ಬುಧವಾರ, ಆಗಸ್ಟ್ 17, 2022
25 °C

ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕ: ಜನರ ನಿರೀಕ್ಷೆಗಳೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ಚುನಾಯಿತ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಸರ್ಕಾರ ಪಾಲಿಕೆಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ಚುನಾಯಿತ ಸದಸ್ಯರು ಇಲ್ಲದ ಈ ಅವಧಿಯಲ್ಲಿ ಜನರು ಅಧಿಕಾರಿಗಳಿಂದ ಬಯಸುವ ಆಡಳಿತ ಎಂಥಹದ್ದು. ತಮ್ಮ ಪ್ರದೇಶದ ಸಮಸ್ಯೆಗಳಿಗೆ ಹಾಗೂ ಅಹವಾಲುಗಳಿಗೆ ಅಧಿಕಾರಿಗಳು ಹೇಗೆ ಸ್ಪಂದಿಸಬೇಕು ಎಂದು ಜನ ಬಯಸುತ್ತಾರೆ ಎಂಬ ಬಗ್ಗೆ 'ಪ್ರಜಾವಾಣಿ' ಪ್ರತಿಕ್ರಿಯೆಗಳನ್ನು ಆಹ್ವಾನಿಸಿತ್ತು. ಇದಕ್ಕೆ  ಓದುಗರು ಕಳುಹಿಸಿರುವ ಪ್ರತಿಕ್ರಿಯೆಗಳಲ್ಲಿ ಆಯ್ದ ಕೆಲವು ಇಲ್ಲಿವೆ.

‘ತಗ್ಗುಪ್ರದೇಶಗಳಲ್ಲಿ ಮಳೆ ಹಾನಿ ತಡೆಯಿರಿ’

ಮಳೆಗಾಲ ಬಂದರೆ ನಗರದ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಳ್ಳುತ್ತವೆ. ಈ ಪ್ರದೇಶಗಳಲ್ಲಿ ಮಧ್ಯಮವರ್ಗದ ಜನ ಹೆಚ್ಚಾಗಿ ನೆಲೆಸಿದ್ದು, ಮಳೆಯಿಂದ ಸಂಕಷ್ಟ ಅನುಭವಿಸುತ್ತಾರೆ. ಇಂತಹ ಪ್ರದೇಶಗಳು ಮಳೆಯಿಂದ ಹಾನಿಯಾಗದಂತೆ ತಡೆಯಬೇಕು.

ಶ್ರೀನಿವಾಸ್, ಹೆಣ್ಣೂರು
---

'ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಿ'

ಪಾಲಿಕೆಯ ಚುನಾಯಿತ ಸದಸ್ಯರು ಏನು ಅಭಿವೃದ್ಧಿ ಮಾಡಿದ್ದಾರೋ ಗೊತ್ತಿಲ್ಲ. ಡಾಂಬರು ಕಾಣದ ಹಲವು ರಸ್ತೆಗಳು ದಶಕಗಳಿಂದ ಹಾಗೆಯೇ ಇವೆ. ಮಳೆಗಾಲದಲ್ಲಿ ಗುಂಡಿಗಳಿಂದ ಕೂಡಿರುವ ಈ ರಸ್ತೆಗಳಲ್ಲಿ ವಾಹನ ಸವಾರರು ಭೀತಿಯಲ್ಲೇ ಸಂಚರಿಸುತ್ತಾರೆ. ಕಗ್ಗತ್ತಲಿನಲ್ಲಿರುವ ರಸ್ತೆಗಳಲ್ಲಿ ಬೆಳಕು ಮೂಡಿಸಿ.

ಮಂಜುನಾಥ್, ಕಾಳಿಕಾನಗರ
---

'ಬೆಂಗಳೂರೇ ಕೆರೆಯಂತಾಗುವುದನ್ನು ತಪ್ಪಿಸಿ'

ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪ ಈಗ ಇಲ್ಲ. ಈಅವಕಾಶ ಬಳಸಿ ರಾಜಕಾಲುವೆ ಒತ್ತುವರಿಗಳನ್ನು ಕೂಡಲೇ ತೆರವುಗೊಳಿಸಬೇಕು. ಮಳೆ ನೀರು ನೇರವಾಗಿ ಕೆರೆಗಳನ್ನು ಸೇರುವಂತೆ ಮಾಡಬೇಕು. ಬೆಂಗಳೂರಿನಲ್ಲಿ ಕೆರೆಗಳು ಇವೆ ಎನ್ನಬೇಕೇ ಹೊರತು, ಬೆಂಗಳೂರೇ ಕೆರೆಯಂತಾಗುವುದನ್ನು ತಪ್ಪಿಸಬೇಕು.

ಪಿ.ಎಂ.ಗ್ರೀಷ್ಮ,ಕುಮಾರಸ್ವಾಮಿ ಬಡಾವಣೆ

---

'ಅಗೆದ ರಸ್ತೆಯಲ್ಲೇ ಹರಿಯುತಿದೆ ಮಳೆನೀರು'

ಸಂಪಂಗಿರಾಮನಗರದಲ್ಲಿ ಒಳಚರಂಡಿ ನಿರ್ಮಿಸಿ ಮೂರು ವರ್ಷಗಳಾಗಿವೆ. ಆದರೆ, ಅಗೆದಿರುವ ರಸ್ತೆ, ಮಳೆನೀರು ಹರಿಯುವ ಕಾಲುವೆಯಾಗಿ ಮಾರ್ಪಟ್ಟಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ. ಕೂಡಲೇ ಈ ರಸ್ತೆ ಹಾಗೂ ಇದೇ ರೀತಿ ಹದಗೆಟ್ಟಿರುವ ರಸ್ತೆಗಳನ್ನು ಪಾಲಿಕೆ ಸರಿಪಡಿಸಬೇಕು.

ರಾಮಚಂದ್ರಯ್ಯ, ಸಂಪಂಗಿರಾಮ ನಗರ
---

'ಕಸ ವಿಲೇವರಿಗೆ ಶಾಶ್ವತ ಪರಿಹಾರ ಒದಗಿಸಿ'

ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು. ವಾರ್ಡ್‍ಮಟ್ಟದಲ್ಲೇ ಕಸ ಸಂಸ್ಕರಣೆಯಾಗಬೇಕು. ಕಸ ನಿರ್ವಹಣೆ ಉತ್ತಮವಾಗಿ ನಿರ್ವಹಿಸಿದವರಿಗೆ ಪ್ರೋತ್ಸಾಹಿಸಬೇಕು.

ಸುನಿಲ್ ಕುಮಾರ್, ವಿಜಯನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು