ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯ ಒಡಲ ದನಿ: ದಾಹ ತಣಿಸಲು ಕೆರೆಗಳ ಬಳಕೆ ಸಾಧ್ಯವೆ?

Last Updated 11 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಜನರ ಕುಡಿಯುವ ನೀರಿನ ಬೇಡಿಕೆ ಪೂರೈಸುವುದಕ್ಕಾಗಿ ಮೇಕೆದಾಟು ಸಮಾನಾಂತರ ಜಲಾಶಯ ನಿರ್ಮಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್‌ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಬೆಂಗಳೂರಿನ ನೀರಿನ ಬೇಡಿಕೆ ಪೂರೈಸಲು ಇಲ್ಲಿರುವ ಕೆರೆಗಳ ಬಳಕೆ ಸಾಧ್ಯವಿಲ್ಲವೆ? ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.

ಸಹಸ್ರಾರು ಕೋಟಿ ರೂಪಾಯಿ ವ್ಯಯಿಸಿ ಹೊಸ ಅಣೆಕಟ್ಟೆ ನಿರ್ಮಿಸುವ ಯೋಜನೆಯ ಬದಲಿಗೆ ನಗರದಲ್ಲೇ ಇರುವ ಕೆರೆಗಳನ್ನು ಪುನರುಜ್ಜೀವನಗೊಳಿಸಿದರೆ ನೀರಿನ ಕೊರತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ ಎಂಬುದು ಹಲವರ ಅಭಿಪ್ರಾಯ. ಆದರೆ, ಕೆರೆ ನೀರಿನ ಬಳಕೆ, ಕೆರೆಗಳ ಪುನರುಜ್ಜೀವನದ ಕಾರ್ಯಸಾಧ್ಯತೆಯ ಬಗ್ಗೆಯೂ ಹಲವರಲ್ಲಿ ಅನುಮಾನಗಳಿವೆ. ಈ ಕುರಿತು ವಿವಿಧ ಕ್ಷೇತ್ರದ ತಜ್ಞರ ಅಭಿಪ್ರಾಯ ಈ ವಾರದ ‘ರಾಜಧಾನಿಯ ಒಡಲ ದನಿ’ಯಲ್ಲಿ...

‘ಕೆರೆಗಳ ಅಭಿವೃದ್ಧಿಯಿಂದ ಪರಿಹಾರ ಸಾಧ್ಯ’

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ವಾರ್ಷಿಕ 700 ಮಿಲಿಮೀಟರ್‌ನಿಂದ 850 ಮಿಲಿ ಮೀಟರ್‌ವರೆಗೂ ಮಳೆ ಬೀಳುತ್ತದೆ. ಮಳೆಯಿಂದಲೇ 15 ಟಿಎಂಸಿ ಅಡಿಗಳಷ್ಟು ನೀರು ಲಭಿಸುತ್ತದೆ. ಸದ್ಯ ನಗರದ ಒಟ್ಟು ನೀರಿನ ಬೇಡಿಕೆ 18 ಟಿಎಂಸಿ ಅಡಿಗಳಷ್ಟಿದೆ. ಇಲ್ಲಿ ಬೀಳುವ ಮಳೆಯ ನೀರನ್ನು ಕೆರೆಗಳಲ್ಲಿ ಹಿಡಿದಿಟ್ಟು, ಬಳಸಿಕೊಂಡರೆ ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಿದೆ.

ಮೇಕೆದಾಟು ಯೋಜನೆ ದುಬಾರಿಯಾದುದು. ಅಲ್ಲದೇ ಕಾವೇರಿ ವನ್ಯಜೀವಿಧಾಮದ ಹೆಚ್ಚಿನ ಜಮೀನು ಯೋಜನೆಗಾಗಿ ಮುಳುಗಡೆಯಾಗುತ್ತದೆ. ಎದುರಿನಲ್ಲಿ ತಮಿಳುನಾಡು ರಾಜ್ಯವನ್ನು ಇರಿಸಿಕೊಂಡು ನೋಡಿದಾಗ ಭಾವನಾತ್ಮಕವಾಗಿ ಈ ಯೋಜನೆ ಒಪ್ಪಿತವಾಗಬಹುದು. ಆದರೆ, ಅರಣ್ಯ ಮತ್ತು ಪರಿಸರ ಸಂರಕ್ಷಣಾ ಕಾಯ್ದೆಗಳಲ್ಲಿನ ನಿರ್ಬಂಧಗಳನ್ನು ಮೀರಿ ಅನುಷ್ಠಾನಕ್ಕೆ ತರುವುದು ಕಷ್ಟ.

1800ನೇ ಇಸವಿವರೆಗೂ ನಗರದಲ್ಲಿ 1,452 ಕೆರೆಗಳಿದ್ದವು. ಈಗ 193 ಕೆರೆಗಳಷ್ಟೇ ಉಳಿದಿವೆ. ಈ ಕೆರೆಗಳಲ್ಲೂ ಮಳೆಯ ನೀರನ್ನು ಸಂಗ್ರಹಿಸಿ, ಬಳಸಲು ಸಾಧ್ಯವಿದೆ. ನಗರದಲ್ಲಿ 18 ಟಿಎಂಸಿ ಅಡಿಯಷ್ಟು ಕೊಳಚೆ ನೀರು ಹರಿಯುತ್ತದೆ. ಅದನ್ನು ಸಂಸ್ಕರಿಸಿದರೆ 16 ಟಿಎಂಸಿ ಅಡಿಯಷ್ಟು ಬಳಕೆಗೆ ಯೋಗ್ಯವಾದ ನೀರು ಲಭಿಸುತ್ತದೆ. ಜಕ್ಕೂರು ಕೆರೆಯ ಪುನರುಜ್ಜೀವನಕ್ಕೆ ಅನುಸರಿಸಿದ ವಿಧಾನವನ್ನು ಬಳಸಿಕೊಂಡರೆ ಅತ್ಯಂತ ಶುದ್ಧವಾದ ನೀರನ್ನು ಪಡೆಯಲು ಸಾಧ್ಯ. ನಮ್ಮ ಅಧ್ಯಯನ ಮತ್ತು ಅನುಭವದಲ್ಲೇ ಇದು ಸಾಬೀತಾಗಿದೆ. ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಷ್ಟೆ.

– ಪ್ರೊ.ಟಿ.ವಿ. ರಾಮಚಂದ್ರ,ಪ್ರಾಧ್ಯಾಪಕ, ಐಐಎಸ್‌ಸಿ

ಕೊಳವೆಬಾವಿಗಳಲ್ಲಿನ ನೀರಿನ ಮಟ್ಟ ಹೆಚ್ಚುವಂತಾಗಬೇಕು

ಬೆಂಗಳೂರಿನಲ್ಲಿರುವ ಕೆರೆಗಳ ನೀರನ್ನು ನೇರವಾಗಿ ಕುಡಿಯುವುದಕ್ಕೆ ಬಳಸುವುದಕ್ಕೆ ಕೆಲವು ಸಮಸ್ಯೆಗಳಿವೆ. ಬಹುತೇಕ ಎಲ್ಲ ಕೆರೆಗಳಿಗೂ ಕೊಳಚೆ ನೀರು ನೇರವಾಗಿ ಸೇರುತ್ತಿದೆ. ಈ ಕೆರೆಗಳ ನೀರನ್ನು ಸಂಪೂರ್ಣ ಶುದ್ಧವಾದ ಸ್ವರೂಪಕ್ಕೆ ಪರಿವರ್ತಿಸುವುದು ಕಷ್ಟದ ಕೆಲಸ.

ದೊಡ್ಡ ಯೋಜನೆಗಳ ಬದಲಿಗೆ ನಗರದಲ್ಲಿನ ಕೆರೆಗಳನ್ನೇ ಅಭಿವೃದ್ಧಿಪಡಿಸಿ ಕುಡಿಯುವ ನೀರು ಪೂರೈಕೆಗೆ ಬಳಸಬೇಕು ಎಂದು ಕೆಲವರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ, ಈ ದಿಸೆಯಲ್ಲಿ ಹೆಚ್ಚೇನೂ ಅಧ್ಯಯನಗಳು ನಡೆದಿಲ್ಲ. ಯೋಜನೆಯ ಕಾರ್ಯಸಾಧ್ಯತೆಯ ಕುರಿತೂ ಪರಿಶೀಲನೆ ಆಗಿಲ್ಲ.

ಈಗ ನಗರದ ಬಹುಪಾಲು ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಕುಡಿಯುವ ನೀರು ಲಭ್ಯವಿದೆ. ಇಂತಹ ಸ್ಥಿತಿಯಲ್ಲಿ ಜನರು ಕೆರೆಯ ನೀರಿನ ಸೇವನೆಗೆ ಒಲವು ತೋರುವ ಸಾಧ್ಯತೆಯೂ ಕಡಿಮೆ ಇದೆ. ಪ್ರಾಯೋಗಿಕವಾಗಿ ಸಂಸ್ಕರಿಸಿದ ನೀರನ್ನು ಒಮ್ಮೆ ರುಚಿ ನೋಡಬಹುದು. ನಿತ್ಯ ಬಳಸಲು ಆಸಕ್ತಿ ತೋರುವವರು ಕಡಿಮೆ.

ನಗರದಲ್ಲಿ ಕೆಲವೇ ಕೆರೆಗಳು ಮಾತ್ರ ಕೊಳಚೆ ನೀರಿನಿಂದ ಮುಕ್ತವಾಗಿವೆ. ಕೆಲವು ಕೆರೆಗಳ ಜಲಾನಯನ ಪ್ರದೇಶವೂ ಚೆನ್ನಾಗಿದೆ. ಅಂತಹ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕೆರೆಗಳ ನೀರು ಭೂಮಿಯಲ್ಲಿ ಇಂಗಿ, ಕೊಳವೆಬಾವಿಗಳಲ್ಲಿನ ನೀರಿನ ಮಟ್ಟ ಹೆಚ್ಚುವಂತಾಗಬೇಕು. ಕೊಳವೆ ಬಾವಿಗಳ ಮೂಲಕ ಮೇಲೆತ್ತಿದ ನೀರನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

– ಡಾ.ಯು.ವಿ. ಸಿಂಗ್‌,ನಿವೃತ್ತ ಐಎಫ್‌ಎಸ್‌ ಅಧಿಕಾರಿ

‘ಮುಂಬೈ ಮಾದರಿ ಅನುಸರಿಸಬೇಕು’

ಬೆಂಗಳೂರಿನ ನೀರಿನ ಬೇಡಿಕೆ ಪೂರೈಸಲು ಕೆರೆಗಳ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಆದರೆ, ಅದರ ಅನುಷ್ಠಾನಕ್ಕೆ ಯಾರೂ ಆಸಕ್ತಿ ತೋರಿಲ್ಲ. ಈಗ ‘ಕನ್ನಡ ರಾಷ್ಟ್ರೀಯತೆ’ಯ ಭಾವನಾತ್ಮಕ ಬಲ ಪಡೆದುಕೊಂಡು ಮೇಕೆದಾಟು ಯೋಜನೆ ಅನುಷ್ಠಾನದ ಕುರಿತು ಚರ್ಚೆ ನಡೆಯುತ್ತಿದೆ. 16,000 ಎಕರೆ ಅರಣ್ಯ ನಾಶಕ್ಕೆ ಈ ಯೋಜನೆ ಕಾರಣವಾಗಲಿದೆ ಎಂಬ ಅಂದಾಜಿದೆ.

ನಗರದಲ್ಲಿ 1,000 ಮಿಲಿ ಮೀಟರ್‌ವರೆಗೂ ಮಳೆ ಬೀಳುತ್ತಿದೆ. 1,000 ಚದರ ಕಿ.ಮೀ. ವಿಸ್ತರಿಸಿಕೊಂಡಿರುವ ಬೆಂಗಳೂರಿನಲ್ಲಿ ಇಷ್ಟೊಂದು ಪ್ರಮಾಣದ ಮಳೆಯ ನೀರನ್ನು ಹಿಡಿದಿಡಲು ಸರಿಯಾದ ಕೆರೆಗಳೇ ಇಲ್ಲ. ಹೊಸ ಕೆರೆಗಳನ್ನು ನಿರ್ಮಿಸುವ ಪ್ರಸ್ತಾವ ನಗರ ಮಹಾ ಯೋಜನೆಯಲ್ಲಿ ಕಾಣಿಸುವುದೇ ಇಲ್ಲ. ಬೆಂಗಳೂರು ಎತ್ತರದಲ್ಲಿರುವುದರಿಂದ ಮಳೆ ನೀರು ಹರಿದು ಸಮುದ್ರದ ಪಾಲಾಗುತ್ತಿದೆ. ನಗರದಲ್ಲಿರುವ ಕರೆಗಳ ಜತೆಗೆ ಹೊಸ ಕೆರೆಗಳ ನಿರ್ಮಾಣದ ಬಗ್ಗೆಯೂ ಯೋಚಿಸಬೇಕು. ಮುಂಬೈ ಮಹಾನಗರಕ್ಕೆ ಯಾವುದೇ ನದಿಗಳಿಂದ ನೀರು ಪೂರೈಸುವುದಿಲ್ಲ. ಅಲ್ಲಿನ ಆರು ಕೆರೆಗಳೇ ಕುಡಿಯುವ ನೀರಿನ ಮೂಲ. ಅಂತಹ ಮಾದರಿಯನ್ನು ಬೆಂಗಳೂರು ನಗರಕ್ಕೂ ಅಳವಡಿಸಬೇಕು. ಜನರಿಗೆ ನೀರು ಬೇಕಿದೆ. ಭಾವನಾತ್ಮಕ ವಿಚಾರವನ್ನು ಮುನ್ನೆಲೆಗೆ ತಂದು ಸ್ಥಳೀಯ ಸಂಪನ್ಮೂಲಗಳ ಬಳಕೆಯ ಚರ್ಚೆಯನ್ನು ಹಿನ್ನೆಲೆಗೆ ಸರಿಸಬಾರದು.

– ಕ್ಷಿತಿಜ್‌ ಅರಸ್‌,ಪ್ರಾಧ್ಯಾಪಕ, ಎನ್‌ಎಲ್‌ಎಸ್‌ಐಯು

‘ಸ್ಥಳೀಯರ ಸಹಭಾಗಿತ್ವದ ಯೋಜನೆ ಬೇಕು’

ಸ್ಥಳೀಯರ ಸಹಕಾರದಲ್ಲಿ ಕೆರೆಗಳ ಪುನರುಜ್ಜೀವನ ಮತ್ತು ನಿರ್ವಹಣೆ ಮಾಡಿದರೆ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬುದಕ್ಕೆ ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿ ಪುರಾವೆಯನ್ನು ಒದಗಿಸಿದೆ. 2010ರಿಂದ ಈ ಕೆರೆಯನ್ನು ಪುನರುಜ್ಜೀವನಗೊಳಿಸಲಾಗಿದೆ. ಆ ಬಳಿಕ ಸುತ್ತಲಿನ ನೂರಾರು ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಉತ್ತಮ ಗುಣಮಟ್ಟದ ನೀರು ಕೂಡ ಲಭಿಸುತ್ತಿದೆ.

ಕೆರೆಗಳ ಅಭಿವೃದ್ಧಿಯಿಂದ ನಗರದಲ್ಲಿ ಪ್ರವಾಹ ಉಂಟಾಗುವುದನ್ನು ತಡೆಯಬಹುದು. ಕೆರೆಯ ಸುತ್ತ ಗಿಡಗಳನ್ನು ನೆಡುವುದರಿಂದ ನಗರದ ಉಷ್ಣಾಂಶ ತಗ್ಗುತ್ತದೆ. ಉತ್ತಮವಾದ ಗಾಳಿಯೂ ಲಭಿಸುತ್ತದೆ. ಎಲ್ಲ ಕೆರೆಗಳಲ್ಲೂ ಈ ಮಾದರಿಯ ಕೆಲಸ ಮಾಡಲು ಸಾಧ್ಯವಿದೆ. ಆದರೆ, ಸ್ಥಳೀಯರ ಸಂಪೂರ್ಣ ಸಹಭಾಗಿತ್ವದಲ್ಲೇ ಯೋಜನೆ ರೂಪಿಸಿ ಅನುಷ್ಢಾನಕ್ಕೆ ತರಬೇಕು.

– ಉಷಾ ರಾಜಗೋಪಾಲನ್‌,ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿ ಟ್ರಸ್ಟ್‌ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT