ಬುಧವಾರ, ಜೂನ್ 3, 2020
27 °C
ಪ್ರಶ್ನೆಗಳ ಮೆರವಣಿಗೆ l ಮನದ ಮೂಸೆಯಲ್ಲಿ ಮಥಿಸಿ ಬಂದ ಉತ್ತರಗಳು

ಪ್ರಜಾವಾಣಿ ಕ್ವಿಜ್: ಕಚಗುಳಿ ಇಟ್ಟ ಸ್ಯಾಂಕಿ, ಚಿಂತನೆಗೆ ಹಚ್ಚಿದ ‘ಕಬ್ಬನ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರಿನಲ್ಲಿ ಓಡಾಡುವಾಗ ನೋಡಿದ ಸ್ಥಳಗಳೇ ಅವು. ಆದರೂ, ಅವುಗಳ ಬಗ್ಗೆಯೇ ಪ್ರಶ್ನೆಗಳು ತೂರಿಬಂದಾಗ ಕೆಲ ಹೊತ್ತು ತಲೆ ಕೆರೆದುಕೊಳ್ಳುವ ಸ್ಥಿತಿ. ಛೆ, ಹೌದಲ್ಲ, ಖಂಡಿತ, ಇದುವೇ ಇರಬೇಕು, ಇದೇ ಉತ್ತರ ಹೇಳಿಯೇ ಬಿಡುತ್ತೇನೆ...

ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೇರಿದ್ದ 900ಕ್ಕೂ ಅಧಿಕ ವಿದ್ಯಾರ್ಥಿಗಳು ಗುರುವಾರ ಎದುರಿಸಿದ ತಳಮಳವಿದು. ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನ ಬೆಂಗಳೂರು ವಲಯದ ಲಿಖಿತ ಸುತ್ತಿನಲ್ಲಿ ಕೇಳಲಾದ ಒಂದೊಂದು ಪ್ರಶ್ನೆಗಳೂ ಅವರನ್ನು ಚಿಂತನೆಗೀಡುಮಾಡಿದವು. ಮನಸ್ಸಿನೊಳಗಿನ ತೊಯ್ದಾಟದಲ್ಲೇ ವಿದ್ಯಾರ್ಥಿಗಳು ಬರೆದ ಬಹುತೇಕ ಉತ್ತರಗಳು ಸರಿಯಾಗಿದ್ದವು.

ಸ್ಯಾಂಕಿ ಕೆರೆಗೆ ಸಂಬಂಧಿಸಿದ ಪ್ರಶ್ನೆ ವಿದ್ಯಾರ್ಥಿಗಳಿಗೆ ನೀಡಿದ ಕಚಗುಳಿ ಅಷ್ಟಿಷ್ಟಲ್ಲ. ಹೈಕೋರ್ಟ್‌ ಆವರಣದಲ್ಲಿರುವ ಕಬ್ಬನ್‌ ಪ್ರತಿಮೆ ಅವರನ್ನು ಚಿಂತನೆಗೆ ಹಚ್ಚಿತು. ಮೆರವಣಿಗೆ ಹೊರಟ ಈ ಪ್ರಶ್ನೆಗಳ ಸಾಲಿನಲ್ಲಿ ತೇಲಿಬಂದ ‘ಟೈಟಾನಿಕ್‌ ಹಡಗಿನ ಕೊನೆಯ ಸಂಗೀತ ಕಛೇರಿ’ಯ ಗಾಯನ ಮುದ ನೀಡಿದರೆ, ‘ಮುಟ್ಟಿದರೆ ಮುನಿ’ ಗಿಡದ ಕುರಿತ ಸರಳ ಪ್ರಶ್ನೆಗೆ ನೀಡಿದ ಉತ್ತರ ತಪ್ಪಾಗಿದ್ದು ವಿದ್ಯಾರ್ಥಿಗಳ ಉತ್ಸಾಹದ ಬುಗ್ಗೆಗೆ ಮುಳ್ಳು ಚುಚ್ಚಿದ ಅನುಭವ ನೀಡಿತು.

ಬೆಂಗಳೂರಿನೊಡನೆ ನಂಟು ಹೊಂದಿರುವ ಬಾದಾಮಿ ಬಳಿ ಇರುವ ‘ಅರಣ್ಯ ಮತ್ತು ಶಿವನ ಪತ್ನಿಯ ಹೆಸರಿನ ಈ ದೇವಾಲಯ ಯಾವುದು’ ಎಂಬ ಮೊದಲ ಪ್ರಶ್ನೆ ಕೇಳುತ್ತಿದ್ದಾಗಲೇ ‘ಬನಶಂಕರಿ’ ಕಣ್ಣ ಮುಂದೆ ಹಾದು ಹೋಗಿದ್ದಳು.

ಅಮೆರಿಕದಲ್ಲಿ ಈ ಹೆಸರನ್ನು ಕೆಲಸ ಕಳೆದುಕೊಂಡಾಗ ಬಳಸುವ ಈ ಕ್ರಿಯಾಪದ ನಗರವೊಂದರ ಹೆಸರು ಎಂಬ ಪ್ರಶ್ನೆ ಸ್ಪರ್ಧಾರ್ಥಿಗಳನ್ನು ಬೆಂಗಳೂರಿಗೆ ಎಳೆದು ತಂದಿತ್ತು. ಬಿಸಿಸಿಐ ಹುದ್ದೆಯನ್ನು ತಿರುಚಿ ಹೇಳಿದ ಬಗೆ ಕುತೂಹಲಕರವಾಗಿತ್ತು. ‘ತೆಲಂಗಾಣ ತಲಿ’ಯ ಪ್ರತಿಮೆ ಚಿತ್ರ ತೋರಿಸಿ, ಇದು ಯಾರು ಎಂದು ಕೇಳಿದಾಗ ‘ಸೋನಿಯಾ ಗಾಂಧಿ’ ಎಂಬ ಉತ್ತರ ಕೆಲವು ವಿದ್ಯಾರ್ಥಿಗಳಿಗಷ್ಟೇ ಹೊಳೆಯಿತು. ಸಭಿಕರಲ್ಲಿ ಒಬ್ಬ ಹುಡುಗನಂತೂ ‘ಚಂದ್ರಶೇಖರ ರಾವ್‌’ ಎಂದು ಹೇಳಿಯೇಬಿಟ್ಟ.

20 ಅಂಕಗಳ ಲಿಖಿತ ಪರೀಕ್ಷೆಯ ಬಳಿಕ ಗರಿಷ್ಠ ಅಂಕ ಗಳಿಸಿದ ಆರು ತಂಡಗಳಿಗೆ ವೇದಿಕೆ ಏರುವ ಸೌಭಾಗ್ಯ. ಪ್ರಶ್ನೆ ಕೇಳಿದ್ದು ವೇದಿಕೆಯಲ್ಲಿದ್ದ ವಿದ್ಯಾರ್ಥಿಗಳ ತಂಡಗಳಿಗೆ. ಆದರೆ, ಚಡಪಡಿಸಿದ್ದು ಸಭಿಕರ ಸ್ಥಾನದಲ್ಲಿದ್ದ ವಿದ್ಯಾರ್ಥಿಗಳು. ವೇದಿಕೆಯಲ್ಲಿದ್ದ ಘಟಾನುಘಟಿ ಸ್ಪರ್ಧಿಗಳು ಮಣಿಸಲಾಗದ ಪ್ರಶ್ನೆಗಳು ಸಭಿಕರತ್ತ ತೂರಿ ಬಂದವು. ಅವುಗಳನ್ನು ಸಭಿಕರು ಸಲೀಸಾಗಿ ಸೋಲಿಸಿದರು.  

ಅಲ್ಲಿ ನೇರ ಪ್ರಶ್ನೆಗಳಿದ್ದವು, ಬಜರ್‌ ಸುತ್ತಿನ ಪ್ರಶ್ನೆ ಇತ್ತು. ಬಜರ್‌ ಅನ್ನು ಗಡಿಬಿಡಿಯಲ್ಲಿ ಅದುಮಿದರೆ ಅಂಕ ಕಳೆದುಕೊಳ್ಳುವ ಸುತ್ತೂ ಇತ್ತು. ಒಂದು ಹಂತದಲ್ಲಿ ಮುಂಚೂಣಿಯಲ್ಲಿದ್ದ ಪ್ರೆಸಿಡೆನ್ಸಿ ತಂಡಕ್ಕೆ ಕೈಕೊಟ್ಟದ್ದು ಇದೇ ಅಂಕ ಕಳೆದುಕೊಳ್ಳುವ ಸುತ್ತು. ಆದರೆ, ಮೂರು ಮತ್ತು ನಾಲ್ಕನೇ ಸುತ್ತುಗಳಲ್ಲಿ ಸಿಕ್ಸರ್‌ ಮೇಲೆ ಸಿಕ್ಸರ್‌ ಬಾರಿಸಿದವರು ಕ್ರೈಸ್ಟ್‌ ಅಕಾಡೆಮಿ ಶಾಲೆಯ ಆದಿತ್ಯ ರಾವ್‌ ಮತ್ತು ಆದಿತ್ಯ ಆಚಾರ್ಯ. ಇವರು ಅಂತಿಮ ಸುತ್ತಿನ ಅಂತ್ಯಕ್ಕೆ ಗಳಿಸಿದ ಅಂಕ 105. ಅವರ ಸಮೀಪದ ಸ್ಪರ್ಧಿಗಳಾದ ರೆಯಾನ್‌ ಇಂಟರ್‌ನ್ಯಾಷನಲ್‌ ಶಾಲೆ ತಂಡ ಗಳಿಸಿದ್ದು 45 ಅಂಕ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು