ಪ್ರತಿಭಟನೆ 29ನೇ ದಿನಕ್ಕೆ
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಯ (ಪಿಟಿಸಿಎಲ್) ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆ ಸೋಮವಾರ 29ನೇ ದಿನ ಪೂರೈಸಿತು.
ಸಂವಿಧಾನ ಸಂರಕ್ಷಣಾ ಮಹಾಒಕ್ಕೂಟ ನೇತೃತ್ವದಲ್ಲಿ ಜ.2ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿ
ಸಲಾಗಿದೆ. ಭೂಮಿ ಕಳೆದುಕೊಂಡ ಸಂತ್ರಸ್ತರುಉದ್ಯಾನದಲ್ಲಿರುವ ಪೆಂಡಾಲ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸುತ್ತಿದ್ದಾರೆ.
‘1978ರ ಕಾಯ್ದೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸಲ್ಲಿಸುವ ಅರ್ಜಿಗಳನ್ನು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳು ತಿರಸ್ಕರಿಸುತ್ತಿವೆ. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂಮಿ ಪರರ ಪಾಲಾಗುತ್ತಿದೆ’ ಎಂದು
ಪ್ರತಿಭಟನಕಾರರು ದೂರಿದರು.
‘ಬಲಾಢ್ಯರ ಅನ್ಯಾಯದಿಂದ ಭೂಮಿ ಕಳೆದುಕೊಂಡಿರುವ ಕೋಲಾರ, ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಸಂತ್ರಸ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 29 ದಿನವಾದರೂ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಬಂದಿಲ್ಲ. ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಳಲು ಕೇಳುವವರು ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಸ್ಥಳದಲ್ಲಿ ವೃದ್ಧೆ ಮೊಕ್ಕಾಂ: ಉಳುಮೆ ಮಾಡುತ್ತಿದ್ದ ಮೂರು ಎಕರೆ ಜಮೀನು ಕಳೆದುಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚನ್ನಾಪುರ ಹಟ್ಟಿಯ ನೀಲಾಬಾಯಿ ಪ್ರತಿಭಟನೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅನೇಕ ವೃದ್ಧರು ಹಾಗೂ ಮಹಿಳೆಯರು ಸಹ ಪ್ರತಿಭಟನೆ ಸ್ಥಳದಲ್ಲಿದ್ದಾರೆ.
‘ಜಮೀನು ಕಬಳಿಸುವ ವ್ಯಕ್ತಿಗಳು, ನನಗೆ ಹಾಗೂ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಜಮೀನು ವಾಪಸು ಕೊಡಿಸುವವರೆಗೂ ಹೋರಾಟ ಮಾಡುತ್ತೇನೆ. ಚಳಿ ಜ್ವರ ಬಂದರೂ ವೇದಿಕೆಯಲ್ಲೇ ಮಲಗಿದ್ದೆ. ನ್ಯಾಯ ಸಿಗುವವರೆಗೂ ಊರಿಗೆ ಹೋಗುವುದಿಲ್ಲ’ ಎಂದು ನೀಲಾಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.