ್ನಿಸಿದರು.‌

‘ಇನ್ನು ಬಿಟಿಎಸ್‌ನಿಂದ ಬಿಎಂಟಿಸಿ ಆದ ಬಳಿಕ ಬಸ್‌ಗಳ ಬಣ್ಣ ಬದಲಾಯಿತೇ ಹೊರತು, ಸುಧಾರಣೆ ಕಾಣಲಿಲ್ಲ. ಬಸ್‌ ಹತ್ತಬೇಕೆಂದರೆ ಆಟೋರಿಕ್ಷಾ ಅಥವಾ ಟ್ಯಾಕ್ಸಿ ಹಿಡಿದು ನಿಲ್ದಾಣಗಳಿಗೆ ಬರಬೇಕು. ಕೊನೆಯ ತಾಣಕ್ಕೆ ಬಸ್‌ ವ್ಯವಸ್ಥೆ ಇಲ್ಲ. ಬೆಂಗಳೂರಿನ ಜನರು ಮೋಜಿಗಾಗಿ ಕಾರುಗಳನ್ನು ರಸ್ತೆಗೆ ಇಳಿಸುತ್ತಿಲ್ಲ. ಅನಿವಾರ್ಯವಾಗಿ ಕಾರು ಮತ್ತು ಬೈಕ್‌ಗಳನ್ನು ಬಳಕೆ ಮಾಡುತ್ತಿದ್ದಾರೆ’ ಎಂದರು.‌

‘ವಾರ್ಡ್‌ ಮತ್ತು ಏರಿಯಾ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಬಳಿಕ ಅವರಿಗೆ ಅಗತ್ಯ ಇರುವ ಯೋಜನೆಗಳನ್ನು ರೂಪಿಸಬೇಕು. ನಿಯಮ ರೂಪಿಸಿ ಬಳಿಕ ಜನರ ಬಳಿ ಕೊಂಡೊಯ್ಯುವುದು ಪಾಲಿಕೆಯ ಆಡಳಿತದ ವೈಖರಿಯಲ್ಲ’ ಎಂದು ಹೇಳಿದರು.

‘ಪ್ರತಿ ಏರಿಯಾದಲ್ಲೂ ಬಹುಮಹಡಿ ಕಟ್ಟಡಗಳನ್ನು ಕಟ್ಟಿ ಸಾರ್ವಜನಿಕರ ವಾಹನ ನಿಲುಗಡೆಗೆ ಉಚಿತವಾಗಿ ಅವಕಾಶ ನೀಡಬೇಕು. ಅದ್ಯಾವುದನ್ನೂ ಮಾಡದೆ ಕೇವಲ ಶುಲ್ಕ ವಸೂಲಿಗೆ ಮುಂದಾಗುವುದು ಸರಿಯಲ್ಲ. ಈ ನೀತಿ ಜಾರಿಗೆ ನಾವು ಅವಕಾಶ ಕೊಡುವುದೂ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT