ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮಳೆ ನೀರು ಶೇಖರಣೆ ಭವಿಷ್ಯಕ್ಕೆ ಪೂರಕ: ತಜ್ಞರು ಅಭಿಪ್ರಾಯ

ಕಾವೇರಿ ಮೇಲೆ ಅವಲಂಬನೆ ಕಡಿತ; 50 ವರ್ಷ ನಗರದಲ್ಲಿ ನೀರಿನ ಸಮಸ್ಯೆ ಇಲ್ಲ!
Published 4 ಮಾರ್ಚ್ 2024, 23:30 IST
Last Updated 4 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ನೀರು ಶೇಖರಣೆ, ಎಲ್ಲೆಡೆ ಇಂಗು ಗುಂಡಿಗಳ ಮೂಲಕ ಅಂತರ್ಜಲ ವೃದ್ಧಿ, ಜಲಮೂಲಗಳ ರಕ್ಷಣೆಗೆ ಆದ್ಯತೆ ನೀಡಿದರೆ ಮುಂದಿನ 50 ವರ್ಷ ನಗರದಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೀರು ಸರಬರಾಜಿನಲ್ಲಿ ಸೋರಿಕೆಯನ್ನು ಕಡಿಮೆ ಮಾಡಿ, ಈ ವ್ಯರ್ಥವಾಗುತ್ತಿರುವ ನೀರನ್ನು ಬಳಕೆ ಮಾಡಿಕೊಂಡರೆ ನಿತ್ಯ 20 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದು ಎಂದು ಅಂಕಿ–ಅಂಶಗಳ ಸಹಿತ ಸಲಹೆ ನೀಡಿದ್ದಾರೆ.

ಮಳೆ ನೀರನ್ನು ಸಂಗ್ರಹಿಸಿ, ಅದನ್ನು ಬಳಸಿಕೊಂಡರೆ, ಕಾವೇರಿ ನೀರನ್ನು ಹೆಚ್ಚಾಗುವ ಜನಸಂಖ್ಯೆಗೂ ಹಂಚಬಹುದು. ಮಳೆ ನೀರು ಸಂಗ್ರಹಿಸಿ, ಒಳಚರಂಡಿ ನೀರನ್ನು ಸಂಸ್ಕರಿಸಿದರೆ 27 ಟಿಎಂಸಿ ಅಡಿ ನೀರು ಲಭ್ಯವಾಗುತ್ತದೆ. ನದಿಯಿಂದ ಬರುವ 22 ಟಿಎಸಿಸಿ ಅಡಿ ನೀರೂ ಸೇರಿದರೆ 49 ಟಿಎಂಸಿ ನೀರು ನಗರಕ್ಕೆ ಲಭ್ಯವಾದಂತಾಗುತ್ತದೆ ಎಂದು ನಿವೃತ್ತ ಹಿರಿಯ ಭೂಜಲವಿಜ್ಞಾನಿ ಟಿ.ಎಂ.ಶಿವಶಂಕರ್ ಹೇಳಿದರು.

ನಗರದ ಜನತೆ ಕುಡಿಯಲು ಶೇ 10ರಷ್ಟನ್ನು ನೀರು ಬಳಸಿದರೆ, ಉಳಿದ ಶೇ 90ರಷ್ಟು ಇತರೆ ಬಳಕೆಗೆ ವ್ಯಯವಾಗುತ್ತಿದೆ. ಈ ಇತರೆ ಬಳಕೆಗೆ ಮಳೆ ನೀರು, ಸಂಸ್ಕರಿಸಿದ ನೀರನ್ನು ಪೂರೈಸಿದರೆ ನೀರಿನ ಸ್ವಾವಲಂಬನೆ ಸಾಧ್ಯವಾಗುತ್ತದೆ ಎಂದು ಸಾಧ್ಯತಾ ಕಾರ್ಯಕ್ರಮಗಳೊಂದಿಗೆ ವಿವರಿಸಿದರು.

ಜಲ ಸ್ವಾವಲಂಬನೆಗೆ ತಜ್ಞರ ಸಲಹೆಗಳು

*ಮನೆಗಳಲ್ಲಿ ಸಿಮೆಂಟ್‌ ಟ್ಯಾಂಕ್‌ ಅಥವಾ ಪ್ಲಾಸ್ಟಿಕ್ ಟ್ಯಾಂಕ್‌ಗಳಲ್ಲಿ ಮಳೆಯ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳಬೇಕು. ಇದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಬೇಕು. ಈ ಪದ್ಧತಿ ಅನುಸರಿಸುವ ನಾಗರಿಕರಿಗೆ ತಿಂಗಳ ನೀರಿನ ಬಿಲ್‌ನಲ್ಲಿ ಭಾರಿ ರಿಯಾಯಿತಿ ನೀಡಬೇಕು.

* ಬರಿದಾಗುತ್ತಿರುವ ಅಂತರ್ಜಲ ಮರು ಪೂರಣಗೊಳಿಸುವುದನ್ನು ಕಡ್ಡಾಯಗೊಳಿಸಬೇಕು. ಮನೆಗಳ ಆವರಣ ಸೇರಿದಂತೆ ನಗರದೆಲ್ಲೆಡೆ ಮಳೆಯ ನೀರನ್ನು ನೆಲದಾಳಕ್ಕೆ ಇಂಗಿಸಿ ಭೂಜಲ ಸಂಪತ್ತನ್ನು ವೃದ್ಧಿಸಬೇಕು.

* ಬೆಂಗಳೂರು ನಗರದ ವಿಸ್ತೀರ್ಣ ಅಂದಾಜು 860 ಚದರ ಕಿಲೋಮೀಟರ್‌. ಇಷ್ಟು ಪ್ರದೇಶದಲ್ಲಿ ಪ್ರತಿ ವರ್ಷ ಬೀಳುವ ಅಂದಾಜು 850 ಎಂಎಂ ಮಳೆಯಿಂದ 25 ಟಿಎಂಸಿ ಅಡಿಯಿಂದ 28 ಟಿಎಂಸಿ ಅಡಿ ನೀರನ್ನು ಶೇಖರಿಸಬಹುದು.‌ ರಸ್ತೆಯಲ್ಲಿ ಹರಿಯುವ ಮಳೆ ನೀರಿಗೆ ಚರಂಡಿ ನೀರು ಸೇರದಂತೆ ಜಾಗ್ರತೆ ವಹಿಸಿ ಅದನ್ನು ಸಂಗ್ರಹಿಸುವ ಜವಾಬ್ದಾರಿ ಜಲಮಂಡಳಿಗೆ ವಹಿಸಬೇಕು.

* ಬೆಂಗಳೂರು ಹೊರ ವಲಯದಲ್ಲಿ ನೀರು ಹಿಡಿದಿಡುವ ದೊಡ್ಡ ಸಿಮೆಂಟ್ ನಾಲೆಗಳನ್ನು ನಿರ್ಮಿಸಿ ಕಾವೇರಿ ನೀರಿಗೆ ನೀಡಲಾಗುವ ಆಧುನಿಕ ತಂತ್ರಜ್ಞಾನದ ಚಿಕಿತ್ಸೆ ನೀಡಿದರೆ ಅದನ್ನು ಕುಡಿಯಲು ಬಳಸಬಹುದು.

* ನಗರದಲ್ಲಿ ನಿತ್ಯ ಹರಿಯುವ ಸುಮಾರು ಎರಡು ಸಾವಿರ ಎಂಎಲ್‌ಡಿ ತ್ಯಾಜ್ಯ ನೀರನ್ನು ತೃತೀಯ ಹಂತದಲ್ಲಿ ಸಂಸ್ಕರಣೆ ಮಾಡಬೇಕು. ಅದನ್ನು ನಿತ್ಯ ಬಳಕೆಗೆ ಪೂರೈಕೆ ಮಾಡಬೇಕು.

* ಬೆಂಗಳೂರು ಸುತ್ತ ಹೊರ ವಲಯಗಳಲ್ಲಿ ಮೂರರಿಂದ ಐದು ಟಿಎಂಸಿ ಅಡಿ ನೀರು ಶೇಖರಣೆ ಸಾಮರ್ಥ್ಯದ ಸರೋವರಗಳನ್ನು ನಿರ್ಮಿಸಿ ಅಲ್ಲಿಂದ ನೀರನ್ನು ನಗರಕ್ಕೆ ಪೂರೈಕೆ ಮಾಡಬೇಕು.

ಶೇ 60ರಷ್ಟು ವಿದ್ಯುತ್‌ ಶುಲ್ಕ!

ಬೆಂಗಳೂರು ನಗರದಲ್ಲಿ ಒಂದು ದಿನ ಎಷ್ಟು ಪ್ರಮಾಣದ ವಿದ್ಯುತ್‌ ಬಳಕೆಯಾಗುತ್ತದೆಯೋ ಅದರ ಮೂರನೇ ಒಂದು ಭಾಗದಷ್ಟು ವಿದ್ಯುತ್‌ ಅನ್ನು ನಗರಕ್ಕೆ ನೀರನ್ನು ಪಂಪ್‌ ಮಾಡಲು ಬಳಸಲಾಗುತ್ತಿದೆ. ಜಲಮಂಡಳಿಯ ಶೇ 60ರಷ್ಟು ಆದಾಯ ವಿದ್ಯುತ್‌ ಶುಲ್ಕದ ರೂಪದಲ್ಲಿ ಪಾವತಿಸಲಾಗುತ್ತದೆ ಎಂದು ಟಿ.ಎಂ.ಶಿವಶಂಕರ್ ಮಾಹಿತಿ ನೀಡಿದರು.

‘ಗಾಳಿಯಿಂದ ನೀರು ಪೂರೈಸಲಿ’

‘ಗಾಳಿಯಿಂದ ನೀರನ್ನು ಹೀರಿಕೊಂಡು ಸಂಸ್ಕರಿಸುವ ಏರ್ ಫಿಲ್ಟರ್ ಉಪಕರಣವನ್ನು ರಸ್ತೆಗಳಲ್ಲಿ ಅಳವಡಿಸಿ ಕುಡಿಯುವ ನೀರನ್ನು ಪೂರೈಸಬೇಕು. ಈ ನೀರಿನಲ್ಲಿ ಬ್ಯಾಕ್ಟೀರಿಯ ಇರುವುದಿಲ್ಲ ಹಾನಿಕರ ರಾಸಾಯನಿಕ ಧಾತುಗಳು ಕರಗಿರುವುದಿಲ್ಲ. ಇಂತಹ ಉಪಕರಣಗಳನ್ನು ತೆಲಂಗಾಣ ಹೈದರಾಬಾದ್‌ಗಳಲ್ಲಿ ಅಳವಡಿಸಿ ‘ಮೇಘದೂತ್‌ ಕಿಯೋಸ್ಕ್‌’ ಸ್ಥಾಪಸಲಾಗಿದೆ. ಲೀಟರ್‌ ಆಧಾರದಲ್ಲಿ ಶುಲ್ಕವನ್ನೂ ಸಂಗ್ರಹಿಸಲಾಗುತ್ತಿದೆ. ಇಂತಹ ಪ್ರಯತ್ನ ಇಲ್ಲೂ ಆಗಬೇಕು’ ಎಂದು ನಿವೃತ್ತ ಹಿರಿಯ ಭೂಜಲವಿಜ್ಞಾನಿ ಟಿ.ಎಂ. ಶಿವಶಂಕರ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT